ಇಂದು ಆರ್‌ಸಿಬಿಗೆ ಎದುರಾಗಲಿದೆ ಸನ್‌ರೈಸರ್ಸ್‌ ಚಾಲೆಂಜ್‌: ಮತ್ತೆ ರನ್‌ ಮಳೆ?

| Published : Apr 25 2024, 01:02 AM IST / Updated: Apr 25 2024, 04:15 AM IST

ಸಾರಾಂಶ

ಆರ್‌ಸಿಬಿಗೆ ಎದುರಾಗಲಿದೆ ಸನ್‌ರೈಸರ್ಸ್‌ ಹೈದರಾಬಾದ್ ಸವಾಲು. ಉಭಯ ತಂಡಗಳ ನಡುವೆ ಈ ಐಪಿಎಲ್‌ನಲ್ಲಿ 2ನೇ ಮುಖಾಮುಖಿ. ಹೈದರಾಬಾದ್‌ನಲ್ಲಿ ನಡೆಯಲಿರುವ ಪಂದ್ಯ. ಮೊದಲ ಭೇಟಿಯಲ್ಲಿ ದಾಖಲೆಯ 287 ರನ್‌ ಚಚ್ಚಿದ್ದ ಸನ್‌ರೈಸರ್ಸ್‌. ಇಂದೂ ರನ್‌ ಮಳೆ ಸುರಿಯುವ ನಿರೀಕ್ಷೆ.

ಹೈದರಾಬಾದ್‌: ಟ್ರ್ಯಾವಿಸ್‌ ಹೆಡ್‌ ಸಿಡಿಯದಿದ್ದರೆ ಅಭಿಷೇಕ್‌ ಶರ್ಮಾ ಚಚ್ಚುತ್ತಾರೆ. ಅಭಿಷೇಕ್‌ ವಿಫಲವಾದರೆ ಹೈನ್ರಿಕ್‌ ಕ್ಲಾಸೆನ್‌ ಅಬ್ಬರಿಸುತ್ತಾರೆ. ಈ ಮೂವರೂ ಫೇಲಾದರೆ ಮಧ್ಯಮ ಕ್ರಮಾಂಕದಲ್ಲಿ ಯಾರಾದರೊಬ್ಬರು ಆರ್ಭಟಿಸುತ್ತಾರೆ. ಅದೃಷ್ಟ ನೆಟ್ಟಗಿಲ್ಲ ಎಂದರೆ ಎಲ್ಲರೂ ಒಟ್ಟಾಗಿ ದಾಳಿ ಮಾಡುತ್ತಾರೆ. ಈ ವರ್ಷದ ಮೊದಲ ಮುಖಾಮುಖಿಯಲ್ಲಿ ಸನ್‌ರೈಸರ್ಸ್‌ನ ರೋಷಾವೇಶಕ್ಕೆ ಗುರಿಯಾಗಿದ್ದ ಆರ್‌ಸಿಬಿ, ಗುರುವಾರ 2ನೇ ಬಾರಿಗೆ ಸನ್‌ರೈಸರ್ಸ್‌ ವಿರುದ್ಧ ಆಡಲಿದ್ದು ಈ ಬಾರಿ ಫಲಿತಾಂಶ ಏನಾಗಬಹುದು ಎನ್ನುವ ಕುತೂಹಲ ಅಭಿಮಾನಿಗಳದ್ದು.

ಹೆಚ್ಚೂ ಕಡಿಮೆ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿರುವ ಆರ್‌ಸಿಬಿ ಬಾಕಿ ಇರುವ 6 ಪಂದ್ಯಗಳನ್ನು ಪ್ರತಿಷ್ಠೆಗಾಗಿ ಆಡಬೇಕಿದೆ. ಆಡಿರುವ 8 ಪಂದ್ಯದಲ್ಲಿ ಸತತ 6 ಸೇರಿ ಒಟ್ಟು 7ರಲ್ಲಿ ಸೋತಿರುವ ಬೆಂಗಳೂರು, ಮುಂದಿನ ಐಪಿಎಲ್‌ಗೆ ನಡೆಯಲಿರುವ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಯಾವ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಲು ಬಾಕಿ ಇರುವ 6 ಪಂದ್ಯಗಳನ್ನು ಉಪಯೋಗಿಸಿಕೊಳ್ಳಬಹುದು.

ತನ್ನ ಬೌಲಿಂಗ್‌ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ನಿಲ್ಲಿಸಿರುವ ಆರ್‌ಸಿಬಿ, ಗೆಲ್ಲುವುದಾದರೆ ಬ್ಯಾಟಿಂಗ್‌ ಬಲದಿಂದಲೇ ಗೆಲ್ಲಬೇಕು ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಬೃಹತ್‌ ಗುರಿಗಳನ್ನು ಬೆನ್ನತ್ತುವಾಗ ಆರ್‌ಸಿಬಿ, ನಿರ್ಭೀತವಾಗಿ ಬ್ಯಾಟ್‌ ಬೀಸಿದೆ. ಸನ್‌ರೈಸರ್ಸ್‌ ವಿರುದ್ಧ 288 ರನ್‌ ಗುರಿ ಬೆನ್ನತ್ತುವಾಗ 262 ರನ್‌ ಸಿಡಿಸಿದ್ದ ಆರ್‌ಸಿಬಿ, ಕಳೆದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ 223 ರನ್‌ ಗುರಿ ಬೆನ್ನತ್ತಿ ಕೇವಲ 1 ರನ್‌ನಿಂದ ಸೋತಿತ್ತು. ಈ ಪಂದ್ಯದಲ್ಲೂ ಆರ್‌ಸಿಬಿ ತನ್ನ ಬ್ಯಾಟರ್‌ಗಳನ್ನೇ ನೆಚ್ಚಿಕೊಂಡಿದೆ.

ಗಾಯದ ಸಮಸ್ಯೆಯಿಂದಾಗಿ ಕೆಲ ಪಂದ್ಯಗಳನ್ನು ಆಡದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದು. ಆಗ ಕ್ಯಾಮರೂನ್‌ ಗ್ರೀನ್‌ ಹೊರಗುಳಿಯಬೇಕಾಗಬಹುದು. ವಿಲ್‌ ಜ್ಯಾಕ್ಸ್‌ ತಮ್ಮ ಅಸಲಿ ಸಾಮರ್ಥ್ಯ ಪ್ರದರ್ಶಿಸಲು ಶುರು ಮಾಡಿದ್ದು, ಆರ್‌ಸಿಬಿಯ ಭವಿಷ್ಯದ ತಾರೆಯಾಗುವ ಭರವಸೆ ಮೂಡಿಸಿದ್ದಾರೆ.

ಮತ್ತೊಂದೆಡೆ ಸನ್‌ರೈಸರ್ಸ್‌ ಸಹ ಬಲಾಢ್ಯ ಬ್ಯಾಟರ್‌ಗಳನ್ನೇ ಅತಿಯಾಗಿ ನಂಬಿದೆ. ತಂಡದ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ತೋರದಿದ್ದರೂ, ಬ್ಯಾಟರ್‌ಗಳು ತಂಡವನ್ನು ಕಾಪಾಡಿದ್ದಾರೆ. 7 ಪಂದ್ಯಗಳಲ್ಲಿ ಸನ್‌ರೈಸರ್ಸ್‌ 4ರಲ್ಲಿ 200+ ರನ್‌ ಕಲೆಹಾಕಿದೆ. ಈ ಪಂದ್ಯದಲ್ಲಿ ಗೆದ್ದರೆ ಹೈದರಾಬಾದ್‌ 2ನೇ ಸ್ಥಾನಕ್ಕೆ ಜಿಗಿಯಲಿದೆ.ಒಟ್ಟು ಮುಖಾಮುಖಿ: 24

ಆರ್‌ಸಿಬಿ: 10

ಸನ್‌ರೈಸರ್ಸ್‌: 13

ಫಲಿತಾಂಶವಿಲ್ಲ: 01 ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ಜ್ಯಾಕ್ಸ್‌, ಪಾಟೀದಾರ್‌, ಗ್ರೀನ್‌/ಮ್ಯಾಕ್ಸ್‌ವೆಲ್‌, ಸುಯಶ್‌, ಲೊಮ್ರೊರ್‌, ಕಾರ್ತಿಕ್‌, ಕರ್ಣ್‌ ಶರ್ಮಾ, ಫರ್ಗ್ಯೂಸನ್‌, ಸಿರಾಜ್‌, ದಯಾಳ್‌/ವೈಶಾಖ್‌.

ಸನ್‌ರೈಸರ್ಸ್‌: ಹೆಡ್‌, ಅಭಿಷೇಕ್‌, ಮಾರ್ಕ್‌ರಮ್‌, ಕ್ಲಾಸೆನ್‌, ಸಮದ್‌, ನಿತೀಶ್‌, ಶಾಬಾಜ್‌, ವಾಷಿಂಗ್ಟನ್‌, ಕಮಿನ್ಸ್‌ (

ನಾಯಕ), ಭುವನೇಶ್ವರ್‌, ಮಾರ್ಕಂಡೆ, ನಟರಾಜನ್‌. ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾಪಿಚ್‌ ರಿಪೋರ್ಟ್‌

ಈ ಆವೃತ್ತಿಯಲ್ಲಿ ಇಲ್ಲಿ ನಡೆದ ಮೊದಲ ಪಂದ್ಯಕ್ಕೆ ಬಳಸಿದ ಪಿಚ್‌ ಅನ್ನೇ ಈ ಪಂದ್ಯಕ್ಕೂ ಆಯ್ಕೆ ಮಾಡಲಾಗಿದೆ. ಈ ಪಿಚ್‌ನಲ್ಲಿ ಮುಂಬೈ ವಿರುದ್ಧ ಸನ್‌ರೈಸರ್ಸ್‌ 277 ರನ್‌ ಚಚ್ಚಿತ್ತು. ಮುಂಬೈ 246 ರನ್‌ ಕಲೆಹಾಕಿತ್ತು. ಹೀಗಾಗಿ ಈ ಪಂದ್ಯದಲ್ಲೂ ರನ್‌ ಹೊಳೆ ನಿರೀಕ್ಷಿಸಬಹುದು. -ಬಾಕ್ಸ್‌ -

ಕೊಹ್ಲಿಯ ನೆಚ್ಚಿನ ಗ್ರೌಂಡ್‌!

ವಿರಾಟ್‌ ಕೊಹ್ಲಿ ಇಲ್ಲಿ ಕಳೆದ ವರ್ಷ 63 ಎಸೆತದಲ್ಲಿ 100 ರನ್‌ ಸಿಡಿಸಿದ್ದರು. ಅಲ್ಲದೇ ಇಲ್ಲಿ ಆಡಿರುವ ಕಳೆದ 3 ಟಿ20 ಪಂದ್ಯಗಳಲ್ಲಿ ಕೊಹ್ಲಿ 50ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಹೈದರಾಬಾದ್‌ನಲ್ಲಿ ಒಟ್ಟು 12 ಟಿ20 ಪಂದ್ಯಗಳನ್ನು ಆಡಿರುವ ಕೊಹ್ಲಿ 59.20ರ ಬ್ಯಾಟಿಂಗ್‌ ಸರಾಸರಿಯಲ್ಲಿ 592 ರನ್‌ ಕಲೆಹಾಕಿದ್ದಾರೆ.