1 ತಿಂಗಳ ಬಳಿಕ ಆರ್‌ಸಿಬಿಗೆ ಗೆಲುವಿನ ಆಕ್ಸಿಜನ್‌!

| Published : Apr 26 2024, 12:48 AM IST / Updated: Apr 26 2024, 04:40 AM IST

ಸಾರಾಂಶ

ಸತತ 6 ಸೋಲಿನ ಬಳಿಕ ಎಚ್ಚೆತ್ತು ಗೆದ್ದ ಆರ್‌ಸಿಬಿ. ಸ್ಫೋಟಕ ಬ್ಯಾಟಿಂಗ್‌, ಕೊನೆಗೂ ಕೈಹಿಡಿದ ಬೌಲರ್ಸ್‌, ಹೈದ್ರಾಬಾದ್‌ ವಿರುದ್ಧ 35 ರನ್‌ ಜಯ. ಕೊಹ್ಲಿ, ರಜತ್‌ ಫಿಫ್ಟಿ, ಆರ್‌ಸಿಬಿ 7 ವಿಕೆಟ್‌ಗೆ 206. ಸನ್‌ರೈಸರ್ಸ್‌ 8 ವಿಕೆಟ್‌ಗೆ 171 ರನ್. ಆರ್‌ಸಿಬಿಗೆ 9ರಲ್ಲಿ 2ನೇ ಜಯ, ಸನ್‌ಗೆ 3ನೇ ಸೋಲು

ಹೈದರಾಬಾದ್‌: ದೀರ್ಘ ಸಮಯದಿಂದ ಆರ್‌ಸಿಬಿ ಆಟಗಾರರು, ಅಭಿಮಾನಿಗಳ ಮುಖದಿಂದ ಕಣ್ಮರೆಯಾಗಿದ್ದ ನಗು ಮತ್ತೆ ಮೂಡಿದೆ. ಸತತ 6 ಪಂದ್ಯಗಳ ಸೋಲಿನಿಂದ ಕುಗ್ಗಿ ಹೋಗಿ, ಪ್ಲೇ-ಆಫ್ ಆಸೆಯನ್ನೂ ಬಹುತೇಕ ಕೈಬಿಟ್ಟಿರುವ ಆರ್‌ಸಿಬಿ 1 ತಿಂಗಳ ಬಳಿಕ ಮತ್ತೆ ಗೆಲುವಿನ ಹಳಿಗೆ ಮರಳಿದೆ. 

ಗುರುವಾರ ಸನ್‌ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ 35 ರನ್‌ ಗೆಲುವು ದಾಖಲಿಸಿತು.ಬ್ಯಾಟರ್‌ಗಳ ಸ್ಫೋಟಕ ಆಟ, ಕೊನೆಗೂ ತಂಡದ ಕೈಹಿಡಿದ ಬೌಲರ್‌ಗಳು ಆರ್‌ಸಿಬಿಗೆ ಗೆಲುವು ತಂದುಕೊಟ್ಟರು. 

ಆದರೆ ತಂಡಕ್ಕಿದು ಆಡಿರುವ 9ರಲ್ಲಿ ಕೇವಲ 2 ಜಯ. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಿಂದ ಮೇಲೇರಲು ಸಾಧ್ಯವಾಗಿಲ್ಲ. ಅತ್ತ ಹೈದ್ರಾಬಾದ್‌ 3ನೇ ಸೋಲನುಭವಿಸಿತು.ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಕಲೆಹಾಕಿದ್ದು 7 ವಿಕೆಟ್‌ಗೆ 206 ರನ್‌. ಸನ್‌ರೈಸರ್ಸ್‌ನ ಆರ್ಭಟದ ಮುಂದೆ ಈ ಸ್ಕೋರ್‌ ಏನೇನೂ ಆಗಿರಲಿಲ್ಲ. ಆದರೆ ಅಪರೂಪಕ್ಕೆ ಎಂಬಂತೆ ಆರ್‌ಸಿಬಿ ಬೌಲರ್‌ಗಳು ಮಿಂಚಿದರು. 

ಸನ್‌ರೈಸರ್ಸ್‌ ಮಂಕಾಯಿತು. 8 ವಿಕೆಟ್‌ಗೆ 171 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.ಮೊದಲ ಓವರಲ್ಲೇ ಟ್ರ್ಯಾವಿಸ್ ಹೆಡ್‌(01)ಗೆ ಜ್ಯಾಕ್ಸ್‌ ಪೆವಿಲಿಯನ್‌ ಹಾದಿ ತೋರಿದರು. ಪವರ್‌-ಪ್ಲೇಗೂ ಮುನ್ನವೇ ಅಭಿಷೇಕ್‌(13 ಎಸೆತದಲ್ಲಿ 31), ಮಾರ್ಕ್‌ರಮ್‌(07), ಕ್ಲಾಸೆನ್‌(07) ವಿಕೆಟ್‌ ಬೀಳುವುದರೊಂದಿಗೆ ತಂಡದ ಸೋಲು ಖಚಿತವಾಗಿತ್ತು. ಕೊನೆಯಲ್ಲಿ ಪ್ಯಾಟ್‌ ಕಮಿನ್ಸ್‌(15 ಎಸೆತದಲ್ಲಿ 31), ಶಾಬಾಜ್‌(ಔಟಾಗದೆ 40) ಹೋರಾಟ ತಂಡದ ಸೋಲಿನ ಅಂತರವನ್ನಷ್ಟೆ ಕಡಿಮೆಗೊಳಿಸಿತು. ಸ್ವಪ್ನಿಲ್‌ ಸಿಂಗ್‌, ಗ್ರೀನ್‌, ಕರ್ಣ್‌ ತಲಾ 2 ವಿಕೆಟ್‌ ಕಿತ್ತರು.

ರಜತ್‌ ಅಬ್ಬರ: 250 ಕೂಡಾ ಸನ್‌ರೈಸರ್ಸ್‌ಗೆ ಕಡಿಮೆ ಎಂಬ ಅರಿವಿದ್ದ ಆರ್‌ಸಿಬಿ ಮೊದಲ ಎಸೆತದಿಂದಲೇ ಅಬ್ಬರಿಸತೊಡಗಿತು. 3 ಓವರಲ್ಲೇ 43 ರನ್‌ ಬಂತು. ಆದರೆ ಡು ಪ್ಲೆಸಿ(25), ಜ್ಯಾಕ್ಸ್‌(06) ವಿಕೆಟ್‌ ಬಿದ್ದ ಬಳಿಕ ರನ್‌ ವೇಗ ಕಡಿಮೆಯಾಯಿತು. ಈ ಹಂತದಲ್ಲಿ ಕೊಹ್ಲಿಗೆ ಜೊತೆಯಾದ ರಜತ್‌ ಪಾಟೀದಾರ್‌, ಮಾರ್ಕಂಡೆ ಓವರಲ್ಲಿ ಸತತ 4 ಸಿಕ್ಸರ್‌ ಸೇರಿದಂತೆ 20 ಎಸೆತದಲ್ಲಿ 50 ರನ್‌ ಚಚ್ಚಿ ತಂಡದ ಆಪತ್ಬಾಂಧವರಾಗಿ ಮೂಡಿಬಂದರು. 

ಆದರೆ ಕೊಹ್ಲಿ(43 ಎಸೆತದಲ್ಲಿ 51) ಆಟ ಇನ್ನಿಂಗ್ಸ್‌ ಸಾಗುತ್ತಿದಂತೆಯೇ ಸಪ್ಪೆಯಾಯಿತು. ಪವರ್‌-ಪ್ಲೇ ವೇಳೆ 18 ಎಸೆತದಲ್ಲಿ 32 ರನ್‌ ಸಿಡಿಸಿದ್ದ ಕೊಹ್ಲಿ, ನಂತರದ 25 ಎಸೆತದಲ್ಲಿ ಅವರು ಗಳಿಸಿದ್ದು ಕೇವಲ 19 ರನ್‌. ಕೊನೆಯಲ್ಲಿ ಗ್ರೀನ್‌ ಔಟಾಗದೆ 37 ರನ್‌ ಬಾರಿಸಿ 200ರ ಗಡಿ ದಾಟಿಸಿದರು. ಸ್ಕೋರ್‌: ಆರ್‌ಸಿಬಿ 20 ಓವರಲ್ 206/7 (ಕೊಹ್ಲಿ 51, ರಜತ್‌ 50, ಉನಾದ್ಕಟ್‌ 3-30), ಹೈದರಾಬಾದ್‌ 20 ಓವರಲ್ಲಿ 171/8 (ಶಾಬಾಜ್‌ 40*, ಅಭಿಷೇಕ್‌ 31, ಕಮಿನ್ಸ್‌ 31, ಗ್ರೀನ್‌ 2-12) ಪಂದ್ಯಶ್ರೇಷ್ಠ: ರಜತ್‌ ಪಾಟೀದಾರ್‌.