ಅಣುಕು ಪರೀಕ್ಷೆ ವೇಳೆ ಬಿಜೆಪಿಗೆ 1 ಮತ ಹೆಚ್ಚು ನೀಡಿದ ಇವಿಎಂ..?

| Published : Apr 19 2024, 01:00 AM IST / Updated: Apr 19 2024, 06:51 AM IST

ಸಾರಾಂಶ

ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಪ್ರತಿಪಕ್ಷಗಳು ಆಗಿಂದಾಗ್ಗೆ ಸಂದೇಹ ವ್ಯಕ್ತಪಡಿಸುತ್ತಿರುವ ನಡುವೆಯೇ, ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಅಣಕು ಕಾರ್ಯಾಚರಣೆ ವೇಳೆ 4 ಇವಿಎಂಗಳು ಬಿಜೆಪಿ ಪರ ಹೆಚ್ಚುವರಿಯಾಗಿ ಒಂದು ಮತ ನೀಡಿವೆ ಎಂದು ಎಲ್‌ಡಿಎಫ್‌ ಹಾಗೂ ಯುಡಿಎಫ್‌ ಏಜೆಂಟರು ಆಪಾದಿಸಿದ್ದಾರೆ.

ಕಾಸರಗೋಡು/ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಪ್ರತಿಪಕ್ಷಗಳು ಆಗಿಂದಾಗ್ಗೆ ಸಂದೇಹ ವ್ಯಕ್ತಪಡಿಸುತ್ತಿರುವ ನಡುವೆಯೇ, ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಅಣಕು ಕಾರ್ಯಾಚರಣೆ ವೇಳೆ 4 ಇವಿಎಂಗಳು ಬಿಜೆಪಿ ಪರ ಹೆಚ್ಚುವರಿಯಾಗಿ ಒಂದು ಮತ ನೀಡಿವೆ ಎಂದು ಎಲ್‌ಡಿಎಫ್‌ ಹಾಗೂ ಯುಡಿಎಫ್‌ ಏಜೆಂಟರು ಆಪಾದಿಸಿದ್ದಾರೆ.

ಈ ವಿಷಯ ಸುಪ್ರೀಂಕೋರ್ಟ್‌ನಲ್ಲೂ ಗುರುವಾರ ಪ್ರಸ್ತಾಪವಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಇದರ ಬೆನ್ನಲ್ಲೇ ನ್ಯಾಯಾಲಯಕ್ಕೆ ಖುದ್ದು ಹಾಜರಾದ ಹಿರಿಯ ಉಪ ಚುನಾವಣಾ ಆಯುಕ್ತ ನಿತೇಶ್‌ ಕುಮಾರ್ ವ್ಯಾಸ್‌ ಅವರು, ಬಿಜೆಪಿ ಪರ ಇವಿಎಂಗಳು ಒಂದು ಹೆಚ್ಚುವರಿ ಮತ ನೀಡಿದ ವರದಿಗಳು ಸುಳ್ಳು. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದಲೇ ಪರಿಶೀಲನೆ ನಡೆಸಿದ್ದೇವೆ. ವಿವರವಾದ ವರದಿಯನ್ನೂ ಕೋರ್ಟ್‌ಗೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಆಗಿದ್ದೇನು?:

ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ 190 ಬೂತ್‌ಗಳು ಇವೆ. ಈ ಬೂತ್‌ಗಳ ಇವಿಎಂಗಳನ್ನು ಬುಧವಾರ ಅಣಕು ಪರೀಕ್ಷೆಗೆ ಒಳಪಡಿಸಲಾಯಿತು. ಕಣದಲ್ಲಿ 10 ಅಭ್ಯರ್ಥಿಗಳಿದ್ದು, ಮೊದಲ ಹೆಸರು ಬಿಜೆಪಿಯ ಎಂ.ಎಲ್‌. ಅಶ್ವಿನಿ ಅವರದ್ದಾಗಿತ್ತು. ಏಕಕಾಲಕ್ಕೆ 20 ಯಂತ್ರಗಳನ್ನು ಪರೀಕ್ಷೆಗೆ ಇಟ್ಟು, ಎಲ್ಲ 10 ಅಭ್ಯರ್ಥಿಗಳ ಎದುರಿದ್ದ ಗುಂಡಿ ಒತ್ತಲಾಯಿತು. ಆದರೆ ನಾಲ್ಕು ಮತಯಂತ್ರಗಳ ವಿವಿಪ್ಯಾಟ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಪರ 2 ಮತಗಳು ಚಲಾವಣೆಯಾದವು.

ಬಿಜೆಪಿ ಅಭ್ಯರ್ಥಿಯ ಎದುರಿನ ಗುಂಡಿ ಒತ್ತದಿದ್ದರೂ, ಅದೇ ನಾಲ್ಕು ಇವಿಎಂಗಳ ವಿವಿಪ್ಯಾಟ್‌ಗಳು ಬಿಜೆಪಿ ಪರ ಒಂದು ಮತ ನೀಡಿದವು ಎಂದು ಯುಡಿಎಫ್‌ ಅಭ್ಯರ್ಥಿಯ ಏಜೆಂಟ್‌ ಆಗಿರುವ ನಾಸರ್‌ ಚೆರ್ಕಲಂ ಅಬ್ದುಲ್ಲಾ ಅವರು ದೂರಿದ್ದಾರೆ. ಈ ಬಗ್ಗೆ ಸಿಪಿಎಂ ಅಭ್ಯರ್ಥಿ ಬಾಲಕೃಷ್ಣನ್‌ ಕೂಡ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಸಿಪಿಎಂ, ಕಾಂಗ್ರೆಸ್‌ ಅಭ್ಯರ್ಥಿಗಳ ಎದುರಿನ ಗುಂಡಿ ಒತ್ತಿದಾಗ ಈ ರೀತಿ ಎರಡು ಮತ ಚಲಾವಣೆ ಆಗಲಿಲ್ಲ. ಆದರೆ ಬಿಜೆಪಿ ಅಭ್ಯರ್ಥಿಗೆ ಮಾತ್ರ ಎರಡು ಮತ ಬರುತ್ತಿವೆ ಎಂದು ನಾಸರ್‌ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಚನಾವಣಾಧಿಕಾರಿ ಬಿನುಮೋನ್‌ ಪಿ ಅವರು, ಯಂತ್ರ ಚಾಲೂ ಮಾಡಿದಾಗ ನಾಲ್ಕು ಯಂತ್ರಗಳಲ್ಲಿ ದೋಷ ಕಂಡುಬಂದಿದೆ. ಎಲ್ಲ ಯಂತ್ರಗಳಲ್ಲೂ ವಿವಿಪ್ಯಾಟ್‌ನ ಮೊದಲ ಚೀಟಿ ‘ಈ ಮತ ಎಣಿಸಬೇಡಿ’ ಎಂದು ಬರಬೇಕು. ಆದರೆ ಈ ನಾಲ್ಕು ಮತಯಂತ್ರಗಳಿಂದ ಮತ ಚಲಾವಣೆ ಮಾಡಿದಾಗ, ಅದರಲ್ಲಿದ್ದ ಮೊದಲ ಅಭ್ಯರ್ಥಿ ಪರ ಮತ ಬಿದ್ದಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದಿದ್ದಾರೆ.

ಈ ವಿಷಯವನ್ನು ಪ್ರಕರಣವೊಂದರ ವಿಚಾರಣೆ ವೇಳೆ ವಕೀಲ ಪ್ರಶಾಂತ್‌ ಭೂಷಣ್‌ ಅವರು ಸುಪ್ರೀಂಕೋರ್ಟ್‌ ಗಮನಕ್ಕೆ ತಂದಿದ್ದಾರೆ. ಆದರೆ ಆಯೋಗ ಈ ವರದಿಯನ್ನು ಸುಳ್ಳು ಎಂದು ನಿರಾಕರಿಸಿದೆ.