ಹಿಂದುಳಿದ ವರ್ಗದ ದಿಕ್ಕುತಪ್ಪಿಸುತ್ತಿರುವ ಮೋದಿ: ಸಿ.ಎಸ್.ದ್ವಾರಕನಾಥ್

| Published : Apr 28 2024, 01:25 AM IST

ಸಾರಾಂಶ

ಈಗ ಹಿಂದುಳಿದ ವರ್ಗಗಳ ಎಲ್ಲಾ ಆಯೋಗಗಳು ಕೂಡ ಮುಸ್ಲಿಮರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದೇ ಹೇಳಿವೆ. ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ ಅವರು ಹಿಂದುಳಿದವರು ಅಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಸಿ.ಎಸ್.ದ್ವಾರಕನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಧಾನಿ ಮೋದಿಯವರು ಹಿಂದುಳಿದ ವರ್ಗಗಳ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ. ಇದು ಅವರ ಹುದ್ದೆಗೆ ಶೋಭೆ ತರುವಂತಹುದಲ್ಲ ಅವರು ಹಿಂದುಳಿದ ವರ್ಗಗಳ ಕ್ಷಮೆ ಕೇಳಬೇಕು ಎಂದು ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಮಧ್ಯ ಪ್ರದೇಶದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಮೀಸಲಾತಿ ಕಸಿದುಕೊಂಡು ಮುಸ್ಲಿಂರಿಗೆ ಹಂಚಿದೆ ಎಂಬ ಸುಳ್ಳನ್ನು ಹೇಳಿದ್ದಾರೆ. ಇದು ಅವರ ಹುದ್ದೆಗೆ ತಕ್ಕುದಲ್ಲ. ವ್ಯಕ್ತಿಯಾಗಿ ಹೇಳಿದರೆ ತೊಂದರೆಯಿಲ್ಲ. ಆದರೆ, ಪ್ರಧಾನಿಯಾಗಿ ಇಂತಹ ಅಪ್ಪಟ ಸುಳ್ಳನ್ನು ಹೇಳಬಾರದು ಎಂದು ಕಿಡಿಕಾರಿದರು.

ಕರ್ನಾಟಕದ ಹಿಂದುಳಿದ ಆಯೋಗಕ್ಕೆ ನೋಟಿಸ್ ನೀಡಿರುವುದು ಕೂಡ ಸರಿಯಲ್ಲ. ಅದರಲ್ಲೂ ರಾಷ್ಟ್ರೀಯ ಹಿಂದುಳಿದ ವರ್ಗದ ಅಧ್ಯಕ್ಷ ಹಂಸರಾಜ್ ಕೂಡ ಇದೇ ಮಾತನಾಡುತ್ತಾರೆ. ಆದರೆ, ಇವರಿಗೆ ಸರಿಯಾದ ಮಾಹಿತಿಯೂ ಇಲ್ಲ. ಹೋಗಲಿ ಕರ್ನಾಟಕದವರಿಂದ ಮಾಹಿತಿಯನ್ನಾದರೂ ಕೇಳಬಹುದಿತ್ತು ಮತ್ತು ಹಿಂದುಳಿದ ವರ್ಗಗಳ ರಾಜ್ಯ ಸಮಿತಿಗೆ ತನ್ನದೇ ಆದ ಸ್ಥಾನವಿದೆ ಎಂದರು.

ಈಗ ಹಿಂದುಳಿದ ವರ್ಗಗಳ ಎಲ್ಲಾ ಆಯೋಗಗಳು ಕೂಡ ಮುಸ್ಲಿಮರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದೇ ಹೇಳಿವೆ. ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ ಅವರು ಹಿಂದುಳಿದವರು ಅಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಅಂಬೇಡ್ಕರ್ ಕೂಡ ಅದನ್ನೇ ಹೇಳಿದ್ದಾರೆ. ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರು ಎಲ್ಲರು ಹಿಂದುಳಿದ ವರ್ಗಕ್ಕೆ ಸೇರುತ್ತಾರೆ ಎಂದು ಧರ್ಮಾಧಾರಿತವಲ್ಲ, ಪ್ರಧಾನಿಯವರಿಗೆ ಈ ಅರಿವು ಇರಬೇಕಿತ್ತು. ಆದರೆ ಅವರು ಹಿಂದುಳಿದ ವರ್ಗ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂರಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು ಒಕ್ಕಲಿಗರಿಗೆ ಮತ್ತು ಇತರರಿಗೆ ನೀಡಿದ್ದು, ಇದನ್ನು ಒಕ್ಕಲಿಗರು ಮತ್ತು ಇತರರೇ ವಿರೋಧಿಸಿದ್ದರು. ಯಾವ ಕುಲಶಾಸ್ತ್ರಿಯ ಅಧ್ಯಯನವನ್ನು ಮಾಡದೇ ಹೀಗೆ ಒಬ್ಬರಿಗೆ ಕೊಟ್ಟ ಮೀಸಲಾತಿ ಕಿತ್ತುಕೊಂಡು ಬೇರೆಯವರಿಗೆ ಕೊಡುವುದು ಸರಿಯಲ್ಲ ಎಂದರು.

ರಾಷ್ಟ್ರದ ಹಿಂದುಳಿದ ವರ್ಗಗಳೆಲ್ಲವು ಬಿಜೆಪಿ ವಿರುದ್ಧವೇ ಇರುತ್ತವೆ ಎಂಬ ಆತಂಕ ಪ್ರಧಾನಿಯವರನ್ನು ಕಾಡುತ್ತಿದೆ. ಹಾಗಾಗಿ ಅವರು ರಾಜ್ಯದ ಹಿಂದುಳಿದ ವರ್ಗಕ್ಕೆ ನೋಟಿಸ್ ಕೊಡುವುದರ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶೇ. 73 ರಷ್ಟು ಹಿಂದುಳಿದ ವರ್ಗಗಳಿದ್ದು, ಆ ವರ್ಗಗಳೆಲ್ಲವೂ ರಾಜ್ಯ ಸರ್ಕಾರದ ಗ್ಯಾರಂಟಿ ಪಡೆಯುತ್ತಿವೆ ಎಂಬ ಹೆದರಿಕೆಯೂ ಮೋದಿಯವರಿಗಿದೆ ಎಂದು ಟೀಕಿಸಿದರು.

ಹಿಂದುಳಿದ ವರ್ಗದವರು ಈಗ ಜಾಗೃತರಾಗಬೇಕಾಗಿದೆ. ಬಿಜೆಪಿಯನ್ನು ದೂರ ಮಾಡಬೇಕಾಗಿದೆ. ಶಿವಮೊಗ್ಗದಲ್ಲಿ ಗೀತಾ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಮೇಶ್ ಹೆಗಡೆ, ಎಸ್.ಪಿ.ಶೇಷಾದ್ರಿ, ಜಿ.ಡಿ.ಮಂಜುನಾಥ್, ಮೋಹನ್, ರಂಗನಾಥ್, ನಾಗರಾಜ್ ಕಂಕಾರಿ, ಯು. ಶಿವಾನಂದ್, ಮಂಜುನಾಥ ಬಾಬು, ಪದ್ಮಾ ಸೇರಿದಂತೆ ಹಲವರಿದ್ದರು.