ಕಾಂತೇಶ್ ತಡೆಯಾಜ್ಞೆ ಹಿಂದೆ ಅಂತಹದ್ದೇನೂ ಇಲ್ಲ: ಈಶ್ವರಪ್ಪ

| Published : May 02 2024, 12:19 AM IST / Updated: May 02 2024, 02:23 PM IST

ಕಾಂತೇಶ್ ತಡೆಯಾಜ್ಞೆ ಹಿಂದೆ ಅಂತಹದ್ದೇನೂ ಇಲ್ಲ: ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಪ್ರಚಾರಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಆಗಮಿಸಿದ್ದರು. ಈ ವೇಳೆ ಪುತ್ರ ಕಾಂತೇಶ್ ತಮ್ಮ ಬಗ್ಗೆ ಯಾವುದೇ ವೀಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವುದನ್ನು ಸಮರ್ಥಿಸಿಕೊಂಡರು.

 ಬೈಂದೂರು :  ತಮ್ಮ ಪುತ್ರ ಕಾಂತೇಶ್ ತಮ್ಮ ಬಗ್ಗೆ ಯಾವುದೇ ವೀಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವುದನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಿಂದ ಹೇಗಾದರೂ ಮಾಡಿ ನಮ್ಮನ್ನು ಹಿಂದೆ ಸರಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ, ನಮಗೆ ಅಪಮಾನ ಮಾಡಬೇಕು ಎಂಬ ಕುತಂತ್ರ ನಡೆಯುತ್ತಿದೆ. ಈ ಕುತಂತ್ರ ರಾಜಕಾರಣಕ್ಕೆ ಉತ್ತರ ಕೊಡುವುದಕ್ಕೆ ತಡೆಯಾಜ್ಞೆ ತಂದಿದ್ದೇವೆ. ಅದು ಬಿಟ್ಟು ಬೇರೆ ಏನೂ ಇಲ್ಲ ಎಂದವರು ಸ್ಪಷ್ಟೀಕರಣ ನೀಡಿದ್ದಾರೆ.

ತಮ್ಮ ಚುನಾವಣಾ ಪ್ರಚಾರಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

* ಬಾಯಲ್ಲಿ ಹುಳ ಬೀಳುತ್ತೇ...

ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಅದು ದರಿದ್ರ ವಿಷಯ, ಅದರ ಬಗ್ಗೆ ನಾವ್ಯಾಕೆ ಮಾತನಾಡೋಣ, ಆ ಬಗ್ಗೆ ಮಾತನಾಡಿದರೆ ಬಾಯಲ್ಲಿ ಹುಳ ಬೀಳುತ್ತೆ ಎಂದರು.

ಈ ಪ್ರಕರಣದಿಂದ ಮಾತೆಯರ ಮಾನ ಹರಾಜಾಗಿಲ್ಲ, ದುಶ್ಯಾಸನ ಹಾಗೆ ಮಾಡಿದ ಎಂದು ಮಾತೆಯರ ಮಾನ ಹರಾಜು ಆಗುತ್ತಾ? ಆ ಪ್ರಕರಣದಲ್ಲಿ ದುಶ್ಯಾಶನನೇ ಹಾಳಾದ. ನಮ್ಮದು ಸ್ತ್ರೀಯರಿಗೆ ಗೌರವ ಕೊಡುವ ದೇಶ. ಮಹಿಳೆಯರೆಂದರೆ ಸೀತೆ, ಸಾವಿತ್ರಿ, ದ್ರೌಪದಿ ಎಂದು ಪೂಜೆ ಮಾಡುತ್ತೇವೆ. ಆದರೆ ಈ ಪ್ರಕರಣಕ್ಕೆ ಕಾರಣರಾದವರಿಗೆ ರಾಜ್ಯ, ದೇಶಾದ್ಯಂತ ಜನರು ಛೀ ಥೂ ಎನ್ನುತ್ತಿದ್ದಾರೆ. ಮಹಿಳೆರನ್ನು ದುರುಪಯೋಗ ಮಾಡಿಕೊಂಡವರು ಏನು ಅನುಭವಿಸಬೇಕೋ ಅನುಭವಿಸುತ್ತಾರೆ ಎಂದು ಹೇಳಿದರು.