ಪ್ರಜ್ವಲ್‌ ವಿಡಿಯೋ ಬಗ್ಗೆಯೇ ಡಿಕೆಶಿ-ಸೂರಜ್‌ ರೇವಣ್ಣ ಭೇಟಿ?

| Published : May 02 2024, 08:53 AM IST

Suraj Revanna
ಪ್ರಜ್ವಲ್‌ ವಿಡಿಯೋ ಬಗ್ಗೆಯೇ ಡಿಕೆಶಿ-ಸೂರಜ್‌ ರೇವಣ್ಣ ಭೇಟಿ?
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಬಿಡುಗಡೆ ವಿಚಾರವಾಗಿ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಕಳೆದ ಜನವರಿಯಲ್ಲಿ ಪ್ರಜ್ವಲ್‌ ಸಹೋದರ ವಿಧಾನಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾದ ವಿಚಾರ ಇದೀಗ ಮುನ್ನಲೆಗೆ ಬಂದಿದೆ.

ಬೆಂಗಳೂರು : ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಬಿಡುಗಡೆ ವಿಚಾರವಾಗಿ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಕಳೆದ ಜನವರಿಯಲ್ಲಿ ಪ್ರಜ್ವಲ್‌ ಸಹೋದರ ವಿಧಾನಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾದ ವಿಚಾರ ಇದೀಗ ಮುನ್ನಲೆಗೆ ಬಂದಿದೆ.

ಅಶ್ಲೀಲ ವಿಡಿಯೋ ಬಿಡುಗಡೆಯಾದರೆ ತಮಗೆ ನೆರವಾಗುವಂತೆ ಕೋರಲು ಸೂರಜ್‌ ಅವರು ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದರು ಎಂದು ಹೇಳಲಾಗುತ್ತಿದೆ.

ನೀರಾವರಿ ಬಗ್ಗೆ ಚರ್ಚೆ ಎಂದಿದ್ದ ಸೂರಜ್‌:

ಕಳೆದ ಜ. 27ರಂದು ಡಿ.ಕೆ. ಶಿವಕುಮಾರ್‌ ಅವರ ಸದಾಶಿವನಗರದ ನಿವಾಸದಲ್ಲಿ ಸೂರಜ್‌ ಅವರು ಭೇಟಿಯಾಗಿದ್ದರು. ಈ ಭೇಟಿ ನಂತರ ಉಭಯ ನಾಯಕರು ಇದು ಔಪಚಾರಿಕ ಭೇಟಿಯಷ್ಟೇ. ಹಾಸನ ಜಿಲ್ಲೆಯ ನೀರಾವರಿ ಯೋಜನೆಗಳು ಸೇರಿ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಮಾತುಕತೆ ನಡೆಸಲಾಗಿದೆ. ಯಾವುದೇ ರಾಜಕೀಯ ವಿಷಯಗಳನ್ನೂ ಚರ್ಚಿಸಿಲ್ಲ ಎಂದಿದ್ದರು.

ಆದರೀಗ, ಪ್ರಜ್ವಲ್‌ ರೇವಣ್ಣ ವಿಡಿಯೋ ಬಿಡುಗಡೆ ವಿಚಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮಾಡುತ್ತಿರುವ ಆರೋಪಕ್ಕೂ ಡಿ.ಕೆ. ಶಿವಕುಮಾರ್‌ ಮತ್ತು ಸೂರಜ್‌ ರೇವಣ್ಣ ಭೇಟಿ ವಿಚಾರಕ್ಕೂ ತಳಕು ಹಾಕಲಾಗುತ್ತಿದೆ. ಶಿವಕುಮಾರ್‌ ಅವರ ಬಳಿ ಪ್ರಜ್ವಲ್‌ ವಿಡಿಯೋ ಇದ್ದ ಕಾರಣಕ್ಕಾಗಿಯೇ ಸೂರಜ್‌ ಜನವರಿಯಲ್ಲಿ ಶಿವಕುಮಾರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಪ್ರಜ್ವಲ್‌ ವಿಡಿಯೋ ಬಿಡುಗಡೆ ಮಾಡದಂತೆ ಹಾಗೂ ಒಂದು ವೇಳೆ ಬೇರೆ ಮೂಲದಿಂದ ಬಿಡುಗಡೆಯಾದರೂ ತಮ್ಮ ಪರವಾಗಿ ನಿಲುವು ತೆಗೆದುಕೊಳ್ಳುವಂತೆ ಸೂರಜ್‌ ರೇವಣ್ಣ ಕೋರಿದ್ದರು ಎಂಬ ಮಾತುಗಳು ಹರಿದಾಡುತ್ತಿವೆ.

ಆರೋಪ ಸುಳ್ಳು- ಡಿಕೆಸು:

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ. ಸುರೇಶ್‌, ಶಿವಕುಮಾರ್‌ ಮತ್ತು ಸೂರಜ್‌ ಅವರ ಭೇಟಿ ವಿಚಾರದ ಬಗ್ಗೆ ಇಲ್ಲಸಲ್ಲದ ಚರ್ಚೆಗಳನ್ನು ಮಾಡಲಾಗುತ್ತಿದೆ. ಅನಾವಶ್ಯಕ ಚರ್ಚೆ ಮಾಡುತ್ತಾ ಪ್ರಕರಣದ ಹಾದಿ ತಪ್ಪಿಸಲಾಗುತ್ತಿದೆ. ಹಾಸನ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗಾಗಿ ಸೂರಜ್‌ ಭೇಟಿ ಮಾಡಿರಬಹುದು. ಅದನ್ನು ಬಿಟ್ಟು ಬೇರೆ ಯಾವುದೇ ವಿಚಾರಗಳು ಇಲ್ಲ ಎಂದಿದ್ದಾರೆ.