ಕೊಲ್ಹಾರ: ಮದ್ಯದಂಗಡಿ ಪ್ರಾರಂಭಕ್ಕೆ ವಿರೋಧ

| Published : Apr 27 2024, 01:25 AM IST / Updated: Apr 27 2024, 09:17 AM IST

ಸಾರಾಂಶ

ತಾಲೂಕಿನ ಮಟ್ಟಿಹಾಳ ಕ್ರಾಸ್ ಬಳಿ ಹಣಮಾಪುರ ರಸ್ತೆಯಲ್ಲಿ ಮದ್ಯದಂಗಡಿ ಪ್ರಾರಂಭಿಸುತ್ತಿದ್ದು, ಇದಕ್ಕೆ ತಹಸೀಲ್ದಾರ್ ಹಾಗೂ ಗ್ರಾಮ ಪಂಚಾಯಿತಿ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಕೊಲ್ಹಾರ: ತಾಲೂಕಿನ ಮಟ್ಟಿಹಾಳ ಕ್ರಾಸ್ ಬಳಿ ಹಣಮಾಪುರ ರಸ್ತೆಯಲ್ಲಿ ಮದ್ಯದಂಗಡಿ ಪ್ರಾರಂಭಿಸುತ್ತಿದ್ದು, ಇದಕ್ಕೆ ತಹಸೀಲ್ದಾರ್‌ ಹಾಗೂ ಗ್ರಾಮ ಪಂಚಾಯಿತಿ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರರ ಒಕ್ಕೂಟ ಹಾಗೂ ಮಟ್ಟಿಹಾಳ ಗ್ರಾಮದ ಮಹಿಳೆಯರು ಹಣಮಾಪುರ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರರ ಒಕ್ಕೂಟದ ತಾಲೂಕಾಧ್ಯಕ್ಷ ಸೋಮು ಬಿರಾದಾರ ನೇತೃತ್ವದಲ್ಲಿ ಮಹಿಳೆಯರು ಹಣಮಾಪುರ ಗ್ರಾಪಂಗೆ ಆಗಮಿಸಿ ಅನುಮತಿ ನೀಡಿದ ಗ್ರಾಪಂ ಪಿಡಿಒ ಈರಣ್ಣ ಬಡಿಗೇರ ಅವರನ್ನು ತರಾಟೆಗೆ ತೆಗೆದುಕೊಂಡರು. ನಿತ್ಯ ದುಡಿಮೆ ಮಾಡಿ ಬರುವ ನಮ್ಮನ್ನು ಗಂಡಂದಿರು ಕುಡಿದು ಬಂದು ಹಿಂಸೆ ಕೊಡುತ್ತಾರೆ. ಇದರಿಂದ ಸಂಸಾರಗಳು ಹಾಳಾಗುತ್ತವೆ. ಕೂಡಲೇ ಮದ್ಯದಂಗಡಿ ಪ್ರಾರಂಭಿಸುವುದನ್ನು ಬಂದ್ ಮಾಡಬೇಕೆಂದು ಮಹಿಳೆಯರು ಆಗ್ರಹಿಸಿದರು.

ನಂತರ ಪಿಡಿಒ ಈರಣ್ಣ ಬಡಿಗೇರ ಮಾತನಾಡಿ, ಗ್ರಾಪಂಯಿಂದ ಅಲ್ಲಿ ಮದ್ಯದಂಗಡಿ ಪ್ರಾರಂಭಿಸಲು ನಾವು ಯಾವುದೇ ಅನುಮತಿ ನೀಡಿಲ್ಲ. ಅದು ಬೇರೆ ಕಡೆಯಿರುವ ಮದ್ಯದಂಗಡಿ ವರ್ಗಾವಣೆ ಮೂಲಕ ಇಲ್ಲಿಗೆ ತರಲು ಇಚ್ಚಿಸಿದ್ದಾರೆ. ಅದಕ್ಕಾಗಿ ಕೊಡುವವರ ಹಾಗೂ ರೈತನ ನಡುವೆ ಒಪ್ಪಂದವಾಗಿದೆ ಎಂದರು. ಆಗ ರೈತ ಸಂಘದ ತಾಲೂಕಾಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಮಟ್ಟಿಹಾಳ ಕ್ರಾಸ್ ಹಣಮಾಪುರ ರಸ್ತೆಯ ಪಕ್ಕದಲ್ಲಿ ಮನೋಜ ತೊರಗಲ್ ಎಂಬುವರು ಸೋಮಪ್ಪ ವಾಲಿಕಾರ ಇವರ ಜಮೀನ ಕ.ಸ.ನಂ-71/1 ರಲ್ಲಿ ಮದ್ಯದಂಗಡಿ ತೆರೆಯಲು ಪರವಾನಿಗೆ ತೆಗೆದುಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮದ್ಯದಂಗಡಿ ಪ್ರಾರಂಭಕ್ಕೆ ಅನುಮತಿ ನೀಡಬಾರದು. ನೀಡಿದರೆ ರೈತ ಸಂಘದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ತಹಸೀಲ್ದಾರ್‌ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಶ್ರೀಕಾಂತ ಗಣಿ, ರೈತ ಸಂಘದ ಮುಖಂಡರು, ಮಟ್ಟಿಹಾಳ ಗ್ರಾಮದ ಮಹಿಳೆಯರು ಹಾಗೂ ಸಾರ್ವಜನಿಕರು ಇದ್ದರು.