ವಿಚಾರಣೆಗೆ ಬರದಿದ್ದರೆ ಪ್ರಜ್ವಲ್ ಬಂಧನ: ಡಾ.ಪರಮೇಶ್ವರ

| Published : May 02 2024, 12:24 AM IST / Updated: May 02 2024, 11:51 AM IST

ಸಾರಾಂಶ

ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಫಾರಂ-41 ಎ ಜಾರಿಗೊಳಿಸಿದ್ದು, ನೋಟಿಸ್ ಜಾರಿಗೊಂಡ 24 ಗಂಟೆಯಲ್ಲೇ ತನಿಖೆಗೆ ಹಾಜರಾಗದಿದ್ದರೆ ಬಂಧಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ದಾವಣಗೆರೆಯಲ್ಲಿ ಹೇಳಿದ್ದಾರೆ.

 ದಾವಣಗೆರೆ :  ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಫಾರಂ-41 ಎ ಜಾರಿಗೊಳಿಸಿದ್ದು, ನೋಟಿಸ್ ಜಾರಿಗೊಂಡ 24 ಗಂಟೆಯಲ್ಲೇ ತನಿಖೆಗೆ ಹಾಜರಾಗದಿದ್ದರೆ ಬಂಧಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ರೇವಣ್ಣ ವಿಚಾರಣೆಗೆ ಹಾಜರಾಗಬಹುದು. ಪ್ರಜ್ವಲ್‌ ನೋಟಿಸ್‌ ಹಿನ್ನೆಲೆ ವಿಚಾರಣೆಗೆ ಹಾಜರಾಗದಿದ್ದರೆ ಪೊಲೀಸರು ತಮ್ಮ ಕೆಲಸವನ್ನು ಮಾಡಲಿದ್ದಾರೆ ಎಂದರು.

ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿತ್ತು. ಸಿಎಂ ಈ ಬಗ್ಗೆ ಸೂಕ್ತ ಕ್ರಮಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಲೈಂಗಿಕ ದೌರ್ಜನ್ಯದ ಪ್ರಕರಣದ ತನಿಖೆಗೆ ಸಿಐಡಿನಲ್ಲೇ ಎಸ್‌ಐಟಿ ರಚನೆ ಮಾಡಿ, ಬಿ.ಕೆ.ಸಿಂಗ್‌ ನೇತೃತ್ವದಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ತನಿಖೆಗೆ ನೇಮಿಸಿದೆ. ಎಸ್ಐಟಿ ಕಾನೂನು ಪ್ರಕಾರ ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ಪ್ರಜ್ವಲ್ ವಿದೇಶಕ್ಕೆ ತೆರಳಿದ್ದು, ಅಲ್ಲಿಂದ ವಾಪಾಸ್ ಕರೆ ತರಲು ಕೇಂದ್ರ ಸರ್ಕಾರದ ಸಹಕಾರ ಬೇಕು. ಷೆಂಗೆನ್ ವೀಸಾ (Schengen visa)ದಡಿ ವಿದೇಶಕ್ಕೆ ತೆರಳಿದ್ದು, ಎಷ್ಟು ದಿನ ಪ್ರಜ್ವಲ್ ದೇಶದಿಂದ ದೂರ ಇರಲು ಸಾಧ್ಯ? ಜನ ಮಾತನಾಡುತ್ತಾರೆ, ಬಿಜೆಪಿ ನಾಯಕರು ಮಾತನಾಡುತ್ತಾರೆಂದು ಮಾತನಾಡಿದರೆ ಅರ್ಥ ಇರುವುದಿಲ್ಲ. ಪ್ರಜ್ವಲ್ ವಿದೇಶಕ್ಕೆ ಹೋಗುವ ಮಾಹಿತಿ ಕೇಂದ್ರಕ್ಕೆ ಇರಲಿಲ್ಲವೇ? ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ನಮ್ಮ ನೆಲದಲ್ಲಿ ಬಡವನಿಗೂ ಅದೇ ಕಾನೂನು, ಶ್ರೀಮಂತರಿಗೂ ಅದೇ ಕಾನೂನು ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

- - - ಬಾಕ್ಸ್‌ ರಾಜ್ಯ, ರಾಷ್ಟ್ರದಲ್ಲಿ ಪ್ರಧಾನಿ ಬದಲಾಯಿಸೋ ಗಾಳಿ - ಉತ್ತರ ಕರ್ನಾಟಕದ 14 ಕ್ಷೇತ್ರದಲ್ಲೂ ಕಾಂಗ್ರೆಸ್ ಅಲೆ: ಗೃಹ ಸಚಿವ ವಿಶ್ವಾಸ ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯ, ರಾಷ್ಟ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಯಾವುದೇ ಮೋದಿಯ ಅಲೆಯೂ ಇಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಬದಲಾವಣೆ ಮಾಡಬೇಕೆಂಬ ಗಾಳಿ ಇದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಬುಧವಾರ ಶಾಮನೂರು ಶಿವಶಂಕರಪ್ಪ ನಿವಾಸ "ಶಿವ ಪಾರ್ವತಿ "ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 14 ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ಉಳಿದ 14 ಕ್ಷೇತ್ರಕ್ಕೆ ಮೇ 7ಕ್ಕೆ ನಡೆಯುವ ಚುನಾವಣೆಯಲ್ಲೂ ಕಾಂಗ್ರೆಸ್ ಅಲೆಯೇ ಕಂಡುಬರುತ್ತಿದೆ ಎಂದರು.

ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳಿಗೆ ಜನರ ಆಶೀರ್ವಾದ ಸಿಕ್ಕಿದೆ. ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರ ಸೊಸೆ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ಭಾರಿ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ತಿಳಿಸಿದರು.

ಶಾಮನೂರು ಶಿವಶಂಕರಪ್ಪ ಹಾಗೂ ತಮ್ಮ ತಂದೆಗೆ ಉತ್ತಮ ಸ್ನೇಹವಿತ್ತು. ತಮಗೂ ಹಾಗೂ ಸಚಿವ ಮಲ್ಲಿಕಾರ್ಜುನ ಜೊತೆಗೂ ಅದೇ ಒಡನಾಟವಿದೆ. ನಮಗೆ ನಮ್ಮದೇ ಆದಂತಹ ಗುಪ್ತಮಾಹಿತಿ ನಮಗೆ ಸಿಗುತ್ತವೆ. ಗೃಹ ಇಲಾಖೆ ಸಚಿವರಾಗಿ ಹಾಗೂ ಕಾಂಗ್ರೆಸ್ಸಿನ ಮುಖಂಡರಾಗಿ ತಮಗೆ ಮಾಹಿತಿ ಲಭ್ಯವಾಗುತ್ತಿದೆ. ನಮ್ಮ ಪಕ್ಷದ ಮಾಹಿತಿಗಳ ಪ್ರಕಾರವೇ ನಮ್ಮ ಪಕ್ಷವು ರಾಜ್ಯಾದ್ಯಂತ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ ಹೇಳಿಕೆ ನೀಡಿದ್ದಾರೆ. ಮೋದಿ, ಶಾ ಆರೋಪಗಳಿಗೆ ನಾನು ಸದನದಲ್ಲೇ ಅಂಕಿ ಅಂಶಗಳ ಸಮೇತ ಉತ್ತರ ನೀಡುತ್ತೇವೆ. ಬಿಜೆಪಿ ಸರ್ಕಾರವಿದ್ದಾಗ, ನಮ್ಮ ಸರ್ಕಾರದಲ್ಲಿ ಏನೆಲ್ಲಾ ಆಗಿದೆಯೆಂಬ ವಿಚಾರವನ್ನು ಸದನದಲ್ಲಿಯೇ ಬಿಚ್ಚಿಡುತ್ತೇನೆ. ಬಿಜೆಪಿ ಕಾಲದ ಅತ್ಯಾಚಾರ, ಕೊಲೆ, ಕ್ರಿಮಿನಲ್‌ ಅಪರಾಧಗಳು, ಬೆಂಗಳೂರು ಇತರೆಡೆ ಮಾದಕ ವಸ್ತು ಪೂರೈಕೆಯಾಗುತ್ತಿದ್ದ ಎಲ್ಲಾ ವಿಚಾರ ವಿವರಿಸುತ್ತೇನೆ ಎಂದು ಬಿಜೆಪಿ ಕೇಂದ್ರ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದರು.

ಬಿಜೆಪಿಗಿಂತಲೂ ಪರಿಣಾಮಕಾರಿಯಾಗಿ ಕಾನೂನು, ಸುವ್ಯವಸ್ಥೆ ನಮ್ಮ ಸರ್ಕಾರದಲ್ಲಿ ಚೆನ್ನಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಳನ್ನು ಬಂಧಿಸಿದ್ದೇವೆ. ಇತಿಹಾಸದಲ್ಲೇ ಸ್ಫೋಟದ ಆರೋಪಿಗಳನ್ನು ಇಷ್ಟು ಬೇಗ ಬಂಧಿಸಿದ ನಿದರ್ಶನವಿಲ್ಲ. ಕೆಫೆಗೆ ಆರೋಪಿ ಬಂದ ಕ್ಷಣದಿಂದ ರಾಜ್ಯ ಬಿಟ್ಟು ಹೋಗುವವರೆಗೂ ಪ್ರತಿಯೊಂದು ಮಾಹಿತಿ ಕಲೆ ಹಾಕಿದ್ದೇವೆ.

ಚೆನ್ನೈನಲ್ಲಿ ಆರೋಪಿ ಖರೀದಿಸಿದ ಕ್ಯಾಪ್ ಮಾಹಿತಿ ಆಧರಿಸಿ, ರಾಜ್ಯ ಪೊಲೀಸ್ ನೀಡಿದ ಮಾಹಿತಿ ಆಧರಿಸಿ ಸ್ಫೋಟದ ಆರೋಪಿಗಳನ್ನು ಎನ್ಐಎ ಬಂಧಿಸಿದೆ. ಸ್ಫೋಟದ ಆರೋಪಿಗಳ ಬಂಧನದ ವಿಚಾರದಲ್ಲಿ ರಾಜ್ಯ ಸರ್ಕಾರ ನಿಷ್ಕ್ರಿಯ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ತಿಳಿಸಿದರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಮಾಜಿ ಶಾಸಕ ಎಸ್.ರಾಮಪ್ಪ, ಹಿರಿಯ ವಕೀಲ ಪ್ರಕಾಶ ಪಾಟೀಲ, ಬಿ.ಎಚ್.ವೀರಭದ್ರಪ್ಪ, ಸೋಗಿ ಶಾಂತಕುಮಾರ, ದಾದಾಪೀರ್ ಚಿತ್ರದುರ್ಗ, ಎಸ್‌.ವಿಜಯಕುಮಾರ, ಮೈಲಾರಪ್ಪ, ಎಚ್.ಕೆ.ಬಸವರಾಜ ಇತರರು ಇದ್ದರು.