ಆರ್ಚರಿ ವಿಶ್ವಕಪ್‌: ಭಾರತ ಕಾಂಪೌಂಡ್‌ ತಂಡಗಳು ಫೈನಲ್‌ ಪ್ರವೇಶ

| Published : Apr 25 2024, 01:00 AM IST / Updated: Apr 25 2024, 04:16 AM IST

ಸಾರಾಂಶ

ಆರ್ಚರಿ ವಿಶ್ವಕಪ್‌ನ ಕಾಂಪೌಂಡ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು. ಫೈನಲ್‌ನಲ್ಲಿ ಪುರುಷರ ತಂಡಕ್ಕೆ ನೆದರ್‌ಲೆಂಡ್ಸ್‌, ಮಹಿಳಾ ತಂಡಕ್ಕೆ ಇಟಲಿ ಎದುರಾಳಿ. ರೀಕರ್ವ್‌ ವಿಭಾಗದಲ್ಲಿ ಧೀರಜ್‌ ಬೊಮ್ಮದೇವರರಿಂದ ರಾಷ್ಟ್ರೀಯ ದಾಖಲೆ.

ಶಾಂಘೈ(ಚೀನಾ): ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನ ಕಾಂಪೌಂಡ್‌ ವಿಭಾಗದ ಸ್ಪರ್ಧೆಯಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಫೈನಲ್‌ ಪ್ರವೇಶಿಸಿದ ಪದಕ ಖಚಿತಪಡಿಸಿಕೊಂಡಿವೆ.ಅಭಿಷೇಕ್‌ ವರ್ಮಾ, ಪ್ರಥಮೇಶ್‌ ಬಾಲಚಂದ್ರ ಹಾಗೂ ಹಾಲಿ ಅಂಡರ್‌-21 ವಿಶ್ವ ಚಾಂಪಿಯನ್‌ ಪ್ರಿಯಾನ್ಶ್‌ ಅವರನ್ನೊಳಗೊಂಡ ಭಾರತ ತಂಡವು ಫಿಲಿಪ್ಪೀನ್ಸ್‌ ಹಾಗೂ ಡೆನ್ಮಾರ್ಕ್‌ ತಂಡಗಳನ್ನು ಸೋಲಿಸಿ ಸೆಮೀಸ್‌ಗೇರಿತು.

ಸೆಮೀಸ್‌ನಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ತಂಡವನ್ನು 235-233 ಅಂಕಗಳಲ್ಲಿ ಮಣಿಸಿ ಫೈನಲ್‌ ಪ್ರವೇಶಿಸಿತು. ಚಿನ್ನದ ಪದಕದ ಪಂದ್ಯದಲ್ಲಿ ಭಾರತಕ್ಕೆ ನೆದರ್‌ಲೆಂಡ್ಸ್‌ ಎದುರಾಗಲಿದೆ.ಇದೇ ವೇಳೆ ಅದಿತಿ ಸ್ವಾಮಿ, ಜ್ಯೋತಿ ಸುರೇಖಾ ಹಾಗೂ ಪರ್ನೀತ್‌ ಕೌರ್‌ ಅವರನ್ನೊಳಗೊಂಡ ಮಹಿಳಾ ತಂಡ, ಟರ್ಕಿ ಹಾಗೂ ಎಸ್ಟೋನಿಯಾ ತಂಡಗಳನ್ನು ಸೋಲಿಸಿತು. ಫೈನಲ್‌ನಲ್ಲಿ ಭಾರತಕ್ಕೆ ಇಟಲಿ ಎದುರಾಗಲಿದೆ.

ಧೀರಜ್‌ ರಾಷ್ಟ್ರೀಯ ದಾಖಲೆ!

ಇನ್ನು ರೀಕರ್ವ್‌ ವಿಭಾಗದಲ್ಲಿ ಭಾರತದ ಧೀರಜ್‌ ಬೊಮ್ಮದೇವರ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ ಧೀರಜ್‌ ಒಟ್ಟು 693 ಅಂಕ ಕಲೆಹಾಕಿದರು. ಇದರೊಂದಿಗೆ ತರುಣ್‌ದೀಪ್‌ ರೈ ಹೆಸರಿನಲ್ಲಿದ್ದ 689 ಅಂಕಗಳ ದಾಖಲೆಯನ್ನು ಧೀರಜ್‌ ಮುರಿದರು.