ಚುನಾವಣೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ: ಎಸ್ಪಿ ಶಾಂತರಾಜು

| Published : Apr 26 2024, 12:49 AM IST

ಚುನಾವಣೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ: ಎಸ್ಪಿ ಶಾಂತರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಾರ ಲೋಕಸಭಾ ಕ್ಷೇತ್ರದ ಕೆಜಿಎಫ್ ಹಾಗೂ ಬಂಗಾರಪೇಟೆ ವ್ಯಾಪ್ತಿಯಲ್ಲಿ ಏನಾದರೂ ಕಾನೂನು ಬಾಹಿರ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು, ಅಕ್ರಮ ಮದ್ಯ ಮಾರಾಟ ಹಾಗೂ ಹಂಚಿಕೆ ತಡೆಯುವಲ್ಲಿ ತಕ್ಷಣವೇ ಕಾರ್ಯಾಚರಣೆ ನಡೆಸಲಾಗುವುದು, ತಪ್ಪಿದ್ದಲ್ಲಿ ಅಂತಹ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಸ್‌ಪಿ ಕೆ.ಎಂ.ಶಾಂತರಾಜು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಕೆಜಿಎಫ್

ಶುಕ್ರವಾರ ನಡೆಯುವ ಲೋಕಸಭಾ ಚುನಾವಣೆಯ ನಿಮಿತ್ತ ಕೆಜಿಎಫ್ ಪೊಲೀಸ್ ಜಿಲ್ಲೆಯಾದ್ಯಂತ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಮತದಾರರು ನಿರ್ಭಯದಿಂದ ಭಾಗವಹಿಸುವಂತೆ ಕೆಜಿಎಫ್ ಎಸ್‌ಪಿ ಕೆ.ಎಂ.ಶಾಂತರಾಜು ಕರೆ ನೀಡಿದರು.

ಲೋಕಸಭೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಡಿ.ಎ.ಆರ್. ಸಿಪಿಎಂಎಫ್ ಹಾಗೂ ಕೆ.ಎಸ್.ಆರ್.ಪಿ ಅಧಿಕಾರಿ ಸಿಬ್ಬಂದಿಗೆ ಬಂಗಾರಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಮತ್ತು ಕೆ.ಜಿ.ಎಫ್‌ನ ಸ್ಕೂಲ್ ಆಫ್ ಮೈನ್ಸ್‌ನಲ್ಲಿ ತಿಳುವಳಿಕೆ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಪ್ರಯುಕ್ತ ಚುನಾವಣಾ ಆಯೋಗದ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಯಾವುದೇ ಪೊಲೀಸ್ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಯಾವುದೇ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳೊಂದಿಗೆ ಗುರುತಿಸಿಕೊಳ್ಳಬಾರದು, ಹಾಗೊಮ್ಮೆ ಎಲ್ಲಾದರೂ ದೂರು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಸ್‌ಪಿ ಕೆ.ಎಂ.ಶಾಂತರಾಜು ಎಚ್ಚರಿಸಿದರು.

ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ, ಆಯಾ ಠಾಣಾ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಒಳ ಪ್ರವೇಶಿಸುವ ಹಾಗೂ ಹೊರಹೋಗುವ ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕು, ಅಕ್ರಮವಾಗಿ ಯಾವುದೇ ಬೆಲೆಬಾಳುವ ವಸ್ತುಗಳು, ಉಡುಗೊರೆಗಳು, ಹಣವನ್ನು ಕಂಡಲ್ಲಿ ಮುಟ್ಟುಗೋಲು ಹಾಕಿಕೊಂಡು ಕೂಡಲೇ ಪ್ರಕರಣ ದಾಖಲಿಸಬೇಕು, ಬಂದೂಕು, ಮಾರಣಾಯುಧಗಳನ್ನು ಯಾರೂ ಸಾರ್ವಜನಿಕ ಸ್ಥಳಗಳಲ್ಲಿ ಕೊಂಡೊಯ್ಯದಂತೆ ಅಗತ್ಯ ಕ್ರಮವಹಿಸಬೇಕು, ಸಮಾಜಘಾತುಕ ಶಕ್ತಿಗಳು, ರೌಡಿ, ಗೂಂಡಾ ಪಟ್ಟಿಯಲ್ಲಿರುವವರ ಮೇಲೆ ತೀವ್ರ ನಿಗಾ ಇಡಬೇಕು, ಅಂತಹವರ ಚಲನವಲನಗಳ ಬಗ್ಗೆ ಸಾರ್ವಜನಿಕರ ಸಹಕಾರದಿಂದ ಮಾಹಿತಿ ಗೌಪ್ಯವಾಗಿ ಸಂಗ್ರಹಿಸಬೇಕು ಎಂದರು.

ಕೋಲಾರ ಲೋಕಸಭಾ ಕ್ಷೇತ್ರದ ಕೆಜಿಎಫ್ ಹಾಗೂ ಬಂಗಾರಪೇಟೆ ವ್ಯಾಪ್ತಿಯಲ್ಲಿ ಏನಾದರೂ ಕಾನೂನು ಬಾಹಿರ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು, ಅಕ್ರಮ ಮದ್ಯ ಮಾರಾಟ ಹಾಗೂ ಹಂಚಿಕೆ ತಡೆಯುವಲ್ಲಿ ತಕ್ಷಣವೇ ಕಾರ್ಯಾಚರಣೆ ನಡೆಸಲಾಗುವುದು, ತಪ್ಪಿದ್ದಲ್ಲಿ ಅಂತಹ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಸ್‌ಪಿ ಕೆ.ಎಂ.ಶಾಂತರಾಜು ಎಚ್ಚರಿಸಿದರು.

ಮತದಾರರು ಹಾಗೂ ಸಾರ್ವಜನಿಕರು ಲೋಕಸಭಾ ಚುನಾವಣೆಯಲ್ಲಿ ನಿರ್ಭೀತಿಯಿಂದ ಭಾಗವಹಿಸಬಹುದು. ಈ ಸಂಬಂಧ ಯಾವುದೇ ಅಕ್ರಮ ಚಟುವಟಿಕೆ ಕುರಿತು ಮಾಹಿತಿ ಇದ್ದಲ್ಲಿ ಸಮೀಪದ ಪೊಲೀಸ್ ಠಾಣೆಗೆ, ಕೇಂದ್ರಕ್ಕೆ ದೂರವಾಣಿ ಸಂಖ್ಯೆ: ೧೧೨, ೦೮೧೫೩-೨೭೪೭೪೩, ೨೭೪೨೯೨ ಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಲು ಎಸ್ಪಿ ಕೆ.ಎಂ.ಶಾಂತರಾಜು ಕೋರಿದರು.

ಬಂಗಾರಪೇಟೆ ಹಾಗೂ ಕೆಜಿಎಫ್ ವಿಧಾನಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಕೆಜಿಎಫ್ ಪೊಲೀಸ್ ಜಿಲ್ಲೆಯ ವ್ಯಾಪ್ತಿಯ ಮತಗಟ್ಟೆಗಳ ಪೈಕಿ ಸೂಕ್ಷ್ಮ ಹಾಗೂ ಅತೀಸೂಕ್ಷ್ಮವೆಂದು ಗುರುತಿಸಿರುವ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.

ಒಟ್ಟಾರೆ ನ್ಯಾಯಸಮ್ಮತ ಹಾಗೂ ಮುಕ್ತ ರೀತಿಯಲ್ಲಿ ಚುನಾವಣೆ ನಡೆಯಲು ಎಲ್ಲಾ ಅಧಿಕಾರಿ, ಸಿಬ್ಬಂದಿ ಸಹಕರಿಸಬೇಕೆಂದು ಎಸ್‌ಪಿ ಕೆ.ಎಂ.ಶಾಂತರಾಜು ಕರೆ ನೀಡಿದರು.

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಮತಗಟ್ಟೆ, ಚುನಾವಣೆ ಕರ್ತವ್ಯದಲ್ಲಿ ಮೂಲಭೂತವಾಗಿ ಅವಶ್ಯಕವುಳ್ಳ ವಸ್ತುಗಳ ಕಿಟ್ಟನ್ನು ಹಾಗೂ ತಿಳುವಳಿಕೆ ಪುಸ್ತಕವನ್ನು ಕೆ.ಎಂ.ಶಾಂತರಾಜು ವಿತರಿಸಿದರು.

ಪೊಲೀಸ್ ಉಪಾಧೀಕ್ಷಕ ಎಸ್.ಪಾಂಡುರಂಗ, ತಿಪ್ಪೆಸ್ವಾಮಿ ಬಿ.ಎಂ, ಸುರೇಂದ್ರ ಕುಮಾರ್ ಐ.ಪಿ.ಎಫ್ ಆರ್‌ಪಿಐ ರಾಮಕೃಷ್ಣ ಇದ್ದರು.

ಕೆಜಿಎಫ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್:

ಕೆಜಿಎಫ್ ಪೊಲೀಸ್ ಜಿಲ್ಲಾ ವ್ಯಾಪ್ತಿಯ ಅತಿ ಸೂಕ್ಷ್ಮ, ಸೂಕ್ಷ್ಮ, ಹಾಗೂ ಸಾಮಾನ್ಯ ಪ್ರದೇಶಗಳಿಗೂ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ೩೦ ಮೇಲುಸ್ತುವಾರಿ ಸ್ವ್ಕಾಡ್, ೮ ಚೆಕ್‌ಪೋಸ್ಟ್‌ಗಳು, ೨ ಎ.ಎಸ್.ಸಿ. ಟೀಮ್‌ಗಳು, ೨ ಕ್ಯೂ.ಆರ್.ಟಿ. ಟೀಮ್‌ಗಳು, ಜಿಲ್ಲೆಯಾದ್ಯಂತ ಗಸ್ತುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ವಿವರಿಸಿದರು. ಚುನಾವಣಾ ಬಂದೋಬಸ್ತಿಗಾಗಿ ಎಸ್‌ಪಿ-೧, ಇಬ್ಬರು ಡಿವೈಎಸ್ಪಿ, ಆರ್‌ಪಿಐ-೧, ಒಂಬತ್ತು ಇನ್ಸ್‌ಪೆಕ್ಟರ್, ೨೫ ಪಿಎಸ್‌ಐ, ೮೩ ಎಎಸ್‌ಐ, ೨೪೫ ಹೆಡ್‌ಕಾನ್ಸ್‌ಟೇಬಲ್, ೩೩೬ ಕಾನ್ಸ್‌ಟೇಬಲ್, ೮೧ ಮಹಿಳಾ ಕಾನ್ಸ್‌ಟೇಬಲ್, ೨೩೫ ಗೃಹರಕ್ಷಕರು, ೨೨೨ ಮಂದಿ ಡಿ.ಎ.ಆರ್. ಪೊಲೀಸರು, ೩ ಕೆಎಸ್‌ಆರ್‌ಪಿ ತುಕಡಿಗಳು ಸೇರಿ ೯೩ ಮಂದಿ ಪ್ಯಾರಾ ಮಿಲಿಟರಿ (ರೈಲ್ವೆ ರಕ್ಷಣಾ ವಿಶೇಷ ಪಡೆ) ಸಿಬ್ಬಂದಿಯನ್ನು ಸೇರಿದಂತೆ ಎಲ್ಲಾ ಒಟ್ಟು ೧೫೦೦ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.