ಕಲ್ಮಶಗೊಂಡ ಕಂದಕ ಪರಿಶೀಲಿಸಿದ ತಹಸೀಲ್ದಾರ್‌: ನೀರನ್ನು ತೆರವುಗೊಳಿಸಲು ಸೂಚನೆ

| Published : Apr 24 2024, 02:24 AM IST

ಸಾರಾಂಶ

ಕೋಟೆ ಮುಂಭಾಗದ ಕಲ್ಮಷಗೊಂಡ ಕಂದಕವನ್ನು ತಹಶೀಲ್ದಾರ ಡಾ: ಮಲ್ಲಪ್ಪ ಯರಗೋಳ ಪರಿಶೀಲಿಸಿದರು.

ಮುದಗಲ್: ಪಟ್ಟಣದ ಐತಿಹಾಸಿಕ ಕೋಟೆ ಮುಂಭಾಗದಲ್ಲಿರುವ ಕಂದಕದಲ್ಲಿಯ ನೀರು ಕಲ್ಮಶಗೊಂಡು ಜನತೆ ಸಂಚರಿಸ ದಂತಾಗಿದೆ ಎಂದು ಕರವೇ ಆರೋಪಿಸಿದ ಹಿನ್ನೆಲೆ ತಹಸೀಲ್ದಾರ್‌ ಡಾ.ಮಲ್ಲಪ್ಪ ಯರಗೋಳ ಪರಿಶೀಲಿಸಿ ಶೀಘ್ರವೇ ಕ್ರಮ ಕೈಕೊಳ್ಳಬೇಕೆಂದು ಮುಖ್ಯಾಧಿಕಾರಿಗೆ ಸೂಚಿಸಿದರು.

ಪಟ್ಟಣ ಸಭಾಭವನದಲ್ಲಿ ಜರುಗಿದ ಸಭೆ ನಂತರ ಕರವೇ ಮುಖಂಡರ ಒತ್ತಡದಿಂದ ಸ್ಥಳ ಪರಿಶೀಲನೆಗೆ ಮುಂದಾಗಿ ವೀಕ್ಷಿಸಿದರು. ಕಂದಕದಲ್ಲಿ ಸಂಗ್ರಹಗೊಂಡ ಕಲ್ಮಶ ನೀರು, ತ್ಯಾಜ್ಯ ವಸ್ತುಗಳ ಸಂಗ್ರಹಣೆಗೆ ನಿಬ್ಬೆರಗಾದರು. ಕಲ್ಮಶಗೊಂಡ ನೀರು ಹೊರ ಹಾಕಲು ಸಿಸಿ ರಸ್ತೆಯಲ್ಲಿ ನಿರ್ಮಿಸಿದ ನೀರು ಹರಿಯುವ ದಾರಿಯನ್ನು ಅಗೆದು ತೆರವುಗೊಳಿಸಿ ಕಲ್ಮಶವಾದ ನೀರನ್ನು ಹೊರ ಹಾಕುವಂತೆ ಸೂಚಿಸಿದರು. ಜೊತೆಗೆ ತ್ಯಾಜ್ಯ ವಸ್ತುಗಳನ್ನು ಹೊರ ಹಾಕಿ ಹಾಕುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಪ್ರತಿಯೊಂದು ಹಂತದದಲ್ಲಿ ಕಲ್ಮಶ ನೀರು ಸಂಗ್ರಹ, ರಸ್ತೆ ಅಗೆಯುವ ಸ್ಥಳದ ಜಿಪಿಎಸ್ ಭಾವಚಿತ್ರಗಳನ್ನು ನನಗೆ ಕಳುಹಿಸಿಕೊಡಿ ಸಹಾಯಕ ಆಯುಕ್ತರ ಗಮನಕ್ಕೆ ತಂದು ಕೂಡಲೇ ಕ್ರಮ ಕೈಕೊಳ್ಳಬೇಕೆಂದು ಸ್ಥಳದಲ್ಲಿದ್ದ ಮುಖ್ಯಾಧಿಕಾರಿ ನಬಿ ಕಂದಗಲ್ಲ, ಕಿರಿಯ ಅಭಿಯಂತರರಿಗೆ ಸೂಚಿಸಿದರು. ಕರವೇ ಮತದಾನ ಬಹಿಷ್ಕಾರದ ಎಚ್ಚರಿಕೆ ಹೇಳಿಕೆಯಲ್ಲಿ ಇದರ ಒಂದು ಬೇಡಿಕೆಯನ್ನಿಟ್ಟಿರುವದನ್ನು ಸ್ಮರಿಸಬಹುದಾಗಿದೆ.

ಈ ಸಮಯದಲ್ಲಿ ಕರವೇ ಮುಖಂಡರು, ದಲಿತ ಮುಖಂಡರು ಇದ್ದರು.