10 ಆವೃತ್ತಿಗಳಲ್ಲಿ ತಲಾ 400+ರನ್‌: ವಿರಾಟ್‌ ಕೊಹ್ಲಿ ದಾಖಲೆ

| Published : Apr 26 2024, 12:45 AM IST / Updated: Apr 26 2024, 04:42 AM IST

ಸಾರಾಂಶ

10 ವಿವಿಧ ಆವೃತ್ತಿಗಳಲ್ಲಿ ತಲಾ 400 ರನ್‌ ಕಲೆಹಾಕಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ವಿರಾಟ್‌ ಕೊಹ್ಲಿ ಅವರು ಪಾತ್ರರಾಗಿದ್ದಾರೆ. ಈ ಬಾರಿ ಆರೆಂಜ್‌ ಕ್ಯಾಪ್‌ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಹೈದರಾಬಾದ್‌: ರನ್‌ ಮೆಷಿನ್‌ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 10 ವಿವಿಧ ಆವೃತ್ತಿಗಳಲ್ಲಿ ತಲಾ 400+ ರನ್‌ ಕಲೆಹಾಕಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ವಿರಾಟ್‌ ಕೊಹ್ಲಿ ಅವರು ಪಾತ್ರರಾಗಿದ್ದಾರೆ.

ಗುರುವಾರ ಸನ್‌ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ 43 ಎಸೆತಗಳಲ್ಲಿ 51 ರನ್‌ ಬಾರಿಸಿದ ಕೊಹ್ಲಿ, ಈ ಬಾರಿಯ ಐಪಿಎಲ್‌ನ ರನ್‌ ಗಳಿಕೆಯನ್ನು 430ಕ್ಕೆ ಹೆಚ್ಚಿಸಿದರು. ಇದರೊಂದಿಗೆ ಅತಿ ಹೆಚ್ಚು ಆವೃತ್ತಿಗಳಲ್ಲಿ ತಲಾ 400+ ರನ್‌ ಕಲೆಹಾಕಿದ ಆಟಗಾರ ಎನಿಸಿಕೊಂಡರು. 

ಸುರೇಶ್‌ ರೈನಾ, ಡೇವಿಡ್ ವಾರ್ನರ್‌ ಹಾಗೂ ಶಿಖರ್ ಧವನ್‌ ತಲಾ 9 ಬಾರಿ, ರೋಹಿತ್‌ ಶರ್ಮಾ 7 ಬಾರಿ ಈ ಸಾಧನೆ ಮಾಡಿದ್ದಾರೆ. ವಿರಾಟ್‌ ಕೊಹ್ಲಿ 2011ರಲ್ಲಿ 557, 2023ರಲ್ಲಿ 634, 2015ರಲ್ಲಿ 505, 2016ರಲ್ಲಿ 973 ರನ್‌ ಕಲೆಹಾಕಿದ್ದರು. 

2018ರಲ್ಲಿ 530, 2019ರಲ್ಲಿ 464, 2020ರಲ್ಲಿ 466, 2021ರಲ್ಲಿ 405 ಹಾಗೂ 2023ರಲ್ಲಿ 639 ರನ್‌ ಸಿಡಿಸಿದ್ದಾರೆ. ಈ ಬಾರಿ ಆರೆಂಜ್‌ ಕ್ಯಾಪ್‌ ತನ್ನಲ್ಲೇ ಇಟ್ಟುಕೊಂಡಿರುವ ವಿರಾಟ್‌, ಮತ್ತಷ್ಟು ರನ್‌ ಕಲೆಹಾಕಿ ಕ್ಯಾಪ್‌ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.ಇದೇ ವೇಳೆ ಐಪಿಎಲ್‌ನಲ್ಲಿ ಆರಂಭಿಕನಾಗಿ 4000 ರನ್‌ ಕಲೆಹಾಕಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಗಿದ್ದಾರೆ.

250 ಪಂದ್ಯ: ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ 250ನೇ ಪಂದ್ಯವಾಡಿತು. ಈ ಸಾಧನೆ ಮಾಡಿದ 2ನೇ ತಂಡ. ಮುಂಬೈ 255 ಪಂದ್ಯಗಳನ್ನಾಡಿದೆ.