ಶ್ರೀರಾಮ ಸಕ್ಕರೆ ಕಾರ್ಖಾನೆ ಮಾರಾಟಕ್ಕೆ ಕಾಂಗ್ರೆಸ್ ಸರ್ಕಾರ ಹುನ್ನಾರ: ಸಾ.ರಾ.ಮಹೇಶ್

| Published : Apr 24 2024, 02:24 AM IST

ಶ್ರೀರಾಮ ಸಕ್ಕರೆ ಕಾರ್ಖಾನೆ ಮಾರಾಟಕ್ಕೆ ಕಾಂಗ್ರೆಸ್ ಸರ್ಕಾರ ಹುನ್ನಾರ: ಸಾ.ರಾ.ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

15 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪುನರಾರಂಭ ಮಾಡಲಾಗಿತ್ತು, ಆನಂತರ ಕೆಲವು ತಾಂತ್ರಿಕ ಕಾರಣಗಳಿಂದ ಅದು ಮತ್ತೆ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿದಾಗ ಎರಡು ವರ್ಷಗಳ ಹಿಂದೆ ನಾನು ಮತ್ತೆ ಆರಂಭ ಮಾಡಿಸಿದ್ದೆ, ಆದರೆ ಈಗ ಮತ್ತೆ ಕಾರ್ಖಾನೆ ನಿಂತು ಹೋಗಿದ್ದು, ಈಗಿನವರು ಏನು ಮಾಡುತ್ತಿದ್ದಾರೆ..?

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದರು.

ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿದ್ದು, ಇದರಿಂದ ರೈತರಿಗೆ ತೊಂದರೆಯಾಗಿದೆ ಆದರೆ ಇದನ್ನು ಹೇಳುವವರು ಕೇಳುವವರು ಇಲ್ಲವಾಗಿದೆ ಎಂದರು.

15 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪುನರಾರಂಭ ಮಾಡಲಾಗಿತ್ತು, ಆನಂತರ ಕೆಲವು ತಾಂತ್ರಿಕ ಕಾರಣಗಳಿಂದ ಅದು ಮತ್ತೆ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿದಾಗ ಎರಡು ವರ್ಷಗಳ ಹಿಂದೆ ನಾನು ಮತ್ತೆ ಆರಂಭ ಮಾಡಿಸಿದ್ದೆ, ಆದರೆ ಈಗ ಮತ್ತೆ ಕಾರ್ಖಾನೆ ನಿಂತು ಹೋಗಿದ್ದು, ಈಗಿನವರು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.

ಕೆ.ಆರ್. ನಗರ ಪಟ್ಟಣದ ಪುರಸಭೆಯ 72 ವಾಣಿಜ್ಯ ಮಳಿಗೆಗಳ ಬಾಡಿಗೆ ಮಾಲೀಕರಿಂದ 2.5 ಹಣವನ್ನು ಅಕ್ರಮವಾಗಿ ವಸೂಲಿ ಮಾಡಿದ್ದು, ಆ ಬಗ್ಗೆ ತನಿಖೆ ನಡೆಸಿ ತಪ್ಪು ಮಾಡಿರುವವರನ್ನು ಜೈಲಿಗೆ ಕಳಿಸಬೇಕೆಂದು ಪರೋಕ್ಷವಾಗಿ ಶಾಸಕ ಡಿ. ರವಿಶಂಕರ್ ಅವರನ್ನು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಜ್ಯಕ್ಕೆ ದರಿದ್ರ ಆವರಿಸಲಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬೆಳೆಯಾಗಿ ಮತ್ತೆ ಸುವರ್ಣ ಯುಗ ಆರಂಭವಾಗಬೇಕಾದರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಅಧಿಕಾರಿಗಳು ಮತ್ತು ಗುತ್ತಿಗೆದಾರರಿಂದ ಲಂಚ ಪಡೆಯುವ ಬದಲು ದೇವಾಲಯದ ಮುಂದೆ ಕುಳಿತು ಭಿಕ್ಷೆ ಬೇಡುವುದೇ ವಾಸಿ ಎಂದು ನಾನು ಹೇಳಿಕೆ ನೀಡಿದ ನಂತರ. ಪ್ರತಿಕ್ರಿಯೆ ನೀಡುವ ನೀವು, ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರೆಂದು ಪರೋಕ್ಷವಾಗಿ ಶಾಸಕ ಡಿ. ರವಿಶಂಕರ್ ಅವರನ್ನು ಟೀಕಿಸಿದರು.