ಏಕಶಿಲಾ ಬೆಟ್ಟದ ಕಾವಿಗೆ ಜನ ವಿಲ ವಿಲ

| Published : Apr 28 2024, 01:17 AM IST

ಸಾರಾಂಶ

ಪಟ್ಟಣದಲ್ಲಿ ವೀಪರಿತ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು, ವಯೋವೃದ್ಧರು, ಮಕ್ಕಳು ಮನೆ ಬಿಟ್ಟು ಆಚೆ ಬರಲಾಗದಂತ ಸ್ಥಿತಿ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಪಟ್ಟಣದಲ್ಲಿ ವೀಪರಿತ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು, ವಯೋವೃದ್ಧರು, ಮಕ್ಕಳು ಮನೆ ಬಿಟ್ಟು ಆಚೆ ಬರಲಾಗದಂತ ಸ್ಥಿತಿ ಎದುರಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಸದ್ಯ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಮಳೆಯಾಗದಿರುವುದರಿಂದ ಜನ ಜೀವನ ಕಷ್ಟವಾಗಿದೆ. ವರುಣ ದಯೆ ತೋರಬೇಕಿದೆ. ಈ ಬೇಸಿಗೆ ರಣ ಬಿಸಿಲಿಗೆ ಮೈಯೊಡ್ಡಿ ನಿಂತಿರುವ ವಿಶ್ವ ಪ್ರಸಿದ್ಧ ಏಕಶಿಲಾ ಬೆಟ್ಟವು ಸಂಜೆಯಾಗುತ್ತಿದ್ದಂತೆ ಶಾಖವನ್ನು ಹೊರ ಸೂಸುತ್ತದೆ. ಇದರಿಂದ ಮಧುಗಿರಿ ಜನತೆ ಅಕ್ಷರ ಸಹ ಏಕಶಿಲಾ ಹೆಬ್ಬಂಡೆ ಕಾವಿಗೆ ವಿಲ ವಿಲ ಒದ್ದಾಡುವಂತಾಗಿದೆ. ಸರಿಯಾದ ಪ್ರಮಾಣದಲ್ಲಿ ಗಾಳಿ ಬೀಸದೇ ಶಕೆ ಪ್ರಮಾಣವೇ ಹೆಚ್ಚಾಗಿದೆ. ತಾಲೂಕಿನಾದ್ಯಂತ ರಣ ಬಿಸಿಲು ಕೇಕೆ ಹಾಕುತ್ತಿದೆ. ಎಲ್ಲಿ ನೋಡಿದರೂ ಮಳೆ ಬರುವ ಸೂಚನೆಗಳಿಲ್ಲ. ಶುದ್ಧ ಕುಡಿವ ನೀರಿಗೆ ಜನ ಪರದಾಡುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. ದನಕರುಳಿಗೆ ನೀರು, ಮೇವಿಲ್ಲದೆ ಸೊರಗುತ್ತಿವೆ. ರಾಜ್ಯಾದಾದ್ಯಂತ ಹವಾಮಾನ ಇಲಾಖೆ ಮಳೆ ಬರುವ ಲಕ್ಷಣಗಳಿವೆ, ಎಂಬ ವರದಿ ನೀಡಿತ್ತಾದರೂ ಮಧುಗಿರಿ ತಾಲೂಕಿನ ಸುತ್ತಮುತ್ತ ಮಳೆ ಬಿದ್ದಿಲ್ಲ. ಕೆರೆ ಕಟ್ಟೆಗಳು ಒಣಗಿ ಬಿರುಕು ಬಿಟ್ಟಿವೆ. ವ್ಯವಸಾಯದ ಬದುಕು ಮೂರಾಬಟ್ಟಿಯಾಗಿದೆ.

ಮರಗಿಡ ಬಳ್ಳಿಗಳಲ್ಲಿ ಹಸಿರಿಲ್ಲ. ಎತ್ತ ಕಣ್ಣಾಯಿಸಿದರೂ ಕಾಂಕ್ರಿಟ್‌ ಮನೆಗಳದ್ದೆ ಕಾರುಬಾರು. ಕೂಲಿಕಾರ್ಮಿಕರು ದುಡೆಮೆಯಿಲ್ಲದೆ ಕಂಗಲಾಗಿದ್ದಾರೆ. ವಸತಿ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಅಲೆದಾಡುವ ದೃಶ್ಯ ಕಂಡು ಬರುತ್ತದೆ. ಕೆಲವರು ಜೀವನ ನಿರ್ವಹಣೆಗೆ ಹಣ ಸಂಪಾದಿಸಲು ನಗರ ಪ್ರದೇಶಗಳಲ್ಲಿ ವಲಸೆ ಹೋಗಿ ಕೆಲಸ ಹುಡುಕುತ್ತಾ ನಲುಗಿದ್ದಾರೆ.

ಬಾನಲ್ಲಿ ಮೋಡಗಳ ಸುಳಿವಿಲ್ಲ, ಭೂಮಿಯಲ್ಲಿ ಹಸಿರಿಲ್ಲ. ಎಲ್ಲಿ ನೋಡಿದರೂ ಬಟಾ ಬಯಲು, ನೆಲವನ್ನೇ ದೇವರೆಂದು ನಂಬಿ ಜೀವನ ನಡೆಸುತ್ತಿದ್ದ ರೈತಾಪಿ ವರ್ಗ ಬಿಸಿಲಲ್ಲಿ ಬೆವರು ಸುರಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ಗಿರಿನಾಡಿನ ಇ ಭವಣೆಗೆ ಯಾವಾಗ ಕೊನೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮಧುಗಿರಿ ತಾಲೂಕಿನಲ್ಲಿ ಬೇಸಿಗೆ ಬಿಸಿಲ ತಾಪಮಾನ 40 ಡಿಗ್ರಿ ದಾಖಲಾಗಿದ್ದರೂ ಸಹ ಜನತೆಗೆ ಯಾವುದೇ ತೊಂದರೆ ಆಗಿಲ್ಲ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಸುಸ್ತಾಗುವುದು, ಸನ್‌ ಸ್ರ್ಟೋಕ್‌ ನಂತಹ ಯಾವುದೇ ಪ್ರಕರಣಗಳು ಇದುೂವರೆಗೂ ಕಂಡು ಬಂದಿಲ್ಲ. ಇದರಿಂದ ಜನರೇ ಸ್ವಯಂ ಆರೋಗ್ಯ ರಕ್ಷಣೆ ಕಾಪಾಡಿಕೊಳ್ಳುವ ಮೂಲಕ ಮುತುವರ್ಜಿ ವಹಿಸಿದ್ದಾರೆ ಎಂಬುದು ಗೊತ್ತಾಗುತ್ತಿದೆ.

- ಡಾ.ಗಂಗಾಧರ್‌. ಆಡಳಿತ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಮಧುಗಿರಿ. 40 ಡಿಗ್ರಿ ಬಿಸಿಲು ತಾಪಮಾನದಿಂದಾಗಿ ರೈತರು, ಕೃಷಿಕರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಮುಂಗಾರು ಪ್ರಾರಂಭವಾದರೂ ಮಳೆಯ ದರ್ಶನವಿಲ್ಲ. ಭರಣಿ ಮಳೆಗೆ ರೈತರು ಕಾಯುತ್ತಿದ್ದು, ಜನ, ದನ ಕುರಗಳಿಗೆ ಕುಡಿವ ನೀರು, ಮೇವಿನ ಅಭಾವ ಕಾಡುತ್ತಿದೆ. ಬಿಸಿಲಿನ ತಾಪಕ್ಕೆ ಸಮರ್ಪಕ ಮೇವಿಲ್ಲದ ಕಾರಣ ಹಾಲಿನ ಶೇಖರಣೆ ಕಡಿಮೆಯಾಗಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಹವಾಮಾನ ಇಲಾಖೆ ಉಷ್ಣಾಂಶ ಜಾಸ್ತಿಯಾಗುತ್ತಿದೆ ಎಂದು ತಿಳಿಸುತ್ತಿದ್ದು, ಇದರಿಂದ ಜನರು ಭಯಬೀತರಾಗಿದ್ದಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ದನಕರುಗಳಿಗೆ ಗೋಶಾಲೆ ಪ್ರಾರಂಭಿಸಿ ಅನುಕೂಲ ಮಾಡಬೇಕು. ಕುಡಿವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು.

-ಡಾ.ಎಂ.ಜಿ.ಶ್ರೀನಿವಾಮೂರ್ತಿ, ಮುಖಂಡ ಮಧುಗಿರಿ