ಉತ್ತರ ಕರ್ನಾಟಕ ಭಾಗದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು: ಎಚ್‌.ಕೆ. ಪಾಟೀಲ

| Published : Apr 19 2024, 01:11 AM IST / Updated: Apr 19 2024, 10:50 AM IST

Congress flag
ಉತ್ತರ ಕರ್ನಾಟಕ ಭಾಗದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು: ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯದಾನ ಕಾಯಿದೆ ಜಾರಿಗೆ ತಂದು ಬಡವರ ಪ್ರಕರಣಗಳನ್ನು ಆರು ತಿಂಗಳಲ್ಲಿ ಇತ್ಯರ್ಥಪಡಿಸುವ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ಕಾಯಿದೆಗೆ ರಾಜ್ಯಪಾಲರು ಸಹ ಅನುಮೋದನೆ ನೀಡಿದ್ದಾರೆ.

ಹುಬ್ಬಳ್ಳಿ:  ಉತ್ತರ ಕರ್ನಾಟಕ 12 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಲಿದೆ ಎಂದು ರಾಜ್ಯ ಕಾನೂನು ಸಚಿವ ಎಚ್‌.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಭಾವನೆಗಳ ಜತೆಗೆ ಆಟವಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡಿಕೊಂಡು ಬರುತ್ತಿದೆ. ಆದರೆ ಕಾಂಗ್ರೆಸ್‌ ಕೇವಲ 10 ತಿಂಗಳಲ್ಲಿ ರಾಜ್ಯದ ಕೋಟ್ಯಂತರ ಫಲಾನುಭವಿಗಳಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜ್ಯೋತಿ, ಯುವನಿಧಿಯಂಥ ಯೋಜನೆ ಜಾರಿಗೆ ತಂದು ಐತಿಹಾಸಿಕ ಸಾಧನೆ ಮಾಡಿದೆ. ಯೋಜನೆ ಅನುಷ್ಠಾನದಲ್ಲಿ ಯಾವುದೇ ಭ್ರಷ್ಟಾಚಾರ ಆಗದಂತೆ ನೋಡಿಕೊಂಡಿದ್ದೇವೆ ಎಂದರು.

ನ್ಯಾಯದಾನ ಕಾಯಿದೆ ಜಾರಿಗೆ ತಂದು ಬಡವರ ಪ್ರಕರಣಗಳನ್ನು ಆರು ತಿಂಗಳಲ್ಲಿ ಇತ್ಯರ್ಥಪಡಿಸುವ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ಕಾಯಿದೆಗೆ ರಾಜ್ಯಪಾಲರು ಸಹ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು.

ಕಳಸಾ-ಬಂಡೂರಿ: ಪ್ರತಿ ಚುನಾವಣೆಯಲ್ಲೂ ಕಳಸಾ-ಬಂಡೂರಿ ಯೋಜನೆಯನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಅಧಿಕಾರ ಇದ್ದಾಗಲೂ ಯೋಜನೆ ಜಾರಿಗೊಳಿಸುವ ಕೆಲಸ ಮಾಡಿಲ್ಲ ಎಂದು ಪಾಟೀಲ ಹರಿಹಾಯ್ದರು.

ಮಹದಾಯಿ ಮತ್ತು ಕಳಸಾ-ಬಂಡೂರಿ ಹೆಸರಿನಲ್ಲಿ ಬಿಜೆಪಿ ಸುಳ್ಳು ಹೇಳುತ್ತಲೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಗದಗ ಜಿಲ್ಲೆಗೆ ಬಂದಾಗ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಸಿಎಂಗಳ ಸಭೆ ಕರೆದು ರಾಜಿ ಸಂಧಾನದ ಮೂಲಕ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದನ್ನು ಇಂದಿಗೂ ಕಾರ್ಯರೂಪಕ್ಕೆ ತಂದಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಗೋವಾ ಸರ್ಕಾರದ ಒಪ್ಪಿಗೆ ದೊರೆತಿದ್ದು, 75 ದಿನಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಟ್ವಿಟ್‌ ಹಾಗೂ ಪ್ರಕಟಣೆ ಹೊರಡಿಸುವ ಮೂಲಕ ಸುಳ್ಳು ಹೇಳಿದ್ದಾರೆ.

ಈಗ ಚುನಾವಣೆಯಲ್ಲಿ ಮಹದಾಯಿ ಹೋರಾಟಗಾರರ ಮತ ಕೇಳುವ ಯಾವುದೇ ನೈತಿಕತೆ ಬಿಜೆಪಿಗೆ ಇಲ್ಲ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಪ್ರಸಾದ್‌ ಅಬ್ಬಯ್ಯ, ಮಾಜಿ ಸಂಸದ ಐ.ಜಿ. ಸನದಿ, ಎ.ಎಂ. ಹಿಂಡಸಗೇರಿ, ಪಾಲಿಕೆ ವಿಪಕ್ಷ ನಾಯಕಿ ಸುವರ್ಣ ಕಲಕುಂಟ್ಲಾ, ಅನಿಲಕುಮಾರ ಪಾಟೀಲ, ಡಾ. ಶರಣಪ್ಪ ಕೊಟಗಿ, ದೀಪಕ ಚಿಂಚೋರೆ, ಯಾಸೀನ್‌ ಹಾವೇರಿಪೇಟ ಇದ್ದರು.

ಸುಪ್ರೀಂಗೆ ವರದಿ ನೀಡಿಬಿಜೆಪಿಗೆ ಒಂದು ಮತ ಹಾಕಿದರೆ ಅದು ಇವಿಎಂ ಮಶಿನ್‌ನಲ್ಲಿ ಎರಡು ಮತವಾಗಿ ದಾಖಲಾಗುತ್ತದೆ ಎಂಬ ಆರೋಪದ ಮೇರೆಗೆ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾದ ಪ್ರಕರಣದ ಬಗ್ಗೆ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತಾ ಅವರ ಪೀಠವು ವಿಚಾರಣೆ ನಡೆಸುತ್ತಿದೆ. ಚುನಾವಣಾ ಆಯೋಗವು ಯಾವುದೇ ನೆಪ ಹೇಳಿ ಕಾಲಹರಣ ಮಾಡದೇ, 24 ಗಂಟೆಯೊಳಗೆ ಸೂಕ್ತ ತನಿಖೆ ನಡೆಸಿ, 48 ಗಂಟೆಯೊಳಗೆ ಸುಪ್ರೀಂ ಕೋರ್ಟ್‌ಗೆ ವರದಿ ನೀಡಬೇಕು ಎಂದು ಸಚಿವ ಪಾಟೀಲ ಆಗ್ರಹಿಸಿದರು.