ಸ್ವಚ್ಛತೆ ಕಾಪಾಡಿ, ಮಲೇರಿಯಾದಿಂದ ದೂರವಿರಿ: ಡಿಸಿ ಗಂಗೂಬಾಯಿ

| Published : Apr 27 2024, 01:26 AM IST / Updated: Apr 27 2024, 09:06 AM IST

ಸ್ವಚ್ಛತೆ ಕಾಪಾಡಿ, ಮಲೇರಿಯಾದಿಂದ ದೂರವಿರಿ: ಡಿಸಿ ಗಂಗೂಬಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ 2030ರ ವೇಳೆಗೆ ಮಲೇರಿಯಾ ಮುಕ್ತ ದೇಶ ಎಂಬ ಧ್ಯೇಯವಾಕ್ಯದೊಂದಿಗೆ ಮಲೇರಿಯಾ ನಿರ್ಮೂಲನೆ ಮಾಡಲು ಎಲ್ಲರೂ ಕಾರ್ಯಬದ್ಧರಾಗೋಣ.

ಕಾರವಾರ: ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಮಲೇರಿಯಾ ರೋಗದಿಂದ ದೂರವಿರಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ವಿಶ್ವ ಮಲೇರಿಯಾ ದಿನದ ಪ್ರಯುಕ್ತ ಹೆಚ್ಚು ಸಮಾನತೆಯ ಜಗತ್ತಿನ ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷವಾಕ್ಯದ ಜಾಥಾಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿ, ಮಲೇರಿಯಾ ರೋಗದ ಜಾಗೃತಿ ಎಲ್ಲ ಸಾರ್ವಜನಿಕರಲ್ಲಿ ಹಾಗೂ ವಿಶೇಷವಾಗಿ ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಲೇರಿಯಾ ರೋಗ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ 2030ರ ವೇಳೆಗೆ ಮಲೇರಿಯಾ ಮುಕ್ತ ದೇಶ ಎಂಬ ಧ್ಯೇಯವಾಕ್ಯದೊಂದಿಗೆ ಮಲೇರಿಯಾ ನಿರ್ಮೂಲನೆ ಮಾಡಲು ಎಲ್ಲರೂ ಕಾರ್ಯಬದ್ಧರಾಗೋಣ ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕ್ಯಾ. ರಮೇಶ ರಾವ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿವರ್ಷ ಒಂದೊಂದು ಘೋಷವಾಕ್ಯದೊಂದಿಗೆ ಏ. 25ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ ಹೆಚ್ಚು ಸಮಾನತೆಯ ಜಗತ್ತಿನ ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷವಾಕ್ಯದೊಂದಿಗೆ ಮಲೇರಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಾಥಾವು ಡಾ. ಪಿಕಳೆ ರಸ್ತೆ, ಸುಭಾಸ್ ಸರ್ಕಲ್, ಸವಿತಾ ಹೋಟೆಲ್ ಮಾರ್ಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಮುಕ್ತಾಯವಾಯಿತು.

ಜಿಪಂ ಅಭಿವೃದ್ಧಿ ಶಾಖೆಯ ಉಪಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಆರ್‌ಸಿಎಚ್ ಅಧಿಕಾರಿ ಡಾ. ಕೆ. ನಟರಾಜ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಂಕರ ರಾವ್, ತಾಲೂಕು ವೈದ್ಯಾಧಿಕಾರಿ ಡಾ. ಸೂರಜಾ ನಾಯಕ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಕನ್ನಕನವರ, ನರ್ಸಿಂಗ್ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.