ಬಿಸಿಲಿನ ಝಳದ ನಡುವೆಯೂ ಉತ್ಸಾಹದಿಂದ ಹಕ್ಕು ಚಲಾಯಿಸಿದ ಮತದಾರರು

| Published : Apr 27 2024, 01:25 AM IST

ಸಾರಾಂಶ

ನರಸಿಂಹರಾಜಪುರ, ಬಿಸಿಲಿನ ಝಳ ಇದ್ದರೂ ಮತದಾರರು ಶುಕ್ರವಾರ ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದ್ದು ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯಿತು.

3 ಮತಗಟ್ಟೆಗಳಲ್ಲಿ ಪ್ರಾರಂಭದಲ್ಲೇ ಕೈ ಕೊಟ್ಟ ಮತ ಯಂತ್ರ ।

ಕನ್ನಡಪ್ರಭವಾರ್ತೆ, ನರಸಿಂಹರಾಜಪುರ

ಬಿಸಿಲಿನ ಝಳ ಇದ್ದರೂ ಮತದಾರರು ಶುಕ್ರವಾರ ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದ್ದು ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯಿತು.

ಮಾಜಿ ಸಚಿವ ಡಿ.ಎನ್‌.ಜೀವರಾಜ್ ದ್ವಾರಮಕ್ಕಿಯ ಬಡಗಬೈಲು ಶಾಲೆ ಮತಗಟ್ಟೆ ಸಂಖ್ಯೆ 16 ಕ್ಕೆ ಬೆಳಿಗ್ಗೆ ಆಗಮಿಸಿ ಮತದಾನ ಮಾಡಿದರು. ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಕರ್ನಾಟಕ ಪಬ್ಲಿಕ್ ಸ್ಕೂಲಿನ ಮತಗಟ್ಟೆ ಸಂಖ್ಯೆ 24 ರಲ್ಲಿ ಮತದಾನ ಮಾಡಿದರು. ಗುಬ್ಬಿಗಾ ಮತಗಟ್ಟೆ ಸಂಖ್ಯೆ 41ರಲ್ಲಿ ಆರೋಗ್ಯ ಸರಿ ಇಲ್ಲದ ಮಹಿಳೆ ಯೊಬ್ಬಳು ವೀಲ್ ಚೇರ್ ಮೂಲಕ ಆಗಮಿಸಿ ಮತದಾನ ಮಾಡಿದರು.

ಕೆಪಿಎಸ್ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 22ರಲ್ಲಿ ಸರೋಜಮ್ಮ ಎಂಬ ವೃದ್ಧೆಯೊಬ್ಬರು ಕುಟುಂಬದವರ ಸಹಾಯದಿಂದ ಆಗಮಿಸಿ ಮತದಾನ ಮಾಡಿದರು. ಕೆಪಿಎಸ್‌ ಮತಗಟ್ಟೆ ಸಂಖ್ಯೆ 25 ರಲ್ಲಿ ನಾಗಲಕ್ಷ್ಮಿ ಎಂಬ ವಯೋ ವೃದ್ಧರೊಬ್ಬರು ಕುಟುಂಬದವರ ಸಹಾಯದಿಂದ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದರು.

ಕೈ ಕೊಟ್ಟ ಮತ ಯಂತ್ರ:

ತಾಲೂಕಿನ ಮೆಣಸೂರು ಮತಗಟ್ಟೆ ಸಂಖ್ಯೆ 26 ರಲ್ಲಿ ಬೆಳಿಗ್ಗೆ ಮತದಾನ ಪ್ರಾರಂಭವಾಗುತ್ತಿದ್ದಂತೆ ಮತಯಂತ್ರ ಕೈಕೊಟ್ಟಿತು. ನಂತರ ಮತಯಂತ್ರ ಬದಲಾಯಿಸಲಾಯಿತು. ಅರ್ಧ ಗಂಟೆ ತಡವಾಗಿ ಮತದಾನ ಪ್ರಾರಂಭವಾಯಿತು. ತಾಲೂಕಿನ ಹೊನ್ನೇಕೊಡಿಗೆ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 49 ರಲ್ಲೂ ಬೆಳಿಗ್ಗೆ ಮತಯಂತ್ರ ಹಾಳಾಗಿತ್ತು. ಬದಲಿ ಯಂತ್ರವನ್ನು ನೀಡಲಾಯಿತು. ಇದರಿಂದ ಅರ್ಧ ಗಂಟೆ ತಡವಾಗಿ ಮತದಾನ ಪ್ರಾರಂಭವಾಯಿತು. ಸ್ಥಳಕ್ಕೆ ತಹಸೀಲ್ದಾರ್‌ ರಮೇಶ್‌ ಹಾಗೂ ಇತರ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಳೆಹೊನ್ನೂರಿನ ಮತಗಟ್ಟೆ ಸಂಖ್ಯೆ 205 ರಲ್ಲೂ ಮತಯಂತ್ರ ಹಾಳಾಯಿತು. ನಂತರ ಬದಲಿ ಮತ ಯಂತ್ರ ನೀಡಲಾಯಿತು. ಈ ಬಾರಿ ಹೊಸದಾಗಿ ಮತದಾನ ಮಾಡಲು ಯುವಕ, ಯುವತಿಯರು ಉತ್ಸಾಹದಿಂದ ಬಂದು ಮತದಾನ ಮಾಡಿದರು.