ಎಸ್ಸೆಸ್ಸೆಲ್ಸಿ ಪರೀಕ್ಷೆ: 27ನೇ ಸ್ಥಾನಕ್ಕೆ ಕುಸಿದ ವಿಜಯನಗರ

| Published : May 10 2024, 01:35 AM IST

ಸಾರಾಂಶ

ಜಿಲ್ಲೆಯಲ್ಲಿ 20,619 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 13528 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಹೊಸಪೇಟೆ: ವಿಜಯನಗರ ಜಿಲ್ಲೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ 27ನೇ ಸ್ಥಾನಕ್ಕೆ ಕುಸಿದಿದ್ದು, ಕಳೆದ ಬಾರಿ ಹತ್ತನೇ ಸ್ಥಾನ ಗಳಿಸಿತ್ತು. ಈ ಬಾರಿಯ ಫಲಿತಾಂಶದಲ್ಲಿ ಭಾರೀ ಹಿನ್ನಡೆಯಾಗಿದ್ದು, ಜಿಲ್ಲಾಡಳಿತ ಕೂಡ ಎಸ್ಸೆಸ್ಸೆಲ್ಸಿ ಫಲಿತಾಂಶದ ಅವಲೋಕನಕ್ಕೆ ಇಳಿದಿದೆ.

ಜಿಲ್ಲೆಯಲ್ಲಿ 20,619 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 13528 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ.65.61ರಷ್ಟು ಫಲಿತಾಂಶದೊಂದಿಗೆ 27ನೇ ಸ್ಥಾನಕ್ಕೆ ಕುಸಿದಿದೆ. ಈ ವರ್ಷ ವಿಜಯನಗರ ಜಿಲ್ಲೆ 27ನೇ ಸ್ಥಾನಕ್ಕೆ ಬಂದಿದೆ. ಹಿಂದಿನ ವರ್ಷ 10ನೇ ಸ್ಥಾನದಲ್ಲಿತ್ತು. ಕಲ್ಯಾಣ ಕರ್ನಾಟಕ್ಕೆ ಹೋಲಿಸಿದರೆ, ವಿಜಯನಗರ ಜಿಲ್ಲೆ ಮೊದಲೇ ಸ್ಥಾನದಲ್ಲಿದೆ. 10ನೇ ಸ್ಥಾನದಿಂದ 27ನೇ ಸ್ಥಾನಕ್ಕೆ ಹೇಗೆ ಇಳಿಯಿತು ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಶಿಕ್ಷಣ ಕ್ರಮದಲ್ಲಿ ಬದಲಾವಣೆ ಕುರಿತು ಈಗಾಗಲೇ ಡಿಡಿಪಿಐ ಯುವರಾಜ ನಾಯ್ಕ ಅವರಿಗೆ ಸೂಚಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲೆಗೆ ಟಾಪರ್‌:

ಜಿಲ್ಲೆಯ ಕೊಟ್ಟೂರಿನ ಗುರುದೇವ ಶಾಲೆಯ ವಿದ್ಯಾರ್ಥಿ ಆದಿತ್ಯ ಎಸ್‌.ಎಂ. 621 ಅಂಕಗಳನ್ನು ಗಳಿಸಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾನೆ. ಹರಪನಹಳ್ಳಿಯ ವಿವಿಎಸ್‌ ಹೈಸ್ಕೂಲ್‌ ವಿದ್ಯಾರ್ಥಿ ಸಾಗರ್‌ ಕೆ.ಸಿ. 620 ಅಂಕಗಳನ್ನು ಗಳಿಸಿ ಜಿಲ್ಲೆಗೆ ಎರಡನೇ ಸ್ಥಾನಿಯಾಗಿದ್ದಾರೆ. ಕೂಡ್ಲಿಗಿಯ ಜ್ಞಾನ ಭಾರತಿ ಶಾಲೆ ವಿದ್ಯಾರ್ಥಿನಿ ಶ್ರೀಯಾ ಎನ್‌. ಪಾಟೀಲ್‌ 619 ಅಂಕಗಳನ್ನು ಗಳಿಸಿ ಜಿಲ್ಲೆಗೆ ಮೂರನೇ ಸ್ಥಾನ ಗಳಿಸಿದ್ದಾಳೆ.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆಯಾಗಿರುವುದಕ್ಕೆ ವೆಬ್‌ ಕ್ಯಾಸ್ಟಿಂಗ್‌, ಸಿಸಿ ಕ್ಯಾಮೆರಾ ಅಳವಡಿಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬ ಅಭಿಪ್ರಾಯ ಪಾಲಕರ ವಲಯದಿಂದ ಕೇಳಿ ಬರುತ್ತಿದೆ.