ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರ್‌

| Published : May 10 2024, 01:35 AM IST

ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರ್‌
Share this Article
  • FB
  • TW
  • Linkdin
  • Email

ಸಾರಾಂಶ

ನಾಗರೀಕರು ತಮ್ಮ ಕರ್ತವ್ಯಗಳ ಬಗ್ಗೆ ಅರ್ಥೈಸಿಕೊಳ್ಳಬೇಕಿದೆ. ದೇಶಕ್ಕಾಗಿ ಸೇವೆ ಸಲ್ಲಿಸಲು ಎನ್ಎಸ್ಎಸ್ ಉತ್ತಮ ವೇದಿಕೆಯಾಗಿದೆ.

ಹುಬ್ಬಳ್ಳಿ:

ನೈಸರ್ಗಿಕ ವಿಕೋಪಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಎನ್‌ಎಸ್‌ಎಸ್ ಸ್ವಯಂ ಸೇವಕರು ಸೇವೆ ಮಾಡಿದ್ದಾರೆ. ಸಾಮಾಜಿಕ ಸೇವೆ ಮಾಡುವಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಸಂಗ್ರೇಶಿ ಹೇಳಿದರು.

ಇಲ್ಲಿನ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‌ಎಸ್ಎಸ್‌ನ ಪ್ರಾದೇಶಿಕ ನಿರ್ದೇಶನಾಲಯ ಹಾಗೂ ಕಾನೂನು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ಆಯೋಜಿಸಿದ್ದ 2024ನೇ ಸಾಲಿನ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು. ಉತ್ತಮ ಶಿಕ್ಷಣದ ಮೂಲಕ ಸಮಾಜದಲ್ಲಿ ಮಹತ್ತರ ಬದಲಾವಣೆ ತರಬಹುದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಅವಿನಾಭಾವ ಸಂಬಂಧ ಹೊಂದಬೇಕಾಗಿದೆ ಎಂದ ಅವರು, ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ವಿದ್ಯಾರ್ಥಿಗಳನ್ನು ಒಗ್ಗೂಡಿಸುತ್ತಿದೆ. ಶಿಬಿರದಲ್ಲಿ ಬೇರೆ ಬೇರೆ ರಾಜ್ಯದ 150ಕ್ಕೂ ಅಧಿಕ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ ಎಂದರು.

ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮಾತನಾಡಿ, ಈ ವರ್ಷದಲ್ಲಿ 10 ಸಾವಿರ ಎನ್‌ಎಸ್‌ಎಸ್ ಸ್ವಯಂ ಸೇವಕರ ಗುರಿ ಮುಟ್ಟಲಾಗಿದೆ. ವಿವಿಧ ಸಂಸ್ಕೃತಿಗಳ ಸಂಗಮವನ್ನು ಭಾರತದಲ್ಲಿ ಕಾಣಬಹುದು. ಬೇರೆ ಬೇರೆ ಧರ್ಮಗಳು ಇಲ್ಲಿದ್ದರೂ ವಿವಿಧೆತೆಯಲ್ಲಿ ಏಕತೆ ಹೊಂದಲಾಗಿದೆ. ಆಹಾರ ಪದ್ಧತಿ, ವೇಷಭೂಷಣ, ಭಾಷೆಗಳು ಸಾಕಷ್ಟಿದ್ದರೂ ನಾವೆಲ್ಲರೂ ಒಂದಾಗಿದ್ದೇವೆ. ದೇಶದಲ್ಲಿ ಜಾತೀಯತೆ, ಕೋಮುಗಲಭೆ, ಭಾಷಾ ತಾರತಮ್ಯ ಸೇರಿದಂತೆ ವಿವಿಧ ಸಮಸ್ಯೆ ಏದುರಿಸಬೇಕಾಗಿದೆ. ಶಿಬಿರಾರ್ಥಿಗಳು ಎಲ್ಲವನ್ನೂ ಮರೆತು ಎನ್ಎಸ್ಎಸ್ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ. ಸತೀಶಗೌಡ ಎನ್ ಮಾತನಾಡಿ, ಪ್ರತಿಯೊಬ್ಬರು ಸಮಾಜದಲ್ಲಿನ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ನಾಗರೀಕರು ತಮ್ಮ ಕರ್ತವ್ಯಗಳ ಬಗ್ಗೆ ಅರ್ಥೈಸಿಕೊಳ್ಳಬೇಕಿದೆ. ದೇಶಕ್ಕಾಗಿ ಸೇವೆ ಸಲ್ಲಿಸಲು ಎನ್ಎಸ್ಎಸ್ ಉತ್ತಮ ವೇದಿಕೆಯಾಗಿದೆ. ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರಬೇಕೇ ಹೊರತು ಪ್ರಶಸ್ತಿಗಾಗಿ ಸೇವೆ ಸಲ್ಲಿಸಬಾರದು. ಜನರಿಗೆ ತಿಳಿವಳಿಕೆ ಮೂಡಿಸಲು ಎನ್ಎಸ್ಎಸ್ ಮುಖ್ಯ ವೇದಿಕೆಯಾಗಿದೆ. ಗ್ರಾಮಗಳ ಉದ್ಧಾರ, ಪರಿಸರ ಅಭಿವೃದ್ಧಿ ಉದ್ದೇಶವನ್ನು ಎನ್ಎಸ್ಎಸ್ ಹೊಂದಿದೆ. ಗ್ರಾಮಗಳ ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಅತಿಯಾದ ಮೊಬೈಲ್ ಬಳಕೆಯಿಂದ ದುಷ್ಪರಿಣಾಮಗಳು ಆಗುತ್ತಿವೆ ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾನೂನು ವಿವಿ ಕುಲಪತಿ ಡಾ. ಸಿ. ಬಸವರಾಜು, ಉತ್ತಮ ಸಮಾಜ ನಿರ್ಮಾಣಕ್ಕೆ ಎನ್‌ಎಸ್ಎಸ್‌ ಅವಶ್ಯಕವಾಗಿದೆ. ಸರಿಯಾದ ಶಿಕ್ಷಣದ ಕೊರತೆಯಿಂದ ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಾಗುತ್ತಿಲ್ಲ. ರಾಷ್ಟ್ರದ ಐಕ್ಯತೆಗೆ ಹೆಚ್ಚಿನ ಒತ್ತು ನೀಡಬೇಕು. ಆರೋಗ್ಯಕರ ಸಮಾಜ ಕಟ್ಟಲು ಮುಂದಾಗಬೇಕು. ಎಲ್ಲ ಸಮುದಾಯ ಒಟ್ಟುಗೂಡಿಸುವ ಕೆಲಸಗಳಾಗಬೇಕಿವೆ. ಮೊದಲು ನಾವು ನಮ್ಮ ಜವಾಬ್ದಾರಿ ಅರಿತು ಮುನ್ನೆಡಯಬೇಕು. ದೇಶದ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕಿದೆ. ನಿಸ್ವಾರ್ಥ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಕಾನೂನು ವಿವಿ ಡೀನ್‌ ಡಾ. ಜಿ.ಬಿ.ಪಾಟೀಲ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ, ಎನ್‌ಎಸ್ಎಸ್‌ ಸಂಯೋಜಕ ಐ.ಬಿ. ಬಿರಾದಾರ, ಸಹಾಯಕ ಸಂಯೋಜಕಿ ದೀಪಾ ಸೇರಿದಂತೆ ವಿವಿಧ ರಾಜ್ಯಗಳ ಎನ್‌ಎಸ್ಎಸ್‌ ಸಂಯೋಜಕರು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.