ಮೋದಿ ಸಮಾವೇಶಕ್ಕೆ ಸಜ್ಜಾದ ಶಿರಸಿ ನಗರ

| Published : Apr 28 2024, 01:29 AM IST / Updated: Apr 28 2024, 09:41 AM IST

ಸಾರಾಂಶ

ಶಿರಸಿ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ಲಕ್ಷ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ೮೫ ಸಾವಿರ ಖುರ್ಚಿಗಳನ್ನು ಹಾಕಲಾಗಿದೆ. ಇಪ್ಪತ್ತು ಬ್ಲಾಕ್‌ಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ.

ಪ್ರವೀಣ ಹೆಗಡೆ

  ಶಿರಸಿ :  ಪ್ರಧಾನಿಯಾದ ಬಳಿಕ ಶಿರಸಿಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿ ಬಹಿರಂಗ ಸಮಾವೇಶಕ್ಕೆ ಶಿರಸಿ ನಗರ ಸಜ್ಜಾಗುತ್ತಿದ್ದು, ಇತ್ತ ಪ್ರಧಾನಿಯನ್ನು ಶಿರಸಿಯ ನೆಲದಲ್ಲಿ ಕಣ್ತುಂಬಿಕೊಳ್ಳಲು ಜನರು ಕಾತರಾಗಿದ್ದಾರೆ.

ಶಿರಸಿ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ಲಕ್ಷ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ೮೫ ಸಾವಿರ ಖುರ್ಚಿಗಳನ್ನು ಹಾಕಲಾಗಿದೆ. ಇಪ್ಪತ್ತು ಬ್ಲಾಕ್‌ಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಪ್ರತಿ ಬ್ಲಾಕ್‌ನಲ್ಲಿ ಐದು ಸಾವಿರ ಜನರು ಭಾಗವಹಿಸಲಿದ್ದಾರೆ. ಮಹಿಳೆಯರಿಗೆ, ಪ್ರಥಮ ಮತದಾರರಿಗೆ, ಯುವಕರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿದೆ. ಪ್ರವೇಶಕ್ಕೆ ಐದು ದ್ವಾರಗಳಿವೆ. ಹಲವೆಡೆ ವಿಐಪಿ ಪಾಸ್ ಹಂಚಿಕೆ ಮಾಡಲಾದರೂ, ಎಲ್ಲರಿಗೂ ಮುಕ್ತ ಅವಕಾಶ ಮಾಡಲಾಗಿದೆ. ಬಿಸಿಲಿನ ಝಳ ಅಧಿಕವಾಗಿರುವ ಕಾರಣ ಸೆಕೆಯಾಗದಂತೆ ಫ್ಯಾನ್ ಅಳವಡಿಕೆ, ಪ್ರತಿ ಬ್ಲಾಕ್ ನಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲಡೆ ಶುದ್ಧೀಕರಿಸಿದ ನೀರಿನ ಸೇವೆಯನ್ನು ಕಾರ್ಯಕರ್ತರು ಒದಗಿಸಲಿದ್ದಾರೆ.

ಪ್ರಮುಖವಾದ ವೇದಿಕೆಯ ಮೇಲೆ ಕೇಂದ್ರದ ಸಚಿವ ಪ್ರಹ್ಲಾದ ಜೋಶಿ, ಸಂಸದ ಅನಂತಕುಮಾರ ಹೆಗಡೆ, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಲೋಕಸಭಾ ಕ್ಷೇತ್ರದ ಉಸ್ತುವಾರಿ ವಿ. ಸುನೀಲಕುಮಾರ, ಶಾಸಕರು, ಮಾಜಿ ಶಾಸಕರು, ಬಿಜೆಪಿ, ಜೆಡಿಎಸ್ ಜಿಲ್ಲಾಧ್ಯಕ್ಷರು ಆಗಮಿಸಲಿದ್ದಾರೆ.

11 ಕ್ಕೆ ಕಾರ್ಯಕ್ರಮ ಆರಂಭ:

ಸಭಾ ಕಾರ್ಯಕ್ರಮದ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ಆಕರ್ಷಿಸಲಿದ್ದು, ಸರಿಯಾಗಿ ೧೧ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ನಾಯಕರು ವೇದಿಕೆಯಲ್ಲಿ ತಮ್ಮ ಮಾತನ್ನು ಆರಂಭಿಸಲಿದ್ದಾರೆ. ಆ ನಂತರ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಸೇರಿಕೊಳ್ಳಲಿದ್ದು, ಆ ನಂತರ ಕಿತ್ತೂರ, ಖಾನಾಪುರ ಒಳಗೊಂಡ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಜನತೆಯನ್ನು ಉದ್ದೇಶಿಸಿ, ಪ್ರಧಾನಿ ನರೇಂದ್ರ ಮೋದಿ ಮಾತನ್ನಾಡಲಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆ

ದೇಶದ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವುದರಿಂದ ಕಿತ್ತೂರ, ಖಾನಾಪುರ ಒಳಗೊಂಡಂತೆ ಜಿಲ್ಲೆ, ರಾಜ್ಯದಿಂದ ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾರ್ಗದರ್ಶನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬ್ಲಾಕ್‌ನಲ್ಲಿ ೧೦ ಸ್ವಯಂ ಸೇವಕರು ಆಸೀನರಾದವರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಿದ್ದಾರೆ. ಆಗಮಿಸಿದವರಿಗೆ ಯಾರಿಗೂ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಿದ್ದಾರೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್‌ಗಳಿಗೆ ನಿಷೇಧವಿದೆ. ಸುಮಾರು ೧ ಕಿ.ಮೀ ದೂರದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಿ, ವೇದಿಕೆಯ ಬಳಿ ಬರಬೇಕಾಗಿದೆ. ಅಲ್ಲಿಂದ ನಡೆದುಕೊಂಡು ಬರುವ ಪ್ರತಿಯೊಬ್ಬರಿಗೂ ನೀರು ಲಭಿಸಬೇಕೆಂಬ ಉದ್ದೇಶದಿಂದ ೫೭ ಸಾವಿರ ನೀರಿನ ಬಾಟಲ್‌ಗಳ ವ್ಯವಸ್ಥೆ ಮಾಡಿ, ಜನರ ಬಾಯಾರಿಕೆ ತಣಿಸಲು ಶ್ರೀನಿವಾಸ ಹೆಬ್ಬಾರ ಪಣತೊಟ್ಟಿದ್ದಾರೆ.

ಎಲ್.ಇ.ಡಿ ಸ್ಕ್ರೀನ್ ವ್ಯವಸ್ಥೆ:

ವಿಶ್ವ ಮಾನವ ತಮ್ಮೂರಿಗೆ ಆಗಮಿಸುತ್ತಿರುವುದು ಶಿರಸಿ ಜನತೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ, ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಭಾಷಣ ಕೇಳಲು ಈಗಾಗಲೇ ಜನರು ಉತ್ಸುಕತೆಯಿಂದ ಜನರು ಕಾಯುತ್ತಿದ್ದಾರೆ. ಅವರಿಗೆ ಅವಕಾಶ ನೀಡುವ ಸಲುವಾಗಿ ಒಳಾಂಗಣದಲ್ಲಿ ೮ ಡಿಜಿಟಲ್ ಸ್ಕ್ರೀನ್ ಮತ್ತು ಹೊರ ಭಾಗದಲ್ಲಿ ೪ ಎಲ್.ಇ.ಡಿ ಸ್ಕ್ರೀನ್ ಅಳವಡಿಸಿ, ಅನುಕೂಲ ಕಲ್ಪಿಸಲಾಗಿದೆ.