2024ರ ಐಸಿಸಿ ಟಿ20 ವಿಶ್ವಕಪ್‌ಗೆ ಉಸೇನ್‌ ಬೋಲ್ಟ್‌ ರಾಯಭಾರಿ

| Published : Apr 25 2024, 01:05 AM IST / Updated: Apr 25 2024, 04:13 AM IST

ಸಾರಾಂಶ

ಐಸಿಸಿ ಟಿ20 ವಿಶ್ವಕಪ್‌ಗೆ ವಿಶ್ವದ ವೇಗದ ಮನುಷ್ಯ ರಾಯಭಾರಿ. ಉಸೇನ್‌ ಬೋಲ್ಟ್‌ರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ. ವೆಸ್ಟ್‌ಇಂಡೀಸ್‌, ಅಮೆರಿಕದಲ್ಲಿ ಪ್ರಚಾರ ಮಾಡಲಿರುವ ಬೋಲ್ಟ್‌.

ದುಬೈ: ಜೂ.1ರಿಂದ 29ರ ವರೆಗೂ ವೆಸ್ಟ್‌ಇಂಡೀಸ್‌ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ವಿಶ್ವದ ವೇಗದ ಓಟಗಾರ, ಜಮೈಕಾದ ಉಸೇನ್‌ ಬೋಲ್ಟ್‌ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. 

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಬುಧವಾರ ಈ ವಿಷಯವನ್ನು ಪ್ರಕಟಿಸಿದೆ. ‘ಟಿ20 ವಿಶ್ವಕಪ್‌ನ ರಾಯಭಾರಿಯಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಐಸಿಸಿಗೆ ಧನ್ಯವಾದ ಹೇಳುತ್ತೇನೆ. ಕ್ರಿಕೆಟ್‌ ನನ್ನ ಜೀವನದ ಒಂದು ಭಾಗ. ನಾನು ಬಹಳ ಇಷ್ಟಪಡುವ ಕ್ರೀಡೆ. ಕ್ರಿಕೆಟ್‌ ಆಟಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ’ ಎಂದು ಬೋಲ್ಟ್‌ ಹೇಳಿದ್ದಾರೆ.

 ಕೆರಿಬಿಯನ್‌ ದ್ವೀಪ ರಾಷ್ಟ್ರಗಳು ಹಾಗೂ ಅಮೆರಿಕದಲ್ಲಿ ಬೋಲ್ಟ್‌ ವಿಶ್ವಕಪ್‌ ಬಗ್ಗೆ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ಐಸಿಸಿ ತಿಳಿಸಿದೆ.ಬೋಲ್ಟ್‌ ಒಲಿಂಪಿಕ್ಸ್‌ನಲ್ಲಿ 8, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 11 ಚಿನ್ನದ ಪದಕ ಗೆದ್ದಿದ್ದಾರೆ. 2009ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೋಲ್ಟ್‌ 9.58 ಸೆಕೆಂಡ್‌ಗಳಲ್ಲಿ 100 ಮೀ. ಓಟ ಪೂರ್ತಿಗೊಳಿಸಿ ವಿಶ್ವ ದಾಖಲೆ ಬರೆದಿದ್ದರು.