ಕುಟುಂಬದವರಿಗಾಗಿ ದೇವೇಗೌಡರಿಂದ ನಾಟಕದ ಕಣ್ಣೀರು: ಡಿಸಿಎಂ ಡಿಕೆಶಿ ಲೇವಡಿ

| Published : Apr 24 2024, 02:24 AM IST

ಕುಟುಂಬದವರಿಗಾಗಿ ದೇವೇಗೌಡರಿಂದ ನಾಟಕದ ಕಣ್ಣೀರು: ಡಿಸಿಎಂ ಡಿಕೆಶಿ ಲೇವಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಜೊತೆಗೆ ಸೀಟಿಗೆ ಕಿತ್ತಾಡಿಕೊಂಡು ಕೇವಲ ಮೂರು ಸೀಟುಗಳನ್ನು ಪಡೆದುಕೊಂಡರು. ತಮ್ಮ ಅಳಿಯನನ್ನು ಆ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಈಗ ತಮ್ಮ ಕುಟುಂಬದವರ ಗೆಲುವಿಗಾಗಿ ಕಣ್ಣೀರು ಹಾಕುತ್ತಿದ್ದು, ಆ ಕಣ್ಣೀರು ರಾಮನಗರದ ಕೊಚ್ಚೆಯಲ್ಲಿ ಸೇರಿಕೊಂಡಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಮಾಜಿ ಪ್ರಧಾನಿ ದೇವೇಗೌಡರು ಮೂರು ಸ್ಥಾನಗಳಿಗಾಗಿ ತಮ್ಮ ಹೆಸರು ಮತ್ತು ಪಕ್ಷವನ್ನು ಬಿಜೆಪಿಗೆ ಅಡ್ಡವಿಟ್ಟರು. ಈಗ ಮಗ, ಅಳಿಯ, ಮೊಮ್ಮಗನನ್ನು ಗೆಲ್ಲಿಸಬೇಕೆಂದು ನಾಟಕವಾಡುತ್ತಾ , ಕಣ್ಣೀರು ಹಾಕುತ್ತಿದ್ದಾರೆ. ಜೆಡಿಎಸ್ ಸ್ಪರ್ಧೆ ಮಾಡಿರುವ ಮೂರು ಕ್ಷೇತ್ರಗಳು ಹಾಗೂ ಅವರ ಅಳಿಯ ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿ ಜೊತೆಗೆ ಸೀಟಿಗೆ ಕಿತ್ತಾಡಿಕೊಂಡು ಕೇವಲ ಮೂರು ಸೀಟುಗಳನ್ನು ಪಡೆದುಕೊಂಡರು. ತಮ್ಮ ಅಳಿಯನನ್ನು ಆ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಈಗ ತಮ್ಮ ಕುಟುಂಬದವರ ಗೆಲುವಿಗಾಗಿ ಕಣ್ಣೀರು ಹಾಕುತ್ತಿದ್ದು, ಆ ಕಣ್ಣೀರು ರಾಮನಗರದ ಕೊಚ್ಚೆಯಲ್ಲಿ ಸೇರಿಕೊಂಡಿದೆ ಎಂದರು.

ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಿದಾಗ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಿದ್ದೇವು. ಅವರು ಬರಲಿಲ್ಲ. ದೇವೇಗೌಡರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗಲೇ ಪ್ರಧಾನಿ ಮೋದಿಯವರಿಗೆ ನೀರಾವರಿ ಯೋಜನೆಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿ ಸಹಿ ಹಾಕುವಂತೆ ಕೇಳಬಹುದಿತ್ತಲ್ಲ. ಏಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.

ಆ ಕುಮಾರಸ್ವಾಮಿಗೆ ಮೈತುಂಬ ದ್ವೇಷ ತುಂಬಿದೆ. ತಾವು ಸೋಲುವ ಸಮಯ ಬಂದಾಗ ಪತ್ನಿಯನ್ನು ನಿಲ್ಲಿಸಿದ್ದರು. ಈಗ ಭಾವನನ್ನು ನಿಲ್ಲಿಸಿದ್ದಾರೆ. ನನಗೆ ವಿಷ ಇಟ್ಟರೆಂದು ಹೇಳುತ್ತಾರೆ. ನಾನು ಯಾವ ರೀತಿ ವಿಷ ಇಟ್ಟೆ ಎಂದು ಹೇಳಲಿ. ನಾನಲ್ಲ ಕುಮಾರಸ್ವಾಮಿಯೇ ದಳ ಮುಗಿಸಿಬಿಟ್ಟ, ಇನ್ನು ದಳ ಮುಗಿದು ಹೋಯಿತು ಎಂದು ಹೇಳಿದರು. ರಾಮನಗರ ಮತ್ತು ಚನ್ನಪಟ್ಟಣ ನನ್ನ ಎರಡು ಕಣ್ಣುಗಳು ಎನ್ನುತ್ತಿದ್ದ ಕುಮಾರಸ್ವಾಮಿ, ಈ ಜಿಲ್ಲೆಯ ಜನರ ಮೇಲೆ ನಂಬಿಕೆಯಿಲ್ಲದೇ ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ನನ್ನ ಜಿಲ್ಲೆಯ ಜನರನ್ನು ರಕ್ಷಣೆ ಮಾಡಿಕೊಳ್ಳುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ತಿಳಿಸಿದರು.

ಕುಟುಂಬ ರಾಜಕಾರಣ ಬಿಟ್ಟು ಅಭಿವೃದ್ಧಿಗೆ ಮತನೀಡಿ:

ಮಾಜಿ ಪ್ರಧಾನಿ ದೇವೇಗೌಡರ ಮಗ ಮಂಡ್ಯದಿಂದ, ಮೊಮ್ಮಗ ಹಾಸನದಿಂದ, ಅಳಿಯ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿದ್ದಾರೆ. ಕ್ಷೇತ್ರದ ಮತದಾರರು ಇವರ ಮಾತುಗಳಿಗೆ ಮೋಸಹೋಗಬೇಡಿ. ಕುಟುಂಬ ರಾಜಕಾರಣ ಮಾಡುವವರನ್ನು ಬಿಟ್ಟು, ಅಭಿವೃದ್ಧಿ ಮಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ. ಕುಮಾರಸ್ವಾಮಿ ಕ್ಷೇತ್ರ ಬಿಟ್ಟು ಹೋಗಿದ್ದು, ಜೆಡಿಎಸ್ ಕಾರ್ಯಕರ್ತರ ಪಾಡೇನು?, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ದುಡಿಯುವ ಡಿ.ಕೆ.ಸುರೇಶ್ ಕೈ ಬಲಪಡಿಸಿ ಎಂದು ಮುಕ್ತ ಆಹ್ವಾನ ನೀಡಿದರು.

ರಾಮನಗರ ಅಭಿವದ್ಧಿಗೆ ಶ್ರಮಿಸಿದ್ದೇವೆ:

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ, ನೀವು ಕೊಟ್ಟ ಅಧಿಕಾರವನ್ನು ಸದ್ಬಳಸಿಕೊಂಡು ಅಭಿವೃದ್ಧಿಗೆ ಸಹಕಾರ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಶಾಸಕ ಇಕ್ಬಾಲ್ ಹುಸೇನ್ , ಮಾಜಿ ಶಾಸಕ ಕೆ.ರಾಜು, ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಜಿಪಂ ಮಾಜಿ ಅಧ್ಯಕ್ಷ ರಮೇಶ್ , ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್ , ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್ , ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಡಾ.ದೀಪಾಮುನಿರಾಜು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ ಮತ್ತಿತರರು ಹಾಜರಿದ್ದರು.

ಎಚ್ ಡಿಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಸ್ಪರ್ಧಿಸಲಿ: ಡಿಕೆಶಿ ಸವಾಲು

ರಾಮನಗರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಧೈರ್ಯವಿದ್ದರೆ ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಸ್ಪರ್ಧೆ ಮಾಡಿ ತೋರಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು. ನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಚನ್ನಪಟ್ಟಣದ ಮುಸಲ್ಮಾನರು ಜಾತ್ಯತೀತ ವ್ಯಕ್ತಿ ಇರಲೆಂದು ಕುಮಾರಸ್ವಾಮಿ ಅವರಿಗೆ ಮತ ನೀಡಿ ಗೆಲ್ಲಿಸಿದ್ದರು. ಈಗ ಮುಸ್ಲಿಂರ ಮತವೇ ಬೇಡ ಎನ್ನುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮತ್ತೆ ಸ್ಪರ್ಧೆ ಮಾಡಲಿ, ಅಲ್ಲಿನ ಅಲ್ಪಸಂಖ್ಯಾತ ಮುಖಂಡರು ಪಾಠ ಕಲಿಸುತ್ತಾರೆ ಎಂದು ಹೇಳಿದರು.

‘ಬೆಂಗಳೂರಿನ ಕುಡಿಯುವ ನೀರಿನ ಮೇಕೆದಾಟು ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರ ಕಳೆದ ಐದು ವರ್ಷಗಳಿಂದ ಅನುಮತಿ ನೀಡಿಲ್ಲ. ಈ ಯೋಜನೆಗೆ ಅನುಮತಿ ನೀಡಿದ್ದರೆ, ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಸಾಧ್ಯವಾಗುತ್ತಿತ್ತು. ರಾಜ್ಯದಲ್ಲಿ ಹಿಂದೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದ್ದರೂ ಅವರು ಅನುಮತಿ ನೀಡಿಲ್ಲ. ನೀರಿನ ಸಮಸ್ಯೆ ಉದ್ಭವಿಸಿ ಬೆಂಗಳೂರಿಗೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ನೀವೆಲ್ಲರೂ ಮತ್ತೆ ನನಗೆ ಆಶೀರ್ವಾದ ಮಾಡಿದರೆ, ಪ್ರತಿನಿತ್ಯ ಕಾವೇರಿ ನೀರು ಪೂರೈಸುವ ಕೆಲಸ ಮಾಡಲಾಗುವುದು.’

- ಡಿ.ಕೆ.ಸುರೇಶ್ , ಕಾಂಗ್ರೆಸ್ ಅಭ್ಯರ್ಥಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರ.