ಕಾಂಗ್ರೆಸ್‌ನಿಂದ ನೀತಿ ಸಂಹಿತೆ ಉಲ್ಲಂಘನೆ: ಕೃಷ್ಣಮೂರ್ತಿ

| Published : Apr 28 2024, 01:29 AM IST / Updated: Apr 28 2024, 10:25 AM IST

ಕಾಂಗ್ರೆಸ್‌ನಿಂದ ನೀತಿ ಸಂಹಿತೆ ಉಲ್ಲಂಘನೆ: ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ಚಾಮರಾಜನಗರ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಹಣ, ಮದ್ಯದ ಹೊಳೆಯನ್ನೇ ಹರಿಸಿ ಗೆಲ್ಲಲು ಪ್ರಯತ್ನಿಸಿದೆ ಎಂದು ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಆರೋಪಿಸಿದರು.

 ಚಾಮರಾಜನಗರ :  ಈ ಬಾರಿಯ ಚಾಮರಾಜನಗರ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಹಣ, ಮದ್ಯದ ಹೊಳೆಯನ್ನೇ ಹರಿಸಿ ಗೆಲ್ಲಲು ಪ್ರಯತ್ನಿಸಿದೆ ಎಂದು ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯವಾಗಿ ಮಂತ್ರಿ ಸೇರಿದಂತೆ 7 ಮಂದಿ ಶಾಸಕರಿದ್ದು, ಸಮಾಜ ಕಲ್ಯಾಣ ಸಚಿವರಿದ್ದರೂ, ಸೋಲಿನ ಭಯದಿಂದ ಅಪಾರ ಹಣ ಹರಿದಿದೆ. ಮದ್ಯದ ಪ್ಯಾಕೇಟ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರ ಹಾಕಿ ಮದ್ಯದ ಹೊಳೆಯನ್ನೇ ಹರಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಮೀರಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ. ಚುನಾವಣಾ ಆಯೋಗ ಇದನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. 

ಸರ್ಕಾರದ ಆಡಳಿತ ಯಂತ್ರ ದುರುಪಯೋಗವಾಗಿದೆ ಎಂದರು.ಕರಪತ್ರ, ಜಾಹೀರಾತಿನ ಬಗ್ಗೆ ಕಡಿವಾಣ ಹಾಕುವ ಆಯೋಗ ಚುನಾವಣೆ ಹಿಂದಿನ ರಾತ್ರಿ ನಡೆಯುವ ಹಣ, ಮಧ್ಯದ ಹಂಚಿಕೆ ಬಗ್ಗೆ ಗಮನಹರಿಸುವುದಿಲ್ಲ. ಆಡಳಿತ ಪಕ್ಷಕ್ಕೆ ಬಿಜೆಪಿಗಿಂತ ಬಿಎಸ್ಪಿ ಬಗ್ಗೆ ಸೋಲಿನ ಭಯವಿದ್ದು, ವಾಸ್ತವವಾಗಿ ವಾಮ ಮಾರ್ಗ ಅನುಸರಿಸಿದೆ. ಬಿಜೆಪಿ ಚುನಾವಣೆಗೆ ಮುಂಚೆಯೇ ಸೋಲನ್ನು ಒಪ್ಪಿಕೊಂಡಿದೆ ಎಂದರು.

ಈ ಚುನಾವಣೆಯ ಮತದಾನದಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಮತದಾನದ ಪ್ರಮಾಣವೂ ಕೂಡ ಹೆಚ್ಚಿದೆ. ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಹೊಡೆದು ಹಾಕಿದ ಪ್ರಕರಣ ಹೊರತುಪಡಿಸಿ ಶಾಂತಿಯುತವಾಗಿ ಮತದಾನ ನಡೆದಿದೆ ಇದಕ್ಕಾಗಿ ಪಕ್ಷದ ವತಿಯಿಂದ ಮತದಾರರಿಗೆ, ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅನಿರೀಕ್ಷಿತ ಅಭ್ಯರ್ಥಿಯಾದ ನಾನು ಕಳೆದ ಬಾರಿಗಿಂತ ಹೆಚ್ಚಿನ ಮತವನ್ನು ಪಡೆಯುತ್ತೇನೆ. ನಾವು ಹೋದಡೆಯಲ್ಲಿ ಭವ್ಯ ಸ್ವಾಗತ ಕೋರಿ, ನಿಮ್ಮಂತಹ ಅಭ್ಯರ್ಥಿ ಈ ಕ್ಷೇತ್ರಕ್ಕೆ ಬೇಕಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ನಮ್ಮ ಕಾರ್ಯಕರ್ತರು, ಮುಖಂಡರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ ಎಂದರು.

ಸಂಘಟನೆಗೆ ಹೆಚ್ಚು ಒತ್ತುಮುಂದೆ ಬರುವ ಜಿಪಂ, ತಾಪಂ, ವಿಧಾನಸಭೆ, ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪಕ್ಷವನ್ನು ಶಕ್ತಿಯುತವಾಗಿ ಬೆಳೆಸಲು ಈಗಿನಿಂದಲೇ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು.2029 ಕ್ಕೆ ಗೆಲ್ಲುವ ಗುರಿ ಹೊಂದಲಾಗಿದೆ ಎಂದರು. ಈ ಚುನಾವಣೆಯಲ್ಲಿ ಗೆಲ್ಲಲಿ, ಸೋಲಲಿ, ಜಿಲ್ಲಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲೆಯ ಎಲ್ಲಾ ಕೆರೆಗಳಿಗೆ ಪೈಪ್ ಲೈನ್ ಮೂಲಕ ನೀರು ತುಂಬಿಸುವ ಹೋರಾಟಗಳಲ್ಲಿ ಪಕ್ಷವು ಭಾಗಿಯಾಗಿ ಹೋರಾಟ ಮಾಡಲಿದೆ ಎಂದರು.60 70 ವರ್ಷಗಳಿಂದ ಚಿಕ್ಕಮೂಡಹಳ್ಳಿಯಂತಹ ಅನೇಕ ಗ್ರಾಮಗಳಿಗೆ ಜನಪ್ರತಿನಿಧಿಗಳು ರಸ್ತೆ ಸೌಲಭ್ಯ ಕಲ್ಪಿಸಿಲ್ಲ. ಇಂಡಿಗನತ್ತ ಗ್ರಾಮದಲ್ಲಿ ಮತದಾನದ ದಿನ ನಡೆದ ಘಟನೆಯೇ ಇದಕ್ಕೆ ಉದಾಹರಣೆ. ಮುಂದಿನ ದಿನಗಳಲ್ಲಿ ಸರ್ಕಾರ, ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳ ಕಡೆ ಗಮನಹರಿಸಿದ್ದರೆ ಇಂತಹ ಹೋರಾಟಗಳು ಹೆಚ್ಚಾಗಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್, ಜಿಲ್ಲಾ ಅಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ರಾಜಶೇಖರ್, ಪ್ರಕಾಶ್ ಅಮಚವಾಡಿ, ಬ.ಮ.ಕೃಷ್ಣಮೂರ್ತಿ ಇದ್ದರು.