ಏ.28ರಂದು ಕುಂಡ್ಯೋಳಂಡ ಕಪ್‌ ಕೊಡವ ಕೌಟುಂಬಿಕ ಹಾಕಿ ಫೈನಲ್‌

| Published : Apr 26 2024, 12:48 AM IST / Updated: Apr 26 2024, 04:39 AM IST

ಏ.28ರಂದು ಕುಂಡ್ಯೋಳಂಡ ಕಪ್‌ ಕೊಡವ ಕೌಟುಂಬಿಕ ಹಾಕಿ ಫೈನಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ. ನಾಪೋಕ್ಲಿನಲ್ಲಿ ಸಮಾರೋಪ ಸಮಾರಂಭ. ವಿಜೇತ ತಂಡಕ್ಕೆ 4 ಲಕ್ಷ ರು. ನಗದು.

  ಕೊಡವ ಕುಟುಂಬಗಳ ನಡುವಿನ 24ನೇ ಹಾಕಿ ಹಬ್ಬ ಪ್ರತಿಷ್ಠಿತ ‘ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024’ರ ಅಂತಿಮ ಪಂದ್ಯಾಟ ಮತ್ತು ಸಮಾರೋಪ ಸಮಾರಂಭ 28ರಂದು ನಾಪೋಕ್ಲು ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾಕೂಟ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 7 ಗಂಟೆಗೆ ಕಕ್ಕಬ್ಬೆಯಿಂದ ನಾಪೋಕ್ಲು ವರೆಗೆ ಕೊಡವ ಕುಟುಂಬಗಳ ನಡುವೆ 2.50 * 4 ಕಿ.ಮೀ. ದೂರದ ಓಟದ ಸ್ಪರ್ಧೆ ‘ಫ್ಯಾಮಿಲಿ ರಿಲೇ’ ನಡೆಯಲಿದೆ. ಒಂದು ಕುಟುಂಬ ತಂಡದಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಪಾಲ್ಗೊಳ್ಳಬಹುದಾಗಿದೆ ಎಂದರು.ವಿಜೇತರಿಗೆ ಮೊದಲ ಬಹುಮಾನ ರು.50 ಸಾವಿರ, ದ್ವಿತೀಯ ಬಹುಮಾನ ರು. 30 ಸಾವಿರ ಹಾಗೂ ತೃತೀಯ 20 ಸಾವಿರ ರು. ನೀಡಲಾಗುವುದು. 

ಸ್ಪರ್ಧಿಗಳು ಅಂದು ಬೆಳಗ್ಗೆ 6 ಗಂಟೆಗೆ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಾಜರಿರಬೇಕು. ನೋಂದಣಿಗೆ ಏ.26 ಬೆಳಗ್ಗೆ 11 ಗಂಟೆ ವರೆಗೆ ಕಾಲಾವಕಾಶ ಇದೆ. ಸ್ಪರ್ಧಿಗಳು ಮೊ.ಸಂಖ್ಯೆ 91489 30760 ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ‘ದೊಡ್ಡ ಮೀಸೆ ಮತ್ತು ಉದ್ದ ಜಡೆಯ ಪ್ರದರ್ಶನ’ದ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧಿಗಳು ಮೊ.ಸಂಖ್ಯೆ 94488 39988ನ್ನು ಸಂಪರ್ಕಿಸಬಹುದಾಗಿದೆ.

ಭಾನುವಾರ ಬೆಳಗ್ಗೆ 10.30ಕ್ಕೆ ಅಂತಿಮ ಪಂದ್ಯಾವಳಿಯ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದು, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಉಪಸ್ಥಿತರಿರುವರು. 

ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಐಆರ್‌ಎಸ್ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಡಾ.ಕೊಟ್ಟಂಗಡ ಪೆಮ್ಮಯ್ಯ, ಹೈದರಾಬಾದ್ ವಿದೇಶಿ ತನಿಖಾ ಘಟಕದ ಉಪ ನಿರ್ದೇಶಕ ಮುಕ್ಕಾಟಿರ ಪುನಿತ್ ಕುಟ್ಟಯ್ಯ, ನಾರಾಯಣ ಆರೋಗ್ಯ ಸಮೂಹದ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ.ಪುಚ್ಚಿಮಾಡ ಎಂ.ಉತ್ತಪ್ಪ (ಸಂತೋಷ್), ಸಿ.ಸಿ.ಇಂಡಿಯಾ ಪ್ರವೈಟ್ ಲಿ. ವ್ಯವಸ್ಥಾಪಕ ನಿರ್ದೇಶಕರ ಕೊಡಂಗಡ ರವಿ ಕರುಂಬಯ್ಯ, ಪಾಂಡಂಡ ಲೀಲಾ ಕುಟ್ಟಪ್ಪ, ಒಲಂಪಿಯನ್ ಡಾ.ಅಂಜಪರವಂಡ ಬಿ.ಸುಬ್ಬಯ್ಯ, ರಿಪಬ್ಲಿಕ್ ನೆಟ್‌ವರ್ಕ್ನ ಅಧ್ಯಕ್ಷ ಹಾಗೂ ಅಂತಾರಾಷ್ಟ್ರೀಯ ಉದ್ಯಮಿ ಚೇರಂಡ ಕಿಶನ್ ಪಾಲ್ಗೊಳ್ಳಲಿದ್ದಾರೆ.

ದೀಪಕ್ ಚೋಪ್ರಾ ಫೌಂಡೇಶನ್ ಸಿಇಒ ಬಲ್ಯತಂಡ ಪೂಣಚ್ಚ ಮಾಚಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿಕಂಡ ಮಹೇಶ್ ನಾಚಯ್ಯ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಇಬ್ನಿ ಕೂರ್ಗ್ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಸಬಾಸ್ಟಿಯನ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕ ಪೀಟರ್, ನಾಪೋಕ್ಲು ಗ್ರಾ.ಪಂ ಉಪಾಧ್ಯಕ್ಷ ಕುಲ್ಲೇಟ್ಟಿರ ಹೇಮಾವತಿ ಅರುಣ್ ಬೇಬಾ, ಟಾಟಾ ಕಾಫಿ ವ್ಯವಸ್ಥಾಪಕ ನಿರ್ದೇಶಕ ಪಿ.ಎ.ಮಂದಣ್ಣ, ನಾಪೋಕ್ಲು ಕೆಪಿಎಸ್ ಸ್ಕೂಲ್‌ನ ಪ್ರಾಂಶುಪಾಲೆ ಮೇದುರ ವಿಶಾಲ ಕುಶಾಲಪ್ಪ, ಉಪ ಪ್ರಾಂಶುಪಾಲೆ ಎಂ.ಎಸ್.ಶಿವಣ್ಣ, ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಚಕ್ರವರ್ತಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಅತಿಥಿಗಳಾಗಿ ಆರ್.ವಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಪಿ.ಶ್ಯಾಮ್, ಆರ್.ವಿ.ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಿ.ಪಿ.ನಾಗರಾಜ್, ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥ ಮಹೇಶ್ ಶೆಣೈ, ಉದ್ಯಮಿ ಕಂಬೆಯಂಡ ಶ್ಯಾಮ್ ಭಾಗವಹಿಸಲಿದ್ದಾರೆ.ಸಭಾ ಕಾರ್ಯಕ್ರಮದ ನಂತರ ಅಂತಿಮ ಪಂದ್ಯಾಟ ನಡೆಯಲಿದೆ. ಅಂತಿಮ ಪಂದ್ಯಾಟವನ್ನು ಸುಮಾರು 50 ಸಾವಿರ ಕ್ರೀಡಾಭಿಮಾನಿಗಳು ವೀಕ್ಷಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

₹4 ಲಕ್ಷ ಬಹುಮಾನ: ಕುಂಡ್ಯೋಳಂಡ ಹಾಕಿ ಹಬ್ಬದ ವಿಜೇತ ತಂಡಕ್ಕೆ ರು.4 ಲಕ್ಷ, ದ್ವಿತೀಯ 3 ಲಕ್ಷ, ತೃತೀಯ 2ಲಕ್ಷ ಮತ್ತು ನಾಲ್ಕನೇ ಸ್ಥಾನದ ತಂಡಕ್ಕೆ ರು.1 ಲಕ್ಷ ನಗದು, ಆಕರ್ಷಕ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನಗಳನ್ನು ನೀಡಲಾಗುವುದು. ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫ್ಯಾಶನ್ ಶೋ, ಕಾನ್ಸರ್ಟ್ ಕಲಾವಿದರಾದ ಸ್ವರ, ಗುಬ್ಬಿ ಹಾಗೂ ಕೊಡಗಿನ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. 

ನಾಳೆ ಸೆಮಿಫೈನಲ್: ಶನಿವಾರ ಬೆಳಗ್ಗೆ 10.30ಕ್ಕೆ ನಡೆಯುವ ಸೆಮಿ ಫೈನಲ್ ಪಂದ್ಯಾವಳಿಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಹಾಗೂ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಪಾಲ್ಗೊಳ್ಳಲಿದ್ದಾರೆ. ಎರಡನೇ ಪಂದ್ಯದ ಅತಿಥಿಯಾಗಿ ಹಿರಿಯ ಹಾಕಿಪಟು ಡಾ.ಕಲಿಯಾಟಂಡ ಚಿಣ್ಣಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇ.ಜ.ಬಾಚಮಂಡ ಎ.ಕಾರ್ಯಪ್ಪ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೊಡವ ಕ್ರೀಡಾಪಟುಗಳು, ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸಿದ ಅಂಪೈರ್‌ಗಳು, ತಾಂತ್ರಿಕವರ್ಗ, ಪತ್ರಿಕಾ ಕ್ಷೇತ್ರದ ಕೊಡವ ಸಾಧಕರು ಹಾಗೂ ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸಿ ಗೌರವಿಸಲಾಗುವುದು. ಏ.27 ಮತ್ತು 28 ರಂದು ಎರಡು ದಿನ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ಎ.ನಾಣಯ್ಯ ವಹಿಸಲಿದ್ದಾರೆ.

ದಾಖಲೆಯ 360 ತಂಡಗಳು: 24ನೇ ಹಾಕಿ ಹಬ್ಬವನ್ನು ಕುಂಡ್ಯೋಳಂಡ ಕುಟುಂಬದ ಸಾರಥ್ಯದಲ್ಲಿ ನಡೆಸಲಾಗಿದೆ. ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಕರ್ನಾಟಕ ಹಾಗೂ ಸ್ಥಳೀಯ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದ್ದಾರೆ. ಪಾಂಡಂಡ ಕುಟ್ಟಣ್ಣಿ ಹಾಗೂ ಅವರ ಸಹೋದರ ಕಾಶಿಯವರಿಂದ ಕೊಡವ ಹಾಕಿ ಉತ್ಸವ ಆರಂಭವಾಯಿತು.

1997 ರಲ್ಲಿ ಕರಡದಲ್ಲಿ ಪಾಂಡಂಡ ಕುಟುಂಬ ಮೊದಲ ಬಾರಿಗೆ ಆಯೋಜಿಸಿದ್ದ ಹಾಕಿಹಬ್ಬದಲ್ಲಿ 60 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ 360 ತಂಡಗಳ ನೋಂದಣಿಯೊಂದಿಗೆ ಹೊಸ ದಾಖಲೆ ಸೃಷ್ಟಿಸುವ ಮೂಲಕ ಪ್ರತಿಷ್ಠಿತ ಕಪ್ ಗಾಗಿ ಸೆಣಸಾಟ ನಡೆದಿರುವುದು ವಿಶೇಷ. ಇದೇ ಮೊದಲ ಬಾರಿಗೆ ‘ಕುಂಡ್ಯೋಳಂಡ ಹಾಕಿ ಹಬ್ಬ’ ಗಿನ್ನಿಸ್ ದಾಖಲೆಯ ಪುಟದಲ್ಲಿ ಸ್ಥಾನ ಪಡೆಯಲು ಅಧಿಕೃತ ಅನುಮತಿ ಪಡೆದಿದ್ದು, ಅಂತಿಮ ಪಂದ್ಯಾಟ ನಡೆಯುವ ಏ.28 ರಂದು ತೀರ್ಪುಗಾರರ ತಂಡ ಆಗಮಿಸಲಿದೆ ಎಂದು ಅವರು ಮಾಹಿತಿ ನೀಡಿದರು. ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಖಜಾಂಚಿ ಕುಂಡ್ಯೋಳಂಡ ವಿಶು ಪೂವಯ್ಯ, ಸದಸ್ಯರಾದ ಕುಂಡ್ಯೋಳಂಡ ಸುರೇಶ್ ಉತ್ತಪ್ಪ, ಕುಂಡ್ಯೋಳಂಡ ಶಂಭು ಪೂಣಚ್ಚ ಇದ್ದರು.