ಈ ಬಾರಿಯೂ ಕೈಕೊಟ್ಟೀತೆ ಪೂರ್ವ ಮುಂಗಾರು?

| Published : May 10 2024, 01:33 AM IST / Updated: May 10 2024, 12:12 PM IST

ಸಾರಾಂಶ

ಮಳೆಯಾಗದೆ ಕೃಷಿ ಚಟುವಟಿಕೆ ಚುರುಕುಗೊಳ್ಳದೆ ನಿಂತಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಇನ್ನು, ಮಳೆ ಬರುವುದು ತಡವಾದರೆ ಸಿರಿಧಾನ್ಯ ಬಿತ್ತನೆ ಮಾಡಿ ಎಂದು ಕೃಷಿ ಅಧಿಕಾರಿ ರೈತರಿಗೆ ಸಲಹೆಯಿತ್ತಿದ್ದಾರೆ.

 ಹೊಸದುರ್ಗ :  ತಾಲೂಕಿನಲ್ಲಿ ಪೂರ್ವ ಮುಂಗಾರು ಮಳೆ ಕೊರತೆಯಿಂದ ಹೆಸರು, ತೊಗರಿ, ಅಲಸಂದೆ ಸೇರಿದಂತೆ ಸಿರಿ ಧಾನ್ಯಗಳ ಬಿತ್ತನೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ನಿರಾಸೆ ತಂದೊಡ್ಡಿದೆ. ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ಮಳೆ ಸುರಿಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಆದರೆ, ಮಳೆಗಾಲ ಆರಂಭವಾಗಿ ತಿಂಗಳುಗಳೇ ಕಳೆದರೂ ಮಳೆ ಬರುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ. ಬಿಸಿಲ ಝಳ ಹೆಚ್ಚಾಗಿದ್ದು, ಅಂತರ್ಜಲ ಕುಸಿದಿದೆ. ಬರುವ ದಿನಗಳಲ್ಲಿ ಉತ್ತಮ ಮಳೆಯಾದರೆ ಸ್ತಬ್ಧವಾಗಿರುವ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಗಲಿದೆ.

ಪ್ರಮುಖವಾಗಿ ಮಳೆಯಾಶ್ರಿತ ರೈತರ ಪ್ರಮುಖ ಬೆಳೆಗಳಾದ ಹೆಸರು, ತೊಗರಿ, ಅಲಸಂದೆ, ಶೇಂಗಾ, ಸಿರಿಧಾನ್ಯ ಬಿತ್ತನೆಗೆ ಹಿಂದೇಟು ಹಾಕುವ ಬರ ಪರಿಸ್ಥಿತಿ ಎದುರಾಗಿದೆ. ಮೇ ತಿಂಗಳಿನಿಂದ ಆರಂಭವಾಗುವ ಪೂರ್ವ ಮುಂಗಾರಿನಲ್ಲಿ ತಾಲೂಕಿನ ರೈತರು ಹೆಸರು, ತೊಗರಿ, ಅಲಸಂದೆ, ಸಿರಿಧಾನ್ಯ ಬಿತ್ತನೆ ಮಾಡುತ್ತಿದ್ದರು. ಇದಕ್ಕಾಗಿ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಈವರೆಗೂ ವರುಣದೇವ ಕೃಪೆ ತೋರಿಲ್ಲ. ಸಕಾಲಕ್ಕೆ ಮಳೆ

ಆಗದ ಹಿನ್ನೆಲೆಯಲ್ಲಿ ಹಾಗೂ ಬರಗಾಲ ಆವರಿಸಿರುವುದರಿಂದ ಪೂರ್ವ ಮುಂಗಾರಿನ ಬಿತ್ತನೆಗೆ ತಾಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಭೂಮಿ ಸಿದ್ಧತೆ ಮಾಡಿಕೊಂಡಿಲ್ಲ.

ಮಳೆ ಕೊರತೆ: ಯುಗಾದಿ ಹಬ್ಬದ ತರುವಾಯ ಮಳೆ ಬಂದಿದ್ದರೆ ರೈತರು ಬಿತ್ತನೆಗಾಗಿ ಭೂಮಿ ಸಿದ್ಧತೆ ಮಾಡಿಕೊಂಡಿರುತ್ತಿದ್ದರು. ಆದರೆ ಮಳೆ ಕೊರತೆ ಪೂರ್ವ ಮುಂಗಾರು ಬಿತ್ತನೆಗೆ ಪ್ರಮುಖ ಸಮಸ್ಯೆಯಾಗಿದೆ. ಮೇ ತಿಂಗಳ ಅಂತ್ಯಕ್ಕೆ ವಾಡಿಕೆಯಂತೆ 81 ಎಂ.ಎಂ. ಮಳೆಯಾಗಬೇಕಿತ್ತು. ಜನವರಿಯಲ್ಲಿ 21 ಎಂ.ಎಂ. ಮಳೆಯಾಗಿದ್ದು, ಬಿಟ್ಟರೆ ಆನಂತರ ಮಳೆಯಾಗಿಲ್ಲ. ಏಪ್ರಿಲ್‌ ತಿಂಗಳಲ್ಲಿ ಕೇವಲ 6 ಎಂ.ಎಂ. ಮಳೆಯಾಗಿದೆ. ಇದು ಬಿತ್ತನೆಗೆ ಪೂರಕವಾಗಿಲ್ಲ. ಬರುವ ದಿನಗಳಲ್ಲಿ ಉತ್ತಮ ಮಳೆಯಾವ ನೀರೀಕ್ಷೆ ಹೊಂದಲಾಗಿದ್ದು, ಉತ್ತಮ ಮಳೆಯಾದರೆ ಸಿರಿಧಾನ್ಯಗಳ ಬಿತ್ತನೆಗೆ ಅನುಕೂಲವಾಗಲಿದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ.

ಕೃಷಿ ಇಲಾಖೆ ಸಿದ್ಧತೆ: ಮಳೆ ಕೊರತೆ ನಡುವೆಯೂ ಕೃಷಿ ಇಲಾಖೆ ರೈತ ಸಮೂಹದ ಕೃಷಿ ಚಟುವಟಿಕೆಗಳಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮುನ್ನ ಮುಂಗಾರಿಗೆ ಬೇಕಾದ ಹೆಸರು, ತೊಗರಿ, ಅಲಸಂದೆ, ಶೇಂಗಾ ಬಿತ್ತನೆ ಬೀಜಗಳನ್ನು ಪೂರೈಸಲು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಂಡಿದೆ. ಟಿಎಪಿಸಿಎಂಎಸ್‌ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸೊಸೈಟಿ, ಖಾಸಗಿ ಕೃಷಿ ಪರಿಕರ ಕೇಂದ್ರಗಳಲ್ಲಿ ರಸಗೊಬ್ಬರ ದಾಸ್ತಾನು ಮಾಡಿದೆ.

ಕೃಷಿ ಇಲಾಖೆಯು ಗುರಿ ನಿಗದಿಪಡಿಸಿದಂತೆ ತಾಲೂಕಿನಲ್ಲಿ ಹೆಸರು ಕಾಳು 3950 ಹೆಕ್ಟೇರ್‌, ಸಿರಿಧಾನ್ಯ 8350 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಬೇಕಿತ್ತು. ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ಇತ್ತಿಚಿನ ದಿನಗಳಲ್ಲಿ ಸಕಾಲಕ್ಕೆ ಮುನ್ನ ಮುಂಗಾರು ಮಳೆಯಾಗದ ಕಾರಣ ಎಳ್ಳು ಬಿತ್ತನೆ ಕುಂಠಿತಗೊಂಡಿದೆ. ಕಳೆದ ವರ್ಷ ಕೇವಲ 26 ಹೇಕ್ಟರ್‌ ಪ್ರದೇಶದಲ್ಲಿ ಎಳ್ಳು ಬಿತ್ತನೆ ಆಗಿತ್ತು.ಹೊಸದುರ್ಗದ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರಾದ ಸಿ.ಎಸ್‌.ಈಶ ಮಾತನಾಡಿ, ಹವಾಮಾನ ಇಲಾಖೆಯ ವರದಿಯಂತೆ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಮಳೆ ತಡವಾಗಿ ಬಂದರೆ ಸಿರಿಧಾನ್ಯ ಬಿತ್ತನೆ ಮಾಡಿ, ಉತ್ತಮ ಬೆಳೆ ಹಾಗೂ ಆದಾಯ ಸಿಗಲಿದೆ ಎಂದು ಸಲಹೆಯನ್ನಿತ್ತರು.

ಇನ್ನು, ಮಳೆ ಬಂದಿದ್ದರೆ ಈ ಸಮಯಕ್ಕೆ ಮುಂಗಾರು ಬಿತ್ತನೆಗೆ ತಯಾರಿ ಮಾಡಿಕೊಳ್ಳುತ್ತಿದ್ದೆವು. ಆದರೆ ಮಳೆ ಕೊರತೆಯಿಂದ ರೈತರು ಬೇಸಾಯಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನೀರಾವರಿಯಲ್ಲಿ ಬೆಳೆ ತೆಗೆಯಲು ಅಂತರ್ಜಲ ಕುಸಿದಿದ್ದು, ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿಲ್ಲ. ತೆಂಗು ಬೆಳೆ ಉಳಿಸಿಕೊಂಡರೆ ಸಾಕು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ ಎನ್ನುತ್ತಾರೆ ಶ್ರೀರಾಂಪುರದ ರೈತ ರಂಗನಾಥ್‌.