ಇಂದು ಮತದಾನಕ್ಕೆ ಸಕಲ ಸಜ್ಜು, ಮತಗಟ್ಟೆ ತಲುಪಿದ ಸಿಬ್ಬಂದಿ

| Published : Apr 26 2024, 12:47 AM IST

ಸಾರಾಂಶ

ಕ್ಷೇತ್ರದಲ್ಲಿ 2202 ಒಟ್ಟು ಮತಗಟ್ಟೆಗಳಿಗೆ 5742 ಬ್ಯಾಲೆಟ್ ಯೂನಿಟ್, 3036 ಕಂಟ್ರೋಲ್ ಯೂನಿಟ್, 3136 ವಿವಿಪ್ಯಾಟ್ ಸಿದ್ಧಗೊಳಿಸಿ, ಕಳುಹಿಸಲಾಯಿತು. ಎಲ್ಲಾ ಮತಯಂತ್ರವನ್ನು ಇಸಿಐಎಲ್ ಸಂಸ್ಥೆಯ ಎಂಜಿನಿಯರ್ಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಮೊದಲನೇ ಹಂತದ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಏ.26 ರಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಮತಗಟ್ಟೆ ಸಿಬ್ಬಂದಿ ಮತ್ತು ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಗುರುವಾರ ಕಳುಹಿಸಿಕೊಡಲಾಯಿತು.

ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2,202 ಮತಗಟ್ಟೆ ಸ್ಥಾಪಿಸಿದ್ದು, 2,434 ಪಿ.ಆರ್.ಒ, 2,482 ಎ.ಪಿ.ಆರ್.ಒ, 4,893 ಪಿ.ಒ ಸೇರಿದಂತೆ ಒಟ್ಟು 9,809 ಮತದಾನ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಮತದಾನಾಧಿಕಾರಿಗಳನ್ನು ನೇಮಿಸಿ, ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ.

ಪ್ರತಿ ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧ್ಯಕ್ಷಾಧಿಕಾರಿ, ಒಬ್ಬರು ಸಹಾಯಕ ಅಧ್ಯಕ್ಷಾಧಿಕಾರಿ ಮತ್ತು ಇಬ್ಬರು ಮತದಾನಾಧಿಕಾರಿಗಳನ್ನು ನೇಮಿಸಲಾಗಿದೆ. ಇವರೊಂದಿಗೆ ಸ್ಥಳೀಯವಾಗಿ ಒಬ್ಬರು ಗ್ರೂಪ್ ಡಿ ಮತ್ತು ಮತದಾರರನ್ನು ಗುರುತಿಸಲು ಪ್ರತಿ ಮತಗಟ್ಟೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ವಿದ್ಯುನ್ಮಾನ ಮತಯಂತ್ರಗಳು

ಕ್ಷೇತ್ರದಲ್ಲಿ 2202 ಒಟ್ಟು ಮತಗಟ್ಟೆಗಳಿಗೆ 5742 ಬ್ಯಾಲೆಟ್ ಯೂನಿಟ್, 3036 ಕಂಟ್ರೋಲ್ ಯೂನಿಟ್, 3136 ವಿವಿಪ್ಯಾಟ್ ಸಿದ್ಧಗೊಳಿಸಿ, ಕಳುಹಿಸಲಾಯಿತು. ಎಲ್ಲಾ ಮತಯಂತ್ರವನ್ನು ಇಸಿಐಎಲ್ ಸಂಸ್ಥೆಯ ಎಂಜಿನಿಯರ್ಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಮೊದಲನೇ ಹಂತದ ಪರಿಶೀಲನೆ ನಡೆಸಿದ್ದಾರೆ.

ಶೇ. 98.12ರಷ್ಟು ವೋಟರ್ ಸ್ಲಿಪ್ಗಳನ್ನು ಜಿಲ್ಲೆಯಲ್ಲಿ ಹಂಚಿಕೆ ಮಾಡಲಾಗಿದೆ. ಶೇ. 100 ರಷ್ಟು ಎಪಿಕ್ ಕಾರ್ಡ್ಹಂಚಲಾಗಿದೆ. ಮೈಸೂರು ಕ್ಷೇತ್ರ ವ್ಯಾಪ್ತಿಯಲ್ಲಿ 10,26,324 ಪುರುಷರು, 10,65,714 ಮಂದಿ ಮಹಿಳೆಯರು, 184 ಇತರರು ಸೇರಿದಂತೆ ಒಟ್ಟು 20,92,222 ಮತದಾರರು ಇದ್ದಾರೆ.

ಕ್ಷೇತ್ರದಿಂದ ಹೊರಗಡೆ ನಿಯೋಜಿಸಲ್ಪಟ್ಟಿದ್ದಲ್ಲಿ ಮತದಾನಾಧಿಕಾರಿಗಳನ್ನು, ಆ ವಿಧಾನಸಭಾ ಕ್ಷೇತ್ರಗಳಿಗೆ ತಲುಪಿಸಲು ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು. ಸಂಬಂಧಪಟ್ಟ ಮಸ್ಟರಿಂಗ್ ಕೇಂದ್ರಗಳಿಂದ ಬೆಳಗ್ಗೆಯೇ ಬಸ್ ಗಳು ಹೊರಟವು.

ಅಂಚೆ ಮತಪತ್ರ

ಭಾರತ ಚುನಾವಣಾ ಆಯೋಗವು ಚುನಾವಣೆ ನಡೆಸುವ ನಿಯಮಗಳು ಅನ್ವಯ ಚುನಾವಣಾ ಕರ್ತವ್ಯ ನಿರತ ಮತದಾರರು ಅವರ ಮತವನ್ನು ವೋಟರ್ ಫೆಸಿಲಿಟೇಷನ್ ಸೆಂಟರ್ ಗಳಲ್ಲಿ ಚಲಾಯಿಸುವಂತೆ ತಿದ್ದುಪಡಿ ಮಾಡಲಾಗಿದೆ.

ಕರ್ತವ್ಯ ನಿರತ ಮತದಾರರ ಪೈಕಿ 823 (ನಮೂನೆ-12) ಮತದಾರರಿಗೆ ಅಂಚೆ ಮತಪತ್ರವನ್ನು ನೀಡಲಾಗಿದೆ. 8307 (ನಮೂನೆ-12ಎ) ಇಡಿಸಿಯನ್ನು ಸೃಜನೆ ಮಾಡಿ ನೀಡಲಾಗಿದೆ. ಏ. 25ರಂದು ಮಧ್ಯಾಹ್ನ 12 ಗಂಟೆಯವರೆವಿಗೂ ಚುನಾವಣಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಸಹಾಯಕ ಚುನಾವಣಾಧಿಕಾರಿ ಕಚೇರಿಗಳಲ್ಲಿ ಸ್ಥಾಪಿಸಿರುವ ಫೆಸಿಲಿಟೇಷನ್ ಕೇಂದ್ರಗಳಲ್ಲಿ ಚುನಾವಣಾ ಕರ್ತವ್ಯ ನಿರತ ನೌಕರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಅಭ್ಯರ್ಥಿಗಳ ಬೂತ್

ಸ್ಪರ್ಧಿಸಿರುವ ಅಭ್ಯರ್ಥಿಗಳು ಮತಗಟ್ಟೆ ಸ್ಥಳದಿಂದ ಕನಿಷ್ಠ 200 ಮೀಟರ್ ದೂರದಲ್ಲಿ ತಮ್ಮ ಬೂತ್ ಸ್ಥಾಪಿಸಲು ಮಾತ್ರ ಅವಕಾಶವಿದೆ. ಆದರೆ, ಯಾವುದೇ ರೀತಿಯ ಪ್ರಚಾರ ಮಾಡುವಂತಿಲ್ಲ. ಮತದಾರರಿಗೆ ನೀಡುವ ಸ್ಲಿಪ್ ನಲ್ಲಿ ಅವರು ಮತದಾರರ ಭಾಗ ಸಂಖ್ಯೆ ,ಕ್ರಮ ಸಂಖ್ಯೆ ಮತ್ತು ಹೆಸರನ್ನು ಮಾತ್ರ ಬರೆಯಬಹುದು. ಯಾವುದೇ ರೀತಿಯ ಚಿಹ್ನೆಗಳು, ಅಭ್ಯರ್ಥಿಗಳ ಭಾವಚಿತ್ರಗಳು ಇರದಂತೆ ಎಚ್ಚರ ವಹಿಸಲು ಸೂಚಿಸಿದೆ. 2 ಚೇರ್, 1 ಮೇಜು, ಬ್ಯಾನರ್ಗಳನ್ನು ಹಾಕಿಕೊಳ್ಳಲು ಅವಕಾಶವಿದ್ದು, ಚುನಾವಣಾಧಿಕಾರಿ ಹಾಗೂ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂದು ಅವರು ಹೇಳಿದರು.

----

ಬಾಕ್ಸ್...

ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ

ಮತದಾನವು ಏ. 26ರಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. 90 ನಿಮಿಷ ಮುಂಚಿತವಾಗಿ ಅಂದರೆ ಬೆಳಗ್ಗೆ 5.30ಕ್ಕೆ ಅಣಕು ಮತದಾನ ಮಾಡಲಾಗುತ್ತದೆ. ಮತಚಲಾಯಿಸಿದ ಮತದಾರರಿಗೆ ಅಳಿಸಲಾಗದ ಶಾಹಿಯನ್ನು ಎಡಗೈ ತೋರು ಬೆರಳಿಗೆ ಹಾಕಲಾಗುವುದು. ಎಡಗೈ ಇಲ್ಲದವರಿಗೆ ಬಲಗೈ ಬೆರಳಿಗೆ, ಎರಡು ಕೈ ಇಲ್ಲದಿದ್ದರೆ ತೋಳಿಗೆ, ಕೈಗಳು ಸಂಪೂರ್ಣ ಇಲ್ಲದಿದ್ದರೇ ಕಾಲಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು.

ಮೈಸೂರು ಜಿಲ್ಲೆಯ ಮತದಾನಾಧಿಕಾರಿಗಳಿಗೆ ಮತಗಟ್ಟೆಗಳಿಗೆ ತಲುಪಿಸಲು ಒಟ್ಟು 473 ಕೆ.ಎಸ್.ಆರ್.ಟಿ.ಸಿ ಬಸ್ ಗಳು, 33 ಜಿಪ್ಗಳು ಹಾಗೂ 79 ಮಿನಿ ಬಸ್ ಬಳಸಲಾಗಿದೆ.

----

ವಿಶೇಷ ಮತಗಟ್ಟೆಗಳ ಸ್ಥಾಪನೆ

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 40 ಸಖಿ ಬೂತ್ ಗಳು, 2 ಸಾಂಪ್ರದಾಯಿಕ ಮತಗಟ್ಟೆ, 8 ದಿವ್ಯಾಂಗ ಮತಗಟ್ಟೆ, 8 ಯುವ ಮತದಾರರ ಬೂತ್, 7 ಥೀಮ್ ಬೇಸಡ್ ಬೂತ್ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಿಗೆ ವ್ಹೀಲ್ ಚೇರ್ ಹಾಗೂ ಬೂತಗನ್ನಡಿ ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ. ಅಂಗವಿಕಲರು ಮತ್ತು ಹಿರಿಯ ನಾಗರೀಕರಿಗೆ ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲಾಗುತ್ತಿದೆ. ದೃಷ್ಟಿ ದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್ ಪೇಪರ್ ಅನ್ನು ಕೂಡ ಪ್ರತಿ ಮತಗಟ್ಟೆಗೆ ಸರಬರಾಜು ಮಾಡಲಾಗಿದೆ.