ಕಾರ್ಕಳ: ಮತದಾನದ ಪೂರ್ವ ತಯಾರಿ ಪೂರ್ಣ

| Published : Apr 26 2024, 12:49 AM IST

ಸಾರಾಂಶ

ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ 172, ಹೆಬ್ರಿ ತಾಲೂಕಿನಲ್ಲಿ 37 ಬೂತ್‌ಗಳಿದ್ದು ಒಟ್ಟು 209 ಬೂತ್‌ಗಳಿವೆ. ಮತದಾನದ ಪೂರ್ವ ತಯಾರಿಗಳು ಮಂಜುನಾಥ ಪೈ ಸ್ಮಾರಕ ಕಾಲೇಜಿನಲ್ಲಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಪೂರ್ವ ತಯಾರಿಗಳು ಕಾರ್ಕಳ ಮಂಜುನಾಥ ಪೈ ಸ್ಮಾರಕ ಕಾಲೇಜಿನಲ್ಲಿ ನಡೆಸಲಾಯಿತು.

ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ 172, ಹೆಬ್ರಿ ತಾಲೂಕಿನಲ್ಲಿ 37 ಬೂತ್‌ಗಳಿದ್ದು ಒಟ್ಟು 209 ಬೂತುಗಳಿವೆ. ಎರಡು ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 1,91, 450 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ. ಚುನಾವಣಾ ಕಣ್ಗಾವಲಿಗಾಗಿ ವೀಡಿಯೋಗ್ರಫಿ, ಮೈಕ್ರೋ ಅಬ್ಸರ್ವರ್, ವೆಬ್ ಕಾಸ್ಟಿಂಗ್ ವಿಭಾಗ ಗಳನ್ನಾಗಿ ವಿಂಗಡಿಸಲಾಗಿದೆ. ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡ ಪಿಆರ್‌ಒ, ಎಪಿಆರ್‌ಒ, ಪಿ.ಒ, ಗ್ರೂಪ್ ಡಿ ನೌಕರರು, ಮೈಕ್ರೋ ಅಬ್ಸರ್ವರ್‌ಗಳು, ಡಿ ಗ್ರೂಪ್ ನೌಕರರು ಸೇರಿ 1217 ಮಂದಿ ಕಾರ್ಯನಿರ್ವಹಿಸಲಿದ್ದಾರೆ .

ಹೋಮ್ ಮತದಾನದಲ್ಲಿ 1139 ಮತದಾರರು ನೋಂದಾಯಿಸಿಕೊಂಡಿದ್ದು ಅದರಲ್ಲಿ 1112 ಮತದಾರರು ಮತ ಚಲಾಯಿಸಿದ್ದಾರೆ. 7 ಮಂದಿ ತುರ್ತು ಸೇವಾದಾರರು ಅಂಚೆ ಮತದಾನ ನಡೆಸಿದ್ದಾರೆ. ಇನ್ನುಳಿದ 20 ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಮತದಾನ ಮಾಡಿಲ್ಲ. ಕಾರ್ಕಳ ಹೆಬ್ರಿ ತಾಲೂಕು ವ್ಯಾಪ್ತಿಗಳ ಒಟ್ಟು 209 ಬೂತುಗಳಲ್ಲಿ 209 ಕಂಟ್ರೋಲ್ ಯೂನಿಟ್, 257 ಬ್ಯಾಲೆಟ್ ಯೂನಿಟ್, 282 ಮತಯಂತ್ರ ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ, ಮತಗಟ್ಟೆಗಳ ಪೈಕಿ 5 ಸಖಿ ಮತಗಟ್ಟೆ, 1 ಪಿಡಬ್ಲುಡಿ ಮತಗಟ್ಟೆ, 1 ಯುವ ಮತಗಟ್ಟೆ, 1 ಸಾಂಪ್ರದಾಯಿಕ ಮತಗಟ್ಟೆ ಹಾಗೂ 1 ವಿಷಯವಾರು ಮತಗಟ್ಟೆ ತೆರೆಯಲಾಗಿದೆ.

ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯ ಕ್ಕೆ ತೆರಳಲು ಬಸ್ಸು, ವ್ಯಾನ್, ಮಿನಿ ಬಸ್, ಟೆಂಪೊ ಟ್ರಾವೆಲ್ಲರ್‌, ಟಾಟಾ ಸುಮೋ ವಾಹನಗಳು ಸೇರಿ ಒಟ್ಟು 57 ವಾಹನಗಳನ್ನು ಬಳಸಲಾಗಿದೆ.

ಮತಗಟ್ಟೆ ಭದ್ರತೆಗಾಗಿ ಗುಜರಾತಿನಿಂದ ಪೊಲೀಸರನ್ನು ಕರೆಸಲಾಗಿದ್ದು ಸಿಆರ್‌ಪಿಎಫ್, ಸಿಎಪಿಎಫ್, ಹೋಮ್ ಗಾರ್ಡ್, ಕೆ.ಎಸ್.ಆರ್.ಪಿ, ಸಿವಿಲ್, ಒಟ್ಟು 550 ಮಂದಿ ಪೊಲೀಸ್ ಸಿಬ್ಬಂದಿಗಳಿದ್ದಾರೆ. ಸೂಕ್ಷ್ಮ ಮತಗಟ್ಟೆಯಲ್ಲಿ 5 ಜನ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಲಾಗಿದೆ , ಕಾರ್ಕಳ ಮಂಜುನಾಥ ಪೈ ಮೆಮೋರಿಯಲ್ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನಲ್ಲಿ ಕರ್ತವ್ಯ ದ ಮಸ್ಟರಿಂಗ್, ಡಿ ಮಸ್ಟರಿಂಗ್ ವೇಳೆಯಲ್ಲಿ ಸ್ಥಳಕ್ಕೆ ಕರ್ತವ್ಯ ನಿಮಿತ್ತ ದಾಂಡೆಲಿ ಮೂಲದ ಪೊಲೀಸ್ ಸಿಬ್ಬಂದಿ ಮೂರ್ಚೆಗೊಂಡು ಕುಸಿದುಬಿದ್ದಿದ್ದಾರೆ. ತೀವ್ರ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಥಮ ಚಿಕಿತ್ಸೆಯನ್ನು ನೀಡಿ ಅವರನ್ನು ಕಾರ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ .