ಇಂಡಿಯಾ ಒಕ್ಕೂಟದಿಂದ ಪರಿವಾರ ಬಚಾವೋ: ಜೆಪಿ ನಡ್ಡಾ

| Published : Apr 27 2024, 01:02 AM IST

ಇಂಡಿಯಾ ಒಕ್ಕೂಟದಿಂದ ಪರಿವಾರ ಬಚಾವೋ: ಜೆಪಿ ನಡ್ಡಾ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಬುರ್ಗಿಯ ಖರ್ಗೆಯವರು ಮತ್ತು ಇಂಡಿಯಾ ಒಕ್ಕೂಟವು ರಾಷ್ಟ್ರದ ಹಿತಾಸಕ್ತಿಗೆ ಮತ್ತು ಅಭಿವೃದ್ಧಿಗೆ ಗಮನಕೊಡದೆ ಈ ಚುನಾವಣೆಯಲ್ಲಿ ತಮ್ಮ ಪರಿವಾರವನ್ನು ರಕ್ಷಿಸುವ ಹಾಗೂ ಭ್ರಷ್ಟಾಚಾರವನ್ನು ರಕ್ಷಣೆ ಮಾಡುವ ಎರಡೇ ಎರಡು ಅಜೆಂಡಾದ ಮೇಲೆ ಚುನಾವಣೆ ಕಣಕ್ಕಿಳಿದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇಂಡಿಯಾ ಒಕ್ಕೂಟಕ್ಕೆ ಕೇವಲ ಎರಡೇ ಧ್ಯೇಯಗಳಿದ್ದು ಒಂದು ಪರಿವಾರ ಬಚಾವೋ. ಎರಡನೆಯದು ಭ್ರಷ್ಟಾಚಾರ ಬಚಾವೋ ಬಿಟ್ಟರೆ ಬೇರೆ ಯಾವುದೇ ಕಾರ್ಯಕ್ರಮಗಳಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಿಜೆಪಿ ನಡ್ಡಾ ದೂರಿದರು.

ಕಲಬುರಗಿಯಲ್ಲಿ ಶುಕ್ರವಾರ ಗಣೇಶ ಮಂದಿರ ಬಳಿ ನಡೆದ ರೋಡ್‌ ಷೋದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಕಲ್ಬುರ್ಗಿಯ ಖರ್ಗೆಯವರು ಮತ್ತು ಇಂಡಿಯಾ ಒಕ್ಕೂಟವು ರಾಷ್ಟ್ರದ ಹಿತಾಸಕ್ತಿಗೆ ಮತ್ತು ಅಭಿವೃದ್ಧಿಗೆ ಗಮನಕೊಡದೆ ಈ ಚುನಾವಣೆಯಲ್ಲಿ ತಮ್ಮ ಪರಿವಾರವನ್ನು ರಕ್ಷಿಸುವ ಹಾಗೂ ಭ್ರಷ್ಟಾಚಾರವನ್ನು ರಕ್ಷಣೆ ಮಾಡುವ ಎರಡೇ ಎರಡು ಅಜೆಂಡಾದ ಮೇಲೆ ಚುನಾವಣೆ ಕಣಕ್ಕಿಳಿದಿದೆ ಒಂದು ಬಲಿಷ್ಠ ಮತ್ತು ಅಭಿವೃದ್ಧಿಯ ಸರಕಾರ ಅದು ಮೋದಿಯವರ ಕನಸಿನ ಸರ್ಕಾರವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಹಗರಣಗಳ ಸರಕಾರವಾಗಿದ್ದು ನೂರಾರು ಹಗರಣಗಳಲ್ಲಿ ಸಿಲುಕಿ ಕಾಂಗ್ರೆಸ್ಸಿನ ನಾಯಕರು ಹಾಗೂ ಇಂಡಿಯಾ ಒಕ್ಕೂಟದ ಮುಖಂಡರು ಒಂದೋ ಜೈಲಿನಲ್ಲಿದ್ದಾರೆ ಇಲ್ಲವೇ ಬೇಲ್ ನಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ನೂರಾರು ಹಗರಣಗಳನ್ನು ಮಾಡಿ ದೇಶವನ್ನು ಲೂಟಿ ಹೊಡೆದಿದೆ. ಗಣಿ ಹಗರಣ, ಆಗಸ್ಟ ವೆಸ್ಟ್ ಲ್ಯಾಂಡ್ ಹಗರಣ, 2ಜಿ, 3ಜಿ ಹಗರಣ ಕಾಮನ್ವೆಲ್ತ್ ಹಗರಣ, ಬಾಹ್ಯಾಕಾಶ ಹಗರಣ ಹೀಗೆ ನೂರಾರು ಹಗರಣಗಳನ್ನು ಮಾಡಿ ಭಾರತವನ್ನು ಕೊಳ್ಳೆ ಹೊಡೆದಿದ್ದಾರೆ. ಕಾಂಗ್ರೆಸ್ ಪಕ್ಷವು ಭೂಮಿ, ಆಕಾಶ ಪಾತಾಳ ಯಾವುದನ್ನು ಬಿಡದೆ ಲೂಟಿ ಮಾಡಿದ ಪಕ್ಷವಾಗಿದೆ. ಮಮತಾ ಸರ್ಕಾರವು ಶಿಕ್ಷಕರ ನೇಮಕಾತಿ ಹಗರಣ ಭೂಮಿ ಹಗರಣ, ಆಪ್ ಸರ್ಕಾರವು ಅಬಕಾರಿ ಹಗರಣ ಹೀಗೆ ಇಂಡಿಯಾ ಒಕ್ಕೂಟದ ಪಕ್ಷಗಳಾದ ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ ಹಗರಣಗಳನ್ನು ನಡೆಸಿ ರಾಷ್ಟ್ರದ ಸಂಪತ್ತು ಕೊಳ್ಳೆ ಹೊಡೆದ ದುಷ್ಟ ಕೂಟವಾಗಿದೆ ಎಂದರು.

ಅಖಿಲೇಶ್ ಯಾದವ್, ಪಿ.ಚಿದಂಬರಂ, ಮಮತಾ ಬ್ಯಾನರ್ಜಿ ಕೇಜ್ರಿ ವಾಲ್, ಹೀಗೆ ಎಲ್ಲರೂ ಒಂದೋ ಜೈಲಿನಲ್ಲಿದ್ದಾರೆ ಇಲ್ಲವೇ ಜಾಮೀನಿನ ಮೇಲೆ ಜೀವನ ನಡೆಸುತ್ತಿದ್ದಾರೆ. ಇಂತಹ ಭ್ರಷ್ಟ ಕೂಟವನ್ನು ಕಿತ್ತೆಸೆಯಲು ಈ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ನಿಮ್ಮೆಲ್ಲರ ಆಶೀರ್ವಾದ ಅಗತ್ಯ ಎಂದು ಹೇಳಿದರು.

ಮೋದಿಯವರ ನೇತೃತ್ವದಲ್ಲಿ ಬಲಿಷ್ಠ ಸರಕಾರ ರಚನೆಯಾದ ಪರಿಣಾಮವಾಗಿ ರಾಮಮಂದಿರ ನಿರ್ಮಾಣ, ಪಾಕಿಸ್ತಾನ ಬಾಂಗ್ಲಾ ಆಫ್ಘಾನಿಸ್ತಾನದಿಂದ ಬಂದ ಭಾರತೀಯರಿಗೆ ಪೌರತ್ವ ನೀಡುವ ಸಿ ಎ ಎ ಕಾನೂನು ಜಾರಿ ಮಾಡಿ ಅಭಿವೃದ್ಧಿಯ ಮೈಲಿಗಲ್ಲು ಸ್ಥಾಪಿಸಿದೆ.ಕಾಂಗ್ರೆಸ್ ಕಾಲದಲ್ಲಿ ಪಾಕ್ ಪರ ಭಯೋತ್ಪಾದಕರು ಮತ್ತು ಕಾಶ್ಮೀರದ ಭಯೋತ್ಪಾದಕರನ್ನು ಪ್ರಧಾನಿ ಕಾರ್ಯಾಲಯಕ್ಕೆ ಕರೆಸಿ ಮಾತುಕತೆ ನಡೆಸಿದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂತಹ ಭಯೋತ್ಪಾದಕರಿಗೆ ತಕ್ಷಣದಲ್ಲಿ ಆಕ್ರಮಣ ನಡೆಸಿ ಪಾಠ ಕಲಿಸಿದರು.

ಮೋದಿಯವರ ನೇತೃತ್ವದ ಬಲಿಷ್ಠ ಸರಕಾರ ಕೇಂದ್ರದಲ್ಲಿದ್ದರೆ ಸುಭದ್ರವಾಗಿರುತ್ತದೆ. ಕಾಂಗ್ರೆಸ್ ಅಸಹಾಯಕ ಆಡಳಿತ ಅವಧಿಯಲ್ಲಿ ಭಾರತವು ಭಯೋತ್ಪಾದಕರಿಗೆ ಮಣಿದಿತ್ತು. ಈಗ ಭಾರತವು ಜಗತ್ತಿನ ಆರ್ಥಿಕ ವ್ಯವಸ್ಥೆಯಲ್ಲಿ ಐದನೇ ಸ್ಥಾನದಲ್ಲಿದ್ದು ಇನ್ನೊಮ್ಮೆ ಪ್ರಧಾನಮಂತ್ರಿ ಮೋದಿ ಅಧಿಕಾರ ನಡೆಸಿದರೆ ಮೂರನೇ ಸ್ಥಾನಕ್ಕೇರುವುದು ಖಚಿತ. ಕರೋನಾ ಸಂದರ್ಭದಲ್ಲಿ ಭಾರತವು ವಿಶ್ವಕ್ಕೆ ಔಷಧಿ ಪೂರೈಸಿ ಮಾನವೀಯತೆ ಮೆರೆದ ಮಾದರಿ ರಾಷ್ಟ್ರವಾಗಿದೆ. ಆಟೋಮೊಬೈಲ್ ಉತ್ಪಾದನೆಯಲ್ಲಿ ಭಾರತವು ಇದೀಗ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದು ಜಪಾನ್ ಗೆ ಸರಿಸಾಟಿಯಾಗಿ ನಿಂತಿದೆ. ಈ ಹಿಂದೆ ಆಟಿಕೆ ಗೊಂಬೆಗಳು ಹಾಗೂ ಮೊಬೈಲ್ ಗಳು ಚೈನಾ ಉತ್ಪನ್ನಗಳಾಗಿದ್ದುವು. ಇದೀಗ ಭಾರತವು ಇವುಗಳನ್ನು ಉತ್ಪಾದನೆ ಮಾಡಿ ಮುಂಚೂಣಿಯಲ್ಲಿ ನಿಂತಿದೆ. ಮೇಡ್ ಇನ್ ಜಪಾನ್, ಮೇಡ್ ಇನ್ ಕೊರಿಯಾ, ಮೇಡ್ ಇನ್ ಚೈನಾ ತೊಲಗಿ ಈಗ ಮೇಡ್ ಇನ್ ಇಂಡಿಯಾ ಅಥವಾ ಮೇಡ್ ಇನ್ ಭಾರತ ಆಗಿ ಬದಲಾಗಿದೆ. ಇದು ಭಾರತದ ದಿಟ್ಟ ಸಾಧನೆಯಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೈಲ್ವೆ ಲೈನ್ ಅಭಿವೃದ್ಧಿ ವಿಮಾನ ನಿಲ್ದಾಣಗಳ ಅಭಿವೃದ್ಧಿಯಿಂದ ದೇಶದಲ್ಲಿ ಮೂಲಭೂತ ಸೌಲಭ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಇದರಿಂದಾಗಿ ಕಲ್ಬುರ್ಗಿಯಲ್ಲೂ ವಿಮಾನ ನಿಲ್ದಾಣ ನಿರ್ಮಾಣಗೊಂಡು ಎರಡು ವಿಮಾನಗಳು ನಿತ್ಯ ಹಾರಾಟ ನಡೆಸುತ್ತಿದೆ.ದೇಶದಲ್ಲಿ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ದೀನದಲಿತ, ಶೋಷಿತ, ದಲಿತ ವಂಚಿತರ, ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಮೋದಿಯವರು ಕಾರ್ಯಾನುಷ್ಠಾನಗೊಳಿಸಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿ ಮಾಡಿ ಕೃಷಿಕರಿಗೆ ನೆರವಾಗಿದ್ದಾರೆ. ಇನ್ನೊಂದು ಬಾರಿ ನರೇಂದ್ರ ಮೋದಿಯವರು ಪ್ರಧಾನಿ ಆದರೆ ದೇಶದಲ್ಲಿ ಮೂರು ಕೋಟಿ ಮನೆ ನಿರ್ಮಾಣವಾಗಲಿದೆ. 70 ವರ್ಷಗಳಿಗಿಂತಲೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವರ್ಷಕ್ಕೆ ಐದು ಲಕ್ಷ ರೂಪಾಯಿ ವರೆಗೆ ಉಚಿತ ಔಷಧಿ ನೀಡಲಾಗುವುದು. ಗರೀಬ್ ಅನ್ನ ಕಲ್ಯಾಣ ಯೋಜನೆ ಹಸಿವು ಮುಕ್ತ ಯೋಜನೆಯಾಗಿದೆ. ದೇಶದ 25 ಕೋಟಿ ಜನರು ಬಡತನ ರೇಖೆಗಿಂತ ಮೇಲಿದ್ದಾರೆ. ಮೋದಿಯವರ ವಿಕಸಿತ ಭಾರತ ಸಂಕಲ್ಪ ಪೂರ್ಣಗೊಳ್ಳಲು ಈ ಬಾರಿ ಮತ್ತೆ ಮೇ 7ನೇ ತಾರೀಕಿಗೆ ಕಮಲದ ಗುರುತಿನ ಬಟನ್ ಒತ್ತಿ ಉಮೇಶ್ ಜಾಧವ್ ಅವರನ್ನು ದಿಲ್ಲಿಗೆ ಕಳುಹಿಸುವುದರ ಮೂಲಕ ಮೋದಿಯವರಿಗೆ ಶಕ್ತಿ ತುಂಬಬೇಕಾಗಿದೆ ಎಂದು ಅವರು ಮನವಿ ಮಾಡಿದರು. ಇಂದಿನ ರೋಡ್ ಶೋದಲ್ಲಿ ಬಿಜೆಪಿಯ ಮಹಾನ್ ಶಕ್ತಿ ಪ್ರದರ್ಶನವಾಗಿದ್ದು ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಸಂತೋಷ ತಂದಿದೆ. ಇದೇ ಉತ್ಸಾಹ, ಹುಮ್ಮಸ್ಸು ಮೇ 7ನೇ ತಾರೀಕು ಮತದಾನ ದಿನ ತೋರಿಸಿ ಮತ್ತೊಮ್ಮೆ ಕೇಂದ್ರದಲ್ಲಿ ಬಲಿಷ್ಠ ಸರಕಾರ ರಚನೆಗೆ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದರು. ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರಕಾರ ಹಾಗೂ 400 ಸ್ಥಾನಗಳೊಂದಿಗೆ ಬಲಿಷ್ಠ ಸರಕಾರ ರಚನೆಯಾಗಲು ಕೈ ಜೋಡಿಸಬೇಕು ಎಂದು ಹೇಳಿದರು.

ಬೃಹತ್ ರೋಡ್ ಶೋ ಪೂರ್ವಭಾವಿಯಾಗಿ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಹಿಳೆಯರು ಯುವಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ತೆರೆದ ವಾಹನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರನ್ನು ಗಣೇಶ ಮಂದಿರದಿಂದ ಸರಾಫ್ ಬಜಾರ್ ಮೂಲಕ ಸೂಪರ್ ಮಾರ್ಕೆಟ್ ವರೆಗೆ ಕರೆತಂದು ಸಾರ್ವಜನಿಕ ಸಭೆ ನಡೆಸಲಾಯಿತು. ನಡ್ದಾ ಅವರ ರೋಡ್ ಶೋ ವಾಹನಕ್ಕೆ ಭಾರೀ ಗಾತ್ರದ ಮಾಲೆಯನ್ನು ಕ್ರೇನ್ ಮೂಲಕ ಹಾಕಿ ಭವ್ಯ ಸ್ವಾಗತ ಕೋರಲಾಯಿತು.

ರೋಡ್ ಶೋ ಕ್ರಮದಲ್ಲಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್, ಕಲ್ಬುರ್ಗಿ ಲೋಕಸಭಾ ಬಿಜೆಪಿ ಚುನಾವಣಾ ಉಸ್ತುವಾರಿ ರಘುನಾಥ ಮಲ್ಕಾಪುರೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಂದು ಪಾಟೀಲ್ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಶಶಿಲ್ ಜಿ ನಮೋಶಿ, ನಿತಿನ್ ಗುತ್ತೇದಾರ್ ಮತ್ತಿತರ ಅನೇಕರ ನಾಯಕರು ಭಾಗವಹಿಸಿದ್ದರು.