ಮತಯಂತ್ರಗಳು ಸ್ಟ್ರಾಂಗ್ ರೂಂನಲ್ಲಿ ಭದ್ರ: ಡೀಸಿ

| Published : Apr 28 2024, 01:20 AM IST

ಸಾರಾಂಶ

ಸ್ಟ್ರಾಂಗ್ ರೂಂ ಬಳಿಗೆ ಬಂದ ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗಿದ್ದು, ಪೊಲೀಸ್ ಭದ್ರತೆಯೊಂದಿಗೆ ತರಲಾಗಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೧೬ ಸ್ಟ್ರಾಂಗ್ ರೂಂಗಳಿದ್ದು, ೬೧ ಸಿಸಿಟಿವಿ ಕ್ಯಾಮೆರಾಗಳು ಜತೆಗೆ ಇನ್ನೂ ೮ ಕ್ಯಾಮೆರಾ ಅಳವಡಿಸಲಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರ ೨೦೨೪ರ ಲೋಕಸಭೆ ಚುನಾವಣೆಯು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದ್ದು, ೮ ವಿಧಾನಸಭಾ ಕ್ಷೇತ್ರಗಳಿಂದ ಟ್ರಕ್‌ಗಳ ಮೂಲಕ ಬಂದ ಇವಿಎಂ ಯಂತ್ರಗಳನ್ನು ಇಲ್ಲಿಯ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂಗಳಲ್ಲಿರಿಸಿ ಚುನಾವಣಾ ವೀಕ್ಷಕರು, ಜಿಲ್ಲಾಧಿಕಾರಿ ಹಾಗೂ ಎಸ್ಪಿಗಳ ಸಮ್ಮುಖದಲ್ಲಿ ರೂಂಗಳನ್ನು ಶನಿವಾರ ಸೀಲ್ ಮಾಡಲಾಯಿತು. ಜೂನ್ ೪ ರಂದು ಮತ ಎಣಿಕೆ ನಡೆಯಲಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ೭ ಗಂಟೆಗೆ ತೆರೆದು, ೮ ಗಂಟೆಗೆ ಮತ ಎಣಿಕೆ ಆರಂಭಿಸಲಾಗುವುದು. ಈ ಹಿನ್ನೆಲೆಯಲ್ಲಿ ಸ್ಟ್ರಾಂಗ್ ರೂಂಗಳಿರುವ ಕಾಲೇಜಿನ ಸುತ್ತಲೂ ಸೆಂಟ್ರಲ್ ಫೋರ್ಸ್ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಬಿಗಿ ಭದ್ರತೆಗೆ ನಿಯೋಜಿಸಲಾಗಿದೆ.ಮತದಾನದ ಪ್ರಮಾಣ ಹೆಚ್ಚಳ

ಸ್ಟ್ರಾಂಗ್‌ರೂಂಗಳಿಗೆ ಭೇಟಿ ನೀಡಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ, ೨೦೨೪ರ ಲೋಕಸಭೆ ಚುನಾವಣೆ ಅಂಗವಾಗಿ ನಡೆದ ಮತದಾನವು ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಮತದಾನ ಪ್ರಮಾಣ ಹೆಚ್ಚಾಗಿದ್ದು, ಸ್ವೀಪ್ ಕಾರ್ಯಕ್ರಮಗಳು ಉತ್ತಮವಾಗಿ ನಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸ್ಟ್ರಾಂಗ್ ರೂಂ ಬಳಿಗೆ ಬಂದ ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗಿದ್ದು, ಪೊಲೀಸ್ ಭದ್ರತೆಯೊಂದಿಗೆ ತರಲಾಗಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೧೬ ಸ್ಟ್ರಾಂಗ್ ರೂಂಗಳಿದ್ದು, ೬೧ ಸಿಸಿಟಿವಿ ಕ್ಯಾಮೆರಾಗಳು ಜತೆಗೆ ಇನ್ನೂ ೮ ಕ್ಯಾಮೆರಾಗಳನ್ನು ಕಟ್ಟಡದ ಸುತ್ತಲೂ ಅಳವಡಿಸಲಾಗಿದೆ. ಲೈವ್ ಸ್ಟ್ರೀಮ್ ನನ್ನ ಹಾಗೂ ಚುನಾವಣಾ ವೀಕ್ಷಕರ ಮೊಬೈಲ್‌ಗೆ ಬರಲಿದ್ದು, ಕಟ್ಟಡದಲ್ಲಿ ಟಿವಿಗಳನ್ನು ಅಳವಡಿಸಲಾಗಿದೆ, ಅಲ್ಲದೆ ಹೊರಗಡೆಯೂ ಎಲ್‌ಇಡಿ ಪರದೆ ಅಳವಡಿಸಲಾಗುವುದು, ಅಲ್ಲಿ ವೀಕ್ಷಿಸಲು ಅವಕಾಶವಿದೆ ಎಂದು ಹೇಳಿದರು.

ಮೂರು ಹಂತದ ಭದ್ರತೆ

ಸ್ಟ್ರಾಂಗ್ ರೂಂಗಳ ಭದ್ರತೆಗಾಗಿ ಈಗಾಗಲೇ ಸೆಂಟ್ರಲ್ ಫೋರ್ಸ್ ಸಿಬ್ಬಂದಿ ಆಗಮಿಸಿದ್ದು, ೩ ಹಂತದಲ್ಲಿ ಭದ್ರತೆ ಒದಗಿಸಲಾಗಿದೆ. ಮೊದಲ ಹಂತದಲ್ಲಿ ಸೆಂಟ್ರಲ್ ಫೋರ್ಸ್, ಎರಡನೇ ಹಂತದಲ್ಲಿ ಸ್ಥಳೀಯ ಪೊಲೀಸ್ ಹಾಗೂ ಮೂರನೇ ಹಂತದಲ್ಲಿ ಹೊರಗಿನಿಂದ ಆಗಮಿಸಿರುವ ಪೊಲೀಸರು ರಕ್ಷಣೆ ಮಾಡಲಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ಕೋಲಾರ, ಕೆಜಿಎಫ್ ಎಸ್ಪಿಗಳು ವಹಿಸಿಕೊಂಡಿದ್ದಾರೆ. ತುಕಡಿಗಳು ೩ ಪಾಳೇಯದಲ್ಲಿ ರಕ್ಷಣೆ ಮಾಡಲಿದ್ದಾರೆ ಎಂದು ವಿವರಿಸಿದರು. ಕ್ಷೇತ್ರದಲ್ಲಿ ಶೇ. 78.26 ಮತದಾನ

ಮಂಡ್ಯ ಜಿಲ್ಲೆಯಲ್ಲಿ ಶೇ.೮೧ ರಷ್ಟು ಮತದಾನ ನಡೆದಿದ್ದು, ಅದನ್ನು ಹೊರತುಪಡಿಸಿದರೆ ಕೋಲಾರವು ೭೮.೨೬ ರ ಮೂಲಕ ಮತದಾನದಲ್ಲಿ ೨ನೇ ಸ್ಥಾನ ಪಡೆದಿದೆ. ಮತದಾರರ ಪಟ್ಟಿ ಉತ್ತಮವಾಗಿ ತಯಾರಿಸಿರುವುದೇ ಹೆಚ್ಚಿನ ಮತದಾನಕ್ಕೆ ಕಾರಣವಾಗಿದೆ. ಹಿಂದಿಗಿಂತಲೂ ಹೆಚ್ಚಿನ ಮತದಾನ ಮಾಡಿರುವುದು ಹೆಮ್ಮೆಯ ಸಂಗತಿ. ಒಟ್ಟಾರೆ ವ್ಯವಸ್ಥಿತ, ಸುಸಜ್ಜಿತವಾಗಿ ಚುನಾವಣೆ ಮುಗಿದಿದೆ ಎಂದು ತಿಳಿಸಿದರು.

ಚುನಾವಣೆ ವೀಕ್ಷಕರು, ಜಿಪಂ ಸಿಇಒ, ಕೋಲಾರ, ಕೆಜಿಎಫ್ ಎಸ್ಪಿಗಳು, ಕಂದಾಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಇಡೀ ಜಿಲ್ಲೆಯ ೧೦ ಸಾವಿರ ಸಿಬ್ಬಂದಿ, ೭ ಸಾವಿರ ಪೊಲೀಸ್ ಸೇರಿದಂತೆ ಸುಮಾರು ೨೦ ಸಾವಿರ ಮಂದಿ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ ಎಂದರು.

ಟಯರ್‌ ಬ್ಲಾಸ್ಟ್‌ ಅಲ್ಲ, ಪಂಕ್ಚರ್‌

ಮುಳಬಾಗಲು ತಾಲೂಕಿನ ಇವಿಎಂಗಳನ್ನು ತರುತ್ತಿದ್ದ ವಾಹನದ ಟೈಯರ್ ಬ್ಲಾಸ್ಟ್ ಆಗಿರಲಿಲ್ಲ. ಪಂಕ್ಚರ್ ಆಗಿದ್ದು, ಟೈಯರ್ ಬದಲಿಸಿಕೊಂಡು ಅದೇ ವಾಹನದಲ್ಲಿ ೪೦ ನಿಮಿಷ ತಡವಾಗಿ ತರಲಾಗಿದೆ. ಯಾವುದೇ ಸಮಸ್ಯೆಯಿಲ್ಲವೆಂದು ಸ್ಪಷ್ಟಪಡಿಸಿದರು.ಎಸ್ಪಿಗಳಾದ ಎಂ.ನಾರಾಯಣ, ಕೆ.ಎಂ.ಶಾಂತರಾಜು, ಎಡಿಸಿ ಶಂಕರ್ ವಣಿಕ್ಯಾಳ್, ಚುನಾವಣಾ ಶಾಖೆಯ ಅಧಿಕಾರಿಗಳಾದ ನಾಗವೇಣಿ, ಮಂಜುಳ ಇದ್ದರು.