50 ಕೋಟಿ ಜನರಿಗೆ ಆಯುಷ್ಮಾನ ಭಾರತ ಯೋಜನೆ ತಲುಪಿಸುವ ಗುರಿ

| Published : Apr 28 2024, 01:20 AM IST

50 ಕೋಟಿ ಜನರಿಗೆ ಆಯುಷ್ಮಾನ ಭಾರತ ಯೋಜನೆ ತಲುಪಿಸುವ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಹ್ಲಾದ ಜೋಶಿ ಅವರು ತಮ್ಮ ನಾಲ್ಕು ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ವಿಧಿ-ವಿಜ್ಞಾನ ವಿಶ್ವವಿದ್ಯಾಲಯ, ಐಐಟಿ, ಐಐಐಟಿ ಯಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕ್ಷೇತ್ರಕ್ಕೆ ತಂದಿದ್ದಾರೆ.

ಧಾರವಾಡ:

ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿರುವ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಮುಖಾಂತರ ಮತ್ತೊಮ್ಮೆ ಪ್ರಧಾನ ಮಂತ್ರಿ ಸ್ಥಾನಕ್ಕೇರಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮನವಿ ಮಾಡಿದರು.

ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಲಗೇರಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ರೈತರು, ಮಹಿಳೆಯರು, ಯುವಕರು, ಕಾರ್ಮಿಕರು ಸೇರಿದಂತೆ ಎಲ್ಲ ವಲಯದಲ್ಲಿನ ಜನರ ಕಲ್ಯಾಣಕ್ಕೆ ಕೋಟಿಗಟ್ಟಲೇ ಆರ್ಥಿಕ ನೆರವು ನೀಡಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಶಿಕ್ಷಣ, ಆರೋಗ್ಯ, ವಸತಿ ಕ್ಷೇತ್ರಗಳಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಿದ್ದಾರೆ. ನರೇಂದ್ರ ಮೋದಿ ನಾಯಕತ್ವದ ಸರ್ಕಾರ 2018ರಲ್ಲಿ ಅನುಷ್ಠಾನಗೊಳಿಸಿದ ಆಯುಷ್ಮಾನ್ ಭಾರತ ಯೋಜನೆ ವರ್ಷಕ್ಕೆ ₹ 5 ಲಕ್ಷ ಆರ್ಥಿಕ ನೆರವು ಒದಗಿಸಿದೆ. ಈ ಯೋಜನೆ ಅಂದಾಜು 50 ಕೋಟಿ ಜನರನ್ನು ತಲುಪುವ ಗುರಿ ಹೊಂದಿದೆ ಎಂದು ಬೆಲ್ಲದ ವಿವರಿಸಿದರು.

ಪ್ರಹ್ಲಾದ ಜೋಶಿ ಅವರು ತಮ್ಮ ನಾಲ್ಕು ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ವಿಧಿ-ವಿಜ್ಞಾನ ವಿಶ್ವವಿದ್ಯಾಲಯ, ಐಐಟಿ, ಐಐಐಟಿ ಯಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಸರ್ವ ಸಮಾಜಗಳ ಜನರ ಜತೆ ನಿಕಟ ಸಂಪರ್ಕ ಹೊಂದಿರುವ ಜೋಶಿ ಅವರನ್ನು ಈ ಸಲವೂ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ, ಮಂಡಲ ಅಧ್ಯಕ್ಷ ಬಸವರಾಜ ಗರಗ, ಮುಖಂಡರಾದ ರುದ್ರಗೌಡ ಪಾಟೀಲ, ಬಸವಂತಯ್ಯ ಗಡಾದವರ, ಶಂಕರ ಕೊಟ್ರಿ, ಮೈಲಾರ ಉಪ್ಪಿನ ಇದ್ದರು. ನಂತರ ಇಟಿಗಟ್ಟಿ ಗ್ರಾಮದಲ್ಲಿ ಜರುಗಿದ ಸಭೆಯಲ್ಲಿ ಹಿರಿಯರಾದ ಶೇಖಣ್ಣ ನವಲೂರ, ಪುಂಡಲೀಕ ತಳವಾರ, ಗಾಯಕವಾಡ, ಬಸವರಾಜ ಅರವಳದ, ಚನ್ನಬಸು ಇದ್ದರು.

ಜೋಗೆಲ್ಲಾಪುರ:

ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೋಗೆಲ್ಲಾಪುರ ಗ್ರಾಮಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬೆಲ್ಲದ ಪ್ರಹ್ಲಾದ ಜೋಶಿ ಪರ ಮತಯಾಚಿಸಿದರು. ಜಗತ್ತನ್ನು ಕಾಡಿದ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಎಲ್ಲ ಭಾರತೀಯರಿಗೂ ಲಸಿಕೆ ನೀಡುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿ ಕೈಕೊಂಡಿತು. ಅಲ್ಲದೇ ಅಗತ್ಯವಿರುವ ಅನ್ಯದೇಶಗಳಿಗೂ ಲಸಿಕೆ ಕೊಡಲಾಯಿತು. ದೇಶದಲ್ಲಿ ಇಂದು ಗುಣಮಟ್ಟದ ಪ್ರತಿದಿನ ನೂರಾರು ಕಿಮೀಗಳಷ್ಟು ರಸ್ತೆ ನಿರ್ಮಿಸಲಾಗುತ್ತಿದೆ. ಅಲ್ಲದೇ ರೈಲು, ವಿಮಾನ ನಿಲ್ದಾಣಗಳನ್ನು ದಾಖಲೆಯ ರೀತಿಯಲ್ಲಿ ಸುಧಾರಣೆ ಮಾಡಲಾಯಿತು. ಮಹಿಳೆಯರಿಗೆ ವಿಶೇಷ ಸೌಲಭ್ಯ ಒದಗಿಸುವ ಮೂಲಕ ಮತ್ತಷ್ಟು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟಿತ್ತು ಎಂದರು.

ಈ ವೇಳೆ ದುರ್ಗಪ್ಪ ಜೋಗಣ್ಣವರ, ಬಸವನಗೌಡ ಪಾಟೀಲ, ಫಕ್ಕೀರಪ್ಪ ವಾಲೀಕಾರ, ಮಾರುತಿ ಹಿಂಡಸಗೇರಿ ಇದ್ದರು.