ಇಂಡಿಯಾ ಕೂಟದಿಂದಲೂ ಶೀಘ್ರ ಗ್ಯಾರಂಟಿ ಪ್ರಣಾಳಿಕೆ

| Published : Apr 19 2024, 01:01 AM IST / Updated: Apr 19 2024, 06:45 AM IST

ಸಾರಾಂಶ

ನವದೆಹಲಿ: ಎನ್‌ಡಿಎ ಮೈತ್ರಿಕೂಟದ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ, ಲೋಕಸಭೆಗೆ ಮೊದಲ ಹಂತದ ಚುನಾವಣೆ ಮುಗಿದ ಬಳಿಕ ತನ್ನ ಚುನಾವಣಾ ಪ್ರಣಾಳಿಕೆ ಘೋಷಿಸುವ ಸಾಧ್ಯತೆ ಇದೆ.

ನವದೆಹಲಿ: ಎನ್‌ಡಿಎ ಮೈತ್ರಿಕೂಟದ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ, ಲೋಕಸಭೆಗೆ ಮೊದಲ ಹಂತದ ಚುನಾವಣೆ ಮುಗಿದ ಬಳಿಕ ತನ್ನ ಚುನಾವಣಾ ಪ್ರಣಾಳಿಕೆ ಘೋಷಿಸುವ ಸಾಧ್ಯತೆ ಇದೆ. 

ಮೈತ್ರಿಕೂಟದ ಪಕ್ಷಗಳು ಈಗಾಗಲೇ ಪ್ರತ್ಯೇಕವಾಗಿ ತಮ್ಮ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿವೆಯಾದರೂ, ಮೈತ್ರಿಕೂಟದ ಪರವಾಗಿ ಒಂದು ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದು ಅದನ್ನು ಶೀಘ್ರವೇ ಬಿಡುಗಡೆ ಮಾಡಲಿವೆ ಎಂದು ಮೂಲಗಳು ತಿಳಿಸಿವೆ.ಭರವಸೆಗಳನ್ನು ಮುಖ್ಯವಾಗಿ ಉದ್ಯೋಗ, ಸಾಮಾಜಿಕ ನ್ಯಾಯ, ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ, ಕೃಷಿ ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕರು ಎಂಬ 7 ತತ್ವಗಳ ಆಧಾರದಲ್ಲಿ ರೂಪಿಸಲಾಗಿದೆ.

ಏನೇನು ಭರವಸೆ?:

ಪ್ರತಿ ಕುಟುಂಬಕ್ಕೂ ಮಾಸಿಕ 200 ಯುನಿಟ್‌ ಉಚಿತ ವಿದ್ಯುತ್‌, ಮಹಿಳೆಯರಿಗೆ ಮಾಸಿಕ 1000 ರು. ಆರ್ಥಿಕ ನೆರವು, ಕೇಂದ್ರದ ತನಿಖಾ ಸಂಸ್ಥೆಗಳ ಅಧಿಕಾರ ಮೊಟಕು, ಪುಲ್ವಾಮಾ ಉಗ್ರ ದಾಳಿ ಮತ್ತು ಇತರೆ ರಾಷ್ಟ್ರೀಯ ಭದ್ರತಾ ವಿಚಾರಗಳ ಕುರಿತು ಶ್ವೇತಪತ್ರ ಬಿಡುಗಡೆ, ಸೇನೆಗೆ ನೇಮಕಾತಿ ಮಾಡಲು ರೂಪಿಸಲಾಗಿರುವ ಅಗ್ನಿವೀರ ಯೋಜನೆ ರದ್ದು, ಚುನಾವಣಾ ಬಾಂಡ್‌ ಕುರಿತು ಎಸ್‌ಐಟಿ ತನಿಖೆ, ರೈತರ ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತ್ರಿ, ಕೇಂದ್ರದಲ್ಲಿ 30 ಲಕ್ಷ ಹುದ್ದೆ ಭರ್ತಿ, ನಗರ ಉದ್ಯೋಗ ಖಾತ್ರಿ ಯೋಜನೆ, ಜಾತಿ ಗಣತಿ, ಶೇ.50ರ ಮೀಸಲು ಮಿತಿ ರದ್ದು, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಲು ಮೈತ್ರಿಕೂಟ ನಿರ್ಧರಿಸಿದೆ.