ಮಸ್ಟರಿಂಗ್ ಕೇಂದ್ರಗಳಿಗೆ ತೆರಳಿದ ಮತಗಟ್ಟೆ ಸಿಬ್ಬಂದಿ

| Published : Apr 26 2024, 12:47 AM IST

ಸಾರಾಂಶ

ಮತದಾನ ಹೆಚ್ಚಿಸುವ ಸಲುವಾಗಿ ಹಾಗೂ ಮತದಾನವನ್ನು ಹಬ್ಬದ ರೀತಿ ಆಚರಿಸಲು, ಮತದಾರರನ್ನು ಆಕರ್ಷಿಸಲು ವಿಶೇಷ ಮತಗಟ್ಟೆಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಶುಕ್ರವಾರ ನಡೆಯುವ ಮತದಾನ ಸುಗಮ ಹಾಗೂ ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ.

ಗುರುವಾರ ಬೆಳಿಗ್ಗೆಯಿಂದಲೇ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ತಾಲೂಕು ಕೇಂದ್ರಗಳ ಮಸ್ಟರಿಂಗ್ ಕೇಂದ್ರಗಳಲ್ಲಿ ಚುನಾವಣಾ ಪೂರ್ವ ಸಿದ್ಧತೆ ಮಸ್ಟರಿಂಗ್ ಕಾರ್ಯ ವ್ಯವಸ್ಥಿತವಾಗಿ ನಡೆಯಿತು. ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆಗಳಿಗೆ ತೆರಳಲು ಮತಯಂತ್ರ ಹಾಗೂ ಎಲ್ಲಾ ಪೂರ್ವ ಸಿದ್ಧತೆಗಳೊಂದಿಗೆ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ತೆರಳಿದರು. ಶುಕ್ರವಾರ ಬೆಳಗ್ಗೆ 07 ರಿಂದ ಸಂಜೆ 06 ಗಂಟೆಯವರೆಗೆ ಮತದಾನ ನಡೆಯಲಿದೆ. ಪ್ರತಿಯೊಬ್ಬ ಮತದಾರರು ಮತದಾನದ ಹಕ್ಕನ್ನು ಚಲಾಯಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

36 ವಿಶೇಷ ಮತಗಟ್ಟೆಗಳು:

ಮತದಾನ ಹೆಚ್ಚಿಸುವ ಸಲುವಾಗಿ ಹಾಗೂ ಮತದಾನವನ್ನು ಹಬ್ಬದ ರೀತಿ ಆಚರಿಸಲು, ಮತದಾರರನ್ನು ಆಕರ್ಷಿಸಲು ವಿಶೇಷ ಮತಗಟ್ಟೆಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ 4 ಯುವ ಮತಗಟ್ಟೆಗಳು, 20 ಮಹಿಳಾ ಮತಗಟ್ಟೆಗಳು(ಸಖಿ), 4 ವಿಶೇಷ ಚೇತನ ಮತಗಟ್ಟೆಗಳು, 4 ವಿಷಯಾಧಾರಿತ ಮತಗಟ್ಟೆಗಳು , 4 ಮಾದರಿ ಮತಗಟ್ಟೆಗಳು ಸೇರಿ ಒಟ್ಟು 36 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 5 ಮಹಿಳಾ ಹಾಗೂ ತಲಾ 1 ಯುವ, ವಿಶೇಷ ಚೇತನ, ವಿಷಯಾಧಾರಿತ ಹಾಗೂ ಮಾದರಿ ಮತಗಟ್ಟೆಗಳಿವೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ:

ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಯುವ ಸಿಬ್ಬಂದಿ ನಿರ್ವಹಿಸುವ ಸಲುವಾಗಿ ಒಂದು ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ -238 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಾಪುರ. ಮಹಿಳಾ ಸಿಬ್ಬಂದಿ ನಿರ್ವಹಿಸುವ ಸಲುವಾಗಿ 5 ಮತಗಟ್ಟೆಗಳು ತೆರೆಯಲಾಗಿದ್ದು, ಕೊನಘಟ್ಟ, ಬಾಶೆಟ್ಟಿಹಳ್ಳಿ, ಖಾಸ್‌ಬಾಗ್‌, ಅರಳುಮಲ್ಲಿಗೆ ಬಾಗಿಲು ಮತ್ತು ದೊಡ್ಡ ಬೆಳವಂಗಲಗಳಲ್ಲಿ ತಲಾ ಒಂದು ಸಖಿ ಮತಗಟ್ಟೆಗಳಿವೆ. ಉಳಿದಂತೆ ದರ್ಗಾಜೋಗಿಹಳ್ಳಿಯಲ್ಲಿ 1 ವಿಶೇಷಚೇತನರು ನಿರ್ವಹಿಸುವ ಮತಗಟ್ಟೆ, ಅರಳುಮಲ್ಲಿಗೆಯಲ್ಲಿ 1 ಮಾದರಿ ಮತಗಟ್ಟೆ, ಕನಸವಾಡಿಯಲ್ಲಿ 1 ವಿಶೇಷ/ವಿಷಯಾಧಾರಿತ ಮತಗಟ್ಟೆ ತೆರೆಯಲಾಗಿದೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರ:

ದೇವನಹಳ್ಳಿ ವ್ಯಾಪ್ತಿಯ ಕನ್ನಮಂಗಲದಲ್ಲಿ ಯುವ ಮತಗಟ್ಟೆ, ವಿಜಯಪುರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕಾರಹಳ್ಳಿ, ದೇವನಹಳ್ಳಿ ಸರ್ಕಾರಿ ಪ.ಪೂ ಕಾಲೇಜು, ತೂಬಗೆರೆ ಉಪತಹಸೀಲ್ದಾರ್ ಕಚೇರಿ, ಬೂದಿಗೆರೆಯಲ್ಲಿ ಮಹಿಳಾ ಸಿಬ್ಬಂದಿ ನಿರ್ವಹಿಸುವ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಸರ್ಕಾರಿ ಪಪೂ ಕಾಲೇಜಿನಲ್ಲಿ ವಿಶೇಷ ಚೇತನ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆ, ವೆಂಕಟಗಿರಿ ಕೋಟೆಯಲ್ಲಿ ಮಾದರಿ ಮತಗಟ್ಟೆ, ಅಣ್ಣೇಶ್ವರದಲ್ಲಿ ವಿಷಯಾಧಾರಿತ ಮತಗಟ್ಟೆ ಕಾರ್ಯನಿರ್ವಹಿಸಲಿದೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರ:

ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ 5 ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳಿದ್ದು, ಸಮೇತನಹಳ್ಳಿ, ಹೊಸಕೋಟೆ ಟೌನ್, ನೆಲವಾಗಿಲು, ನಂದಗುಡಿ ಮತ್ತು ಸರ್ಕಾರಿ ಉರ್ದು ಶಾಲೆಗಳಲ್ಲಿ ಸಖಿ ಮತಗಟ್ಟೆಗಳಿವೆ. ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿಶೇಷ ಚೇತನರು ನಿರ್ವಹಿಸುವ ಮತಗಟ್ಟೆ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಮತಗಟ್ಟೆ, ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದರಿ ಮತಗಟ್ಟೆ ಹಾಗೂ ಸಮೇತನಹಳ್ಳಿಯಲ್ಲಿ ವಿಷಯಾಧಾರಿತ ಮತಗಟ್ಟೆ ತೆರೆಯಲಾಗಿದೆ.

ನೆಲಮಂಗಲ ವಿಧಾನಸಭಾ ಕ್ಷೇತ್ರ:

ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ಯುವ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದ್ದು, ಮಹಿಳಾ ಸಿಬ್ಬಂದಿ ನಿರ್ವಹಿಸುವ 5 ಸಖಿ ಮತಗಟ್ಟೆಗಳನ್ನು ಹಂಚಿಪುರ, ಸೋಂಪುರ, ಬಸವನಹಳ್ಳಿ, ಸೋಲೂರು, ಹೊನ್ನೇನಹಳ್ಳಿಗಳಲ್ಲಿ ಸ್ಥಾಪಿಸಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶೇಷ ಚೇತನರ ಮತಗಟ್ಟೆ, ಸೋಂಪುರದಲ್ಲಿ ಮಾದರಿ ಮತಗಟ್ಟೆ, ಶಿವಗಂಗೆಯಲ್ಲಿ ವಿಷಯಾಧಾರಿತ ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ.

ಕ್ಷೇತ್ರದಲ್ಲಿ ವಿಷಯಾಧಾರಿತ ಮತಗಟ್ಟೆಯ ವಿಶೇಷ!

ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ವಿಶೇಷ ವಿಷಯಾಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ರೇಷ್ಮೆ ಸೀರೆ ತಯಾರಿಕೆ ವಿಶೇಷ ವಿಷಯಾಧಾರಿತ ಮತಗಟ್ಟೆಯನ್ನು ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾಗಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಸಾಂಸ್ಕೃತಿಕ ವಿಷಯಾಧಾರಿತ ಕರಗ,ಡೈರಿ ಉತ್ಪನ್ನಗಳು ಮತ್ತು ಫಲಪುಷ್ಪ ಅಲಂಕಾರಿಕ ಆಕರ್ಷಕ ಮತಗಟ್ಟೆಯನ್ನು ಮಲ್ಲಸಂದ್ರ, ಸಮೇತನಹಳ್ಳಿಯಲ್ಲಿ ತೆರೆಯಲಾಗಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಣ್ಣೇಶ್ವರದ ಮತಗಟ್ಟೆ ಸಂಖ್ಯೆ 238ರಲ್ಲಿ ತೋಟಗಾರಿಕೆ, ಪುಷ್ಪ ಕೃಷಿ ವಿಶೇಷ ವಿಷಯಾಧಾರಿತವಾಗಿ ಚಕ್ಕೊತ, ನೀಲಿ ದ್ರಾಕ್ಷಿ ಮತ್ತು ಗುಲಾಬಿ ಹೂವಿನ ಆಕರ್ಷಕ ಮತಗಟ್ಟೆಯನ್ನು ತೆರೆಯಲಾಗಿದೆ. ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಸಾಂಸ್ಕೃತಿಕ ವಿಷಯಾಧಾರಿತವಾದ ಸುಗ್ಗಿ ಹಬ್ಬ,ಎತ್ತಿನ ಬಂಡಿಯ ಆಕರ್ಷಕ ಮತಗಟ್ಟೆಯನ್ನು ಶಿವಗಂಗೆಯ ಸರ್ಕಾರಿ ಶಾಲೆಯಲ್ಲಿ ರೂಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.