ಡಿ.ಕೆ. ಶಿವಕುಮಾರನ್ನು ಸಂಪುಟದಿಂದ ವಜಾಗೊಳಿಸಿ : ಜೆಡಿಎಸ್ ಮುಖಂಡರು

| Published : May 09 2024, 01:30 AM IST / Updated: May 09 2024, 09:08 AM IST

ಡಿ.ಕೆ. ಶಿವಕುಮಾರನ್ನು ಸಂಪುಟದಿಂದ ವಜಾಗೊಳಿಸಿ : ಜೆಡಿಎಸ್ ಮುಖಂಡರು
Share this Article
  • FB
  • TW
  • Linkdin
  • Email

ಸಾರಾಂಶ

ಡಿಸಿಎಂ ಡಿ.ಕೆ. ಶಿವಕುಮಾರ ಅವರು ದೇವೇಗೌಡರ ಕುಟುಂಬದ ಸದಸ್ಯರ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ರೇವಣ್ಣ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರ ಇಲ್ಲದಿದ್ದರೂ ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರನ್ನು ಉಲ್ಲೇಖಿಸಿದ್ದಾರೆ

ಗದಗ: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಬುಧವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ ಮಾತನಾಡಿ, ಪೆನ್ ಡ್ರೈವ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಭಾಗಿಯಾಗಿರುವುದು ಫೋನ್ ಸಂಭಾಷಣೆಯಿಂದ ಸ್ಪಷ್ಟವಾಗಿದೆ. ಹೀಗಾಗಿ ಪ್ರಕರಣದ ಮೇಲೆ ಸರ್ಕಾರ ಪ್ರಭಾವ ಬೀರುವ ಸಾಧ್ಯತೆಯಿದೆ. ಈ ಕೂಡಲೇ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪ್ರಕರಣದ ಸತ್ಯಾಸತ್ಯತೆ ಹೊರಬರುವವರೆಗೂ ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ ಅವರು ದೇವೇಗೌಡರ ಕುಟುಂಬದ ಸದಸ್ಯರ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ರೇವಣ್ಣ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರ ಇಲ್ಲದಿದ್ದರೂ ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರನ್ನು ಉಲ್ಲೇಖಿಸಿದ್ದಾರೆ. ಡಿ.ಕೆ. ಶಿವಕುಮಾರ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದು, ಜವಾಬ್ದಾರಿಯುತವಾಗಿ ನಡೆದುಕೊಳ್ಳದಿದ್ದರೆ ಜೆಡಿಎಸ್ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಮೇಟಿ, ಪ್ರಫುಲ್ ಪುಣೇಕರ, ಲಲಿತಾ ಕಲ್ಲಪ್ಪನವರ, ಹೊನ್ನವ್ವ ಕಲ್ಲಪ್ಪನವರ್, ಎಂ.ಎಸ್. ಪರ್ವತಗೌಡರ, ಪ್ರವೀಣ ಬಾಳಿಕಾಯಿ, ಮಂಜುನಾಥ ದೊಡ್ಡಮನಿ, ಗಿರೀಶ ಸಂಶಿ, ಅಭಿಷೇಕ್ ಕಂಬಳಿ, ತಿಪ್ಪಣ್ಣ ಹುಡೇದ, ಹಾಜಿ ಅಲಿ ಕೊಪ್ಪಳ, ಜಯರಾಜ ವಾಲಿ, ಸಿರಾಜ ಕದಡಿ ಇತರರು ಉಪಸ್ಥಿತರಿದ್ದರು.