ಪ್ರಜ್ವಲ್‌ ಕರೆತನ್ನಿ: ಮೋದಿಗೆ ಸಿದ್ದರಾಮಯ್ಯ ಪತ್ರ

| Published : May 02 2024, 08:26 AM IST

Siddaramaiah

ಸಾರಾಂಶ

ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಪಡಿಸಿ ಸ್ವದೇಶಕ್ಕೆ ವಾಪಸ್‌ ಕರೆತರಲು ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಬೆಂಗಳೂರು : ಹಲವಾರು ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಹಾಲಿ ಸಂಸದ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹಾಸನ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಪಡಿಸಿ ಸ್ವದೇಶಕ್ಕೆ ವಾಪಸ್‌ ಕರೆತರಲು ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಪ್ರಜ್ವಲ್‌ ರೇವಣ್ಣ ಅಶ್ಲೀಲ ಟೇಪ್‌ ಪ್ರಕರಣ ವಿದೇಶಗಳ ಮಟ್ಟದಲ್ಲೂ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮೋದಿ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಪ್ರಜ್ವಲ್‌ ವಿರುದ್ಧದ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ವಹಿಸಿದೆ. ಎಸ್‌ಐಟಿ ಹಗಲು ರಾತ್ರಿ ತನಿಖೆ ನಡೆಸಿದೆ. ಈ ನಡುವೆ ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಕೆ ಮಾಡಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದು, ಅವರನ್ನು ತನಿಖೆಗೆ ಒಳಪಡಿಸಲು ರಾಜ್ಯಕ್ಕೆ ಕರೆತರಲು ಕೇಂದ್ರ ಗೃಹ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.

ಪ್ರಜ್ವಲ್‌ ವಿರುದ್ಧ ಲೈಂಗಿಕ ದೌರ್ಜನ್ಯ ಸಂಬಂಧ ಭಯಾನಕ ಮತ್ತು ಅವಮಾನಕರ ಆರೋಪಗಳು ಕೇಳಿಬಂದಿವೆ. ಈ ಪ್ರಕರಣ ದೇಶದ ಆತ್ಮಸಾಕ್ಷಿಯನ್ನು ಕಲಕಿದೆ. ಹೀಗಾಗಿ, ರಾಜ್ಯ ಸರ್ಕಾರವು ಏ.28ರಂದು ಸಿಐಡಿ ಅಡಿಯಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ಈ ಪ್ರಕರಣದ ತನಿಖೆಯನ್ನು ವಹಿಸಿದೆ. ಈಗಾಗಲೇ ತನಿಖೆ ಕೂಡ ಸರಿಯಾದ ಮಾರ್ಗದಲ್ಲಿ ಶುರುವಾಗಿದ್ದು ಸತ್ಯಾಂಶವನ್ನು ಎಸ್‌ಐಟಿ ಹೊರಗೆಡವಲಿದೆ. ಈಗಾಗಲೇ ಹಲವಾರು ಸಂತ್ರಸ್ತ ಮಹಿಳೆಯರು ಎಸ್‌ಐಟಿ ಮುಂದೆ ತಮ್ಮ ಹೇಳಿಕೆ ದಾಖಲಿಸುತ್ತಿದ್ದಾರೆ, ಎಫ್‌ಐಆರ್‌ ಕೂಡ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್‌ ತನಿಖೆ ಮತ್ತು ಬಂಧನ ಭೀತಿಯಿಂದ ಪ್ರಜ್ವಲ್‌ ವಿದೇಶಕ್ಕೆ ಪಲಾಯನವಾಗಿರುವುದಾಗಿ ವರದಿಯಾಗಿದೆ. ಎಸ್‌ಐಟಿ ತನಿಖೆಗೆ ಸಹಕಾರ ನೀಡುವ ದೃಷ್ಟಿಯಿಂದ ಅವರನ್ನು ವಿದೇಶದಿಂದ ವಾಪಸ್‌ ಕರೆತರುವುದು ಅಗತ್ಯ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಅವರು ನೆಲದ ಕಾನೂನಿನ ಪ್ರಕಾರ ತನಿಖೆ ಎದುರಿಸಬೇಕಿದೆ. ಹಾಗಾಗಿ ಅವರ ಪಾಸ್‌ಪೋರ್ಟ್ ಅನ್ನು ರದ್ದುಪಡಿಸಿ ರಾಜತಾಂತ್ರಿಕ ಮತ್ತು ಪೊಲೀಸ್‌ ಮಾರ್ಗದಿಂದ ಅಂತಾರಾಷ್ಟ್ರೀಯ ಪೊಲೀಸರ ನೆರವು ಪಡೆದು ಅವರನ್ನು ಸ್ವದೇಶಕ್ಕೆ ವಾಪಸ್‌ ಕರೆತರಲು ಕೇಂದ್ರ ಗೃಹ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳು ತಮ್ಮ ಪತ್ರದಲ್ಲಿ ಕೋರಿದ್ದಾರೆ.

ಅಲ್ಲದೆ, ಇದಕ್ಕಾಗಿ ಪ್ರಕರಣ ಎಲ್ಲಾ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಲು ಎಸ್‌ಐಟಿ ಸಿದ್ದವಿದೆ. ಅಗತ್ಯವಿರುವ ಇತರೆ ಕಾನೂನು ಔಪಚಾರಿಕತೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರವೂ ಬದ್ಧವಾಗಿದೆ ಎಂದು ಹೇಳಿದ್ದಾರೆ.