ಟಿ20: ಬಾಂಗ್ಲಾ ವನಿತೆಯರ ವಿರುದ್ಧ ಭಾರತ 5-0 ಕ್ಲೀನ್‌ಸ್ವೀಪ್‌

| Published : May 10 2024, 01:34 AM IST / Updated: May 10 2024, 04:19 AM IST

ಸಾರಾಂಶ

ಕೊನೆ ಟಿ20 ಪಂದ್ಯದಲ್ಲಿ ಭಾರತ 21 ರನ್‌ ಗೆಲುವು ಸಾಧಿಸಿತು. ರಾಧಾ ಯಾದವ್‌ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸೈಲೆಟ್‌: ಬಾಂಗ್ಲಾದೇಶ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮಹಿಳಾ ತಂಡ 5-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಗುರುವಾರ ಇಲ್ಲಿ ನಡೆದ ಕೊನೆ ಟಿ20 ಪಂದ್ಯದಲ್ಲಿ ಭಾರತ 21 ರನ್‌ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರಲ್ಲಿ 5 ವಿಕೆಟ್‌ಗೆ 156 ರನ್‌ ಕಲೆಹಾಕಿತು. ಹೇಮಲತಾ 37, ಸ್ಮೃತಿ ಮಂಧನಾ 33, ನಾಯಕಿ ಹರ್ಮನ್‌ಪ್ರೀತ್ ಕೌರ್ 30 ರನ್‌ ಸಿಡಿಸಿದರೆ, ಕೊನೆಯಲ್ಲಿ ರಿಚಾ ಘೋಷ್‌ 17 ಎಸೆತಗಳಲ್ಲಿ 38 ರನ್‌ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಬಾಂಗ್ಲಾ ಪರ ನಹಿದಾ ಅಖ್ತರ್‌ ಹಾಗೂ ರಬೆಯಾ ಖಾನ್‌ ತಲಾ 2 ವಿಕೆಟ್‌ ಪಡೆದರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾ, ಭಾರತದ ಮಾರಕ ದಾಳಿಗೆ ತತ್ತರಿಸಿ 20 ಓವರಲ್ಲಿ 6 ವಿಕೆಟ್‌ಗೆ 136 ರನ್‌ ಗಳಿಸಿ ಸೋಲಪ್ಪಿಕೊಂಡಿತು. ರಿತು ಮೋನಿ(33 ಎಸೆತಗಳಲ್ಲಿ 37) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರೆ, ಶೊರಿಫಾ ಖಾತೂನ್‌ 21 ಎಸೆತಗಳಲ್ಲಿ 28 ರನ್‌ ಸಿಡಿಸಿ ಸೋಲಿನ ಅಂತರವನ್ನು ತಗ್ಗಿಸಿದರು. ಭಾರತದ ಪರ ರಾಧಾ ಯಾದವ್‌ 4 ಓವರಲ್ಲಿ 24 ರನ್‌ಗೆ 3 ವಿಕೆಟ್‌ ಕಿತ್ತರೆ, ಆಶಾ ಶೋಭನಾ 25ಕ್ಕೆ 2 ವಿಕೆಟ್‌ ಕಬಳಿಸಿದರು.ರಾಧಾ ಯಾದವ್‌ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.