ಐಪಿಎಲ್‌: ಗುಜರಾತ್‌ ವಿರುದ್ಧ ಡೆಲ್ಲಿಗೆ ಪಂತಾಸ್ಟಿಕ್‌ ಜಯ!

| Published : Apr 25 2024, 01:07 AM IST / Updated: Apr 25 2024, 04:12 AM IST

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್‌ಗೆ 4 ರನ್‌ ರೋಚಕ ಗೆಲುವು. ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿತ, ಪ್ಲೇ-ಆಫ್‌ ಆಸೆ ಜೀವಂತ. ರಿಷಭ್‌ ಪಂತ್‌ ಅಮೋಘ ಬ್ಯಾಟಿಂಗ್‌. 43 ಎಸೆತದಲ್ಲಿ 88 ರನ್‌. ಟಿ20 ವಿಶ್ವಕಪ್‌ಗೆ ಪಂತ್‌ ಆಯ್ಕೆಯಾಗುವುದು ಖಚಿತ?

ನವದೆಹಲಿ: ಗುಜರಾತ್‌ ಟೈಟಾನ್ಸ್‌ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಪ್ಲೇ-ಆಫ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ರಿಷಭ್‌ ಪಂತ್‌, ಅಕ್ಷರ್‌ ಪಟೇಲ್‌ರ ಸ್ಫೋಟಕ ಆಟ, ಟ್ರಿಸ್ಟನ್‌ ಸ್ಟಬ್ಸ್‌ರ ಅಮೋಘ ಕ್ಷೇತ್ರರಕ್ಷಣೆ ಡೆಲ್ಲಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 20 ಓವರಲ್ಲಿ 4 ವಿಕೆಟ್‌ಗೆ 224 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ಗುಜರಾತ್‌, ಆರಂಭದಲ್ಲೇ ನಾಯಕ ಶುಭ್‌ಮನ್‌ ಗಿಲ್‌ (06)ರ ವಿಕೆಟ್‌ ಕಳೆದುಕೊಂಡರೂ, ಹೋರಾಟ ನಿಲ್ಲಿಸಲಿಲ್ಲ. 2ನೇ ವಿಕೆಟ್‌ಗೆ ಸಾಹ (39) ಹಾಗೂ ಸಾಯಿ ಸುದರ್ಶನ್‌ (39 ಎಸೆತದಲ್ಲಿ 65 ರನ್‌) ಆಕರ್ಷಕ ಆಟವಾಡಿ 82 ರನ್‌ ಸೇರಿಸಿದರು. ಆದರೆ 3 ಓವರ್‌ ಅಂತರದಲ್ಲಿ ಸಾಹ, ಸುದರ್ಶನ್‌, ಒಮರ್‌ಝಾಯ್‌ ಔಟಾದರು. ಶಾರುಖ್‌ ಖಾನ್‌, ರಾಹುಲ್‌ ತೆವಾಟಿಯಾ ಕೂಡ ಕ್ರೀಸ್‌ನಲ್ಲಿ ಹೆಚ್ಚು ಸಮಯ ನಿಲ್ಲಲಿಲ್ಲ. ಹೀಗಾಗಿ ಸಂಪೂರ್ಣ ಜವಾಬ್ದಾರಿ ಡೇವಿಡ್‌ ಮಿಲ್ಲರ್‌ ಹೆಗಲಿಗೆ ಬಿತ್ತು.

ಸ್ಫೋಟಕ ಆಟವಾಡಿದ ಮಿಲ್ಲರ್‌ 23 ಎಸೆತದಲ್ಲಿ 55 ರನ್‌ ಸಿಡಿಸಿ ಔಟಾದಾಗ ತಂಡದ ಗೆಲುವಿಗೆ 15 ಓವರಲ್ಲಿ 35 ರನ್‌ ಬೇಕಿತ್ತು. ರಶೀದ್‌ ಖಾನ್‌ ಹಾಗೂ ಸಾಯಿ ಕಿಶೋರ್‌ ತಂಡವನ್ನು ಜಯದತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದರು.

2 ಸಿಕ್ಸರ್‌ನೊಂದಿಗೆ 6 ಬಾಲಲ್ಲಿ 13 ರನ್‌ ಗಳಿಸಿ ಕಿಶೋರ್‌ ಔಟಾದ ಬಳಿಕ, ಕೊನೆಯ ಓವರಲ್ಲಿ ಗೆಲ್ಲಲು 19 ರನ್‌ ಬೇಕಿತ್ತು. ರಶೀದ್‌ 2 ಬೌಂಡರಿ, 1 ಸಿಕ್ಸರ್‌ ಸಿಡಿಸಿದರು. ಕೊನೆ ಎಸೆತದಲ್ಲಿ 5 ರನ್‌ ಬೇಕಿದ್ದಾಗ ಸಿಕ್ಸರ್‌ ಬಾರಿಸಲು ವಿಫಲರಾದರು. ಬೌಂಡರಿ ಬಾರಿಸಿದರೆ ಪಂದ್ಯ ಟೈ ಆಗಿ ಸೂಪರ್‌ ಓವರ್‌ಗೆ ಹೋಗುತಿತ್ತು. ಅದೂ ಸಾಧ್ಯವಾಗಲಿಲ್ಲ. ಪಂತ್‌ ಆರ್ಭಟ: ಡೆಲ್ಲಿ ಬೃಹತ್‌ ಮೊತ್ತ ದಾಖಲಿಸಲು ನಾಯಕ ರಿಷಭ್‌ ಪಂತ್‌ ಹಾಗೂ ಅಕ್ಷರ್‌ ಪಟೇಲ್‌ರ ಅರ್ಧಶತಕಗಳು ನೆರವಾದವು. ಟಿ20 ವಿಶ್ವಕಪ್‌ನ ಆಯ್ಕೆ ರೇಸ್‌ನಲ್ಲಿರುವ ಈ ಇಬ್ಬರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರು. 3ನೇ ಕ್ರಮಾಂಕದಲ್ಲಿ ಆಡಿದ ಅಕ್ಷರ್‌ 43 ಎಸೆತದಲ್ಲಿ 66 ರನ್‌ ಸಿಡಿಸಿದರೆ, ಕೇವಲ 43 ಎಸೆತದಲ್ಲಿ 5 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ ಪಂತ್‌ ಔಟಾಗದೆ 88 ರನ್‌ ಚಚ್ಚಿದರು. ಮೋಹಿತ್‌ ಶರ್ಮಾ ಎಸೆದ ಇನ್ನಿಂಗ್ಸ್‌ನ ಕೊನೆಯ ಓವರಲ್ಲಿ ಡೆಲ್ಲಿ 31 ರನ್‌ ದೋಚಿತು. ಸ್ಕೋರ್‌: ಡೆಲ್ಲಿ 20 ಓವರಲ್ಲಿ 224/4 (ಪಂತ್‌ 88*, ಅಕ್ಷರ್‌ 66, ಸಂದೀಪ್‌ 3-15), ಗುಜರಾತ್‌ 20 ಓವರಲ್ಲಿ 220/8 (ಸುದರ್ಶನ್‌ 65, ಮಿಲ್ಲರ್‌ 55, ರಶೀದ್‌ 21*, ರಸಿಖ್‌ 4-44) ಪಂದ್ಯಶ್ರೇಷ್ಠ: ರಿಷಭ್‌ ಪಂತ್‌ ಸಿಕ್ಸರ್‌ ತಡೆದು ಜಯಕ್ಕೆ

ನೆರವಾದ ಟ್ರಿಸ್ಟನ್‌ ಸ್ಟಬ್ಸ್‌!

19ನೇ ಓವರ್‌ನ 2ನೇ ಎಸೆತದಲ್ಲಿ ರಶೀದ್‌ ದೊಡ್ಡ ಹೊಡೆತಕ್ಕೆ ಮುಂದಾದರು. ಅಮೋಘ ಕ್ಷೇತ್ರರಕ್ಷಣೆ ಮೂಲಕ ಸಿಕ್ಸರ್‌ ಹೋಗಬೇಕಿದ್ದ ಚೆಂಡನ್ನು ತಡೆದ ಟ್ರಿಸ್ಟನ್‌ ಸ್ಟಬ್ಸ್‌, ಗುಜರಾತ್‌ಗೆ ಕೇವಲ 1 ರನ್ ನೀಡಿದರು. ಇದು ಡೆಲ್ಲಿ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು.