ಚಿತ್ರದುರ್ಗ ಲೋಕಸಭೆಗೆ ಶೇ.72.74 ರಷ್ಟು ಮತದಾನ

| Published : Apr 27 2024, 01:02 AM IST

ಚಿತ್ರದುರ್ಗ ಲೋಕಸಭೆಗೆ ಶೇ.72.74 ರಷ್ಟು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಸೇರಿದಂತೆ ಒಂದೆರೆಡುಕಡೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರಾದರೂ ಮಧ್ಯಾಹ್ನದ ವೇಳೆಗೆ ಮನವೊಲಿಸಿ ಮತದಾನಕ್ಕೆ ಕರೆದೊಯ್ಯಲಾಯಿತು. ಚಿತ್ರದುರ್ಗ ಕ್ಷೇತ್ರದಲ್ಲಿ ಒಟ್ಟಾರೆ ಶೇ.72.74 ರಷ್ಟು ಮತದಾನವಾಗಿದೆ.

ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಶುಕ್ರವಾರ ನಡೆದ ಮತದಾನ ಕೆಲ ಸಣ್ಣ ಪುಟ್ಟ ಘಟನೆ ಹೊರತು ಪಡಿಸಿ ಬಹುತೇಕ ಶಾಂತಿಯುತವಾಗಿತ್ತು. ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಸೇರಿದಂತೆ ಒಂದೆರೆಡುಕಡೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರಾದರೂ ಮಧ್ಯಾಹ್ನದ ವೇಳೆಗೆ ಮನವೊಲಿಸಿ ಮತದಾನಕ್ಕೆ ಕರೆದೊಯ್ಯಲಾಯಿತು. ಚಿತ್ರದುರ್ಗ ಕ್ಷೇತ್ರದಲ್ಲಿ ಒಟ್ಟಾರೆ ಶೇ.72.74 ರಷ್ಟು ಮತದಾನವಾಗಿದೆ. ಮೊಳಕಾಲ್ಮುರು ಕ್ಷೇತ್ರದಲ್ಲಿಅತಿ ಹೆಚ್ಚಿನ ಮತದಾನ ದಾಖಲಾಗಿದೆ. 2019 ರ ಚುನಾವಣೆಯಲ್ಲಿ ಶೇ.70.8ರಷ್ಟು ಮತದಾನವಾಗಿತ್ತು.

ಚಳ್ಳಕೆರೆ-72.19, ಚಿತ್ರದುರ್ಗ ಶೇ.70.42, ಹಿರಿಯೂರು ಶೇ.71.49, ಹೊಳಲ್ಕೆರೆ ಶೇ.73.49, ಹೊಸದುರ್ಗ 73.97, ಮೊಳಕಾಲ್ಮುರು 75.71, ಪಾವಗಡ 68.76 ಹಾಗೂ ಸಿರಾದಲ್ಲಿ ಶೇ.75.70ರಷ್ಟು ಮತದಾನವಾಗಿದೆ.ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಸುಗಮವಾಗಿ ಆರಂಭವಾಗುತ್ತಿದ್ದಂತೆ, ಮಹಿಳೆಯರು, ಪುರುಷರು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಇದೇ ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ಉತ್ಸಾಹದಿಂದ ಬೆಳಗಿನ ತಂಪಾದ ವಾತಾವರಣದಲ್ಲಿ ಮತಗಟ್ಟೆಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು.

ಮತಗಟ್ಟೆಯಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿದ್ದು, ಶಾಮಿಯಾನ, ಕುಡಿವ ನೀರಿನ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ವ್ಹೀಲ್ ಚೇರ್ ಹಾಗೂ ರ್‍ಯಾಂಪ್ ಸೌಲಭ್ಯ ಕಲ್ಪಿಸಲಾಗಿತ್ತು. ಮತಗಟ್ಟೆ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಬೆಳಗ್ಗೆ 9ಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರಾಸರಿ ಮತದಾನ ಶೇ.7.33 ಮತದಾನವಾಗಿತ್ತು. ಬೆಳಗ್ಗೆ 11ರವರೆಗೆ ಬಿರುಸಿನ ಮತದಾನ ದಾಖಲಾಯಿತು. ಲೋಕಸಭಾ ಕ್ಷೇತ್ರದ ಸರಾಸರಿ ಮತದಾನ ಶೇ.21.75ಕ್ಕೆ ಏರಿಕೆಯಾಯಿತು. ಚಳ್ಳಕೆರೆ ಶೇ.22.55, ಚಿತ್ರದುರ್ಗ ಶೇ.23.73, ಹಿರಿಯೂರು ಶೇ.20.79, ಹೊಳಲ್ಕೆರೆ ಶೇ.20.51, ಹೊಸದುರ್ಗ ಶೇ.17.89, ಮೊಳಕಾಲ್ಮುರು ಶೇ.26.77, ಪಾವಗಡ ಶೇ.20.51, ಶಿರಾ ಶೇ.19.90ರಷ್ಟು ಮತದಾನವಾಗಿದ್ದು, ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬಿರು ಬಿಸಿಲಿನ ನಡೆವೆಯೂ ಮತದಾರರು ಮತಗಟ್ಟೆಗೆ ಆಗಮಿಸಿ ಸಂತಸದಿಂದ ಮತ ಚಲಾಯಿಸಿದರು.ಮಧ್ಯಾಹ್ನ 3ರ ವೇಳೆಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರಾಸರಿ ಮತದಾನ ಶೇ.52.14ರಷ್ಟು ನಮೂದಾಯಿತು. ಚಳ್ಳಕೆರೆ ಶೇ.52.72, ಚಿತ್ರದುರ್ಗ ಶೇ.51.68, ಹಿರಿಯೂರು ಶೇ.50.40, ಹೊಳಲ್ಕೆರೆ ಶೇ.53.34, ಹೊಸದುರ್ಗ ಶೇ.51.31, ಮೊಳಕಾಲ್ಮುರು ಶೇ.56.66, ಪಾವಗಡ ಶೇ.48.13, ಶಿರಾ ಶೇ.51.99 ಮತದಾನವಾಯಿತು.

ಸಂಜೆ 5ರ ನಂತರ ಮತದಾರರು ಮತ್ತಷ್ಟು ಉತ್ಸಾಹ ತೋರಿದರು. ಈ ವೇಳೆಗೆ ಸರಾಸರಿ ಶೇ.67ರಷ್ಟು ಮತದಾನ ದಾಖಲಾಯಿತು.

ಬಿಸಿಲಾಘಾತದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆವತಿಯಿಂದ ಮತಗಟ್ಟೆಗಳಲ್ಲಿ ಅಗತ್ಯ ಔಷಧಗಳೊಂದಿಗೆ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು. ಹಿರಿಯ ನಾಗರಿಕರಿಗೆ ಸರತಿ ಸಾಲಿನಿಂದ ವಿನಾಯಿತಿ ನೀಡಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ಪುಟ್ಟ ಮಕ್ಕಳೊಂದಿಗೆ ಮತಗಟ್ಟೆಗೆ ಆಗಮಿಸಿದ ತಾಯಂದಿರಿಗಾಗಿ ಹಾಲುಣಿಸಲು ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು.

ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸಿ ಯುವ ಜನರು ಸಂಭ್ರಮಪಟ್ಟರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕುರುಡಿಹಳ್ಳಿ ಗ್ರಾಮದ ಅನುಷಾ.ಹೆಚ್ ಮೊದಲ ಬಾರಿಗೆ ಮತ ಚಲಾಯಿಸಲು ಮತಗಟ್ಟೆ ಆಗಮಿಸಿದ್ದಳು. ಚಳ್ಳಕೆರಯ ಹೆಚ್.ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಅನುಷಾ ಅಂಚೆ ಮೂಲಕ ತಲುಪಿದ ಮತದಾರ ಗುರುತಿನ ಚೀಟಿಯನ್ನ ಮತಗಟ್ಟೆ ಎದುರೇ ತೆರದು ಸಂಭ್ರಮಿಸಿದಳು. ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆಂಬ ಖುಷಿ ಇದೆ. ಮತದಾನ ಮಾಡಲು ನಮ್ಮ ಕಾಲೇಜಿನಲ್ಲಿ ತಿಳಿ ಹೇಳಿದ್ದಾರೆ. ದೇಶದ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ತನ್ನ ಅಭಿಪ್ರಾಯ ವ್ಯಕ್ತ ಪಡಿಸಿದಳು.

ಚಳ್ಳಕೆರೆ ನಗರದ ಗಾಂಧಿನಗರ ನಿವಾಸಿಯಾದ ಮಹಾಲಕ್ಷ್ಮೀ ಸರ್ಕಾರಿ ಪಿಯು ಕಾಲೇಜಿನಲ್ಲಿ ಮತ ಚಲಾಯಿಸಿ ಮತದಾನದ ಪ್ರಕ್ರಿಯೆಯ ಬಗ್ಗೆ ತುಂಬಾ ಕುತೂಹಲವಿದೆ. ದೇಶದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಸದೃಢಗೊಳಿಸಲು, ನ್ಯಾಯ ಸಮ್ಮತವಾಗಿ ಯಾವುದೇ ರೀತಿಯ ಭಯ-ಭೀತಿ ಇಲ್ಲದೇ ದೇಶದ ಹಿತಕ್ಕಾಗಿ ನನ್ನ ಹಕ್ಕು ಚಲಾಯಿಸಿದ್ದೇನೆ. ಮುಂದೆಯೂ ಪ್ರತಿ ಚುನಾವಣೆಯಲ್ಲೂ ತಪ್ಪದೇ ಮತ ಚಲಾಯಿಸುವುದಾಗಿ ತಿಳಿಸಿದರು.