ಗ್ಯಾರಂಟಿ ಯೋಜನೆಯಿಂದ ಮದ್ಯದ ದರ ಹೆಚ್ಚಳ

| Published : Apr 28 2024, 01:22 AM IST

ಸಾರಾಂಶ

ಮದ್ಯಪ್ರಿಯ ಅಣ್ತಮ್ಮಂದಿರು ಕುಡಿಯೋದು ಬಿಟ್ಟು ಸರ್ಕಾರಕ್ಕೆ ಹಿಡಿ‌ಶಾಪ ಹಾಕುತ್ತಿದ್ದಾರೆ.

ಗದಗ: ಕಾಂಗ್ರೆಸ್‌ ಸರ್ಕಾರ ಮಾತೆತ್ತಿದರೆ ಗ್ಯಾರಂಟಿ ಎನ್ನುತ್ತಿದೆ. ಇವರ ಗ್ಯಾರಂಟಿಗೆ ಮದ್ಯದ ದರ ಹೆಚ್ಚಿಸಿದ್ದರಿಂದ ಮದ್ಯ ಸೇವನೆ ಮಾಡಲು ಜನರು ಪರದಾಡುವಂತಾಗಿದೆ ಎಂದು ಮಾಜಿ ಸಚಿವ, ಜೆಡಿಎಸ್ ಹಿರಿಯ ಮುಖಂಡ ಅಲ್ಕೋಡ್‌ ಹನಮಂತಪ್ಪ ಲೇವಡಿ ಮಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ₹100 ಇದ್ದ ಮದ್ಯದ ದರ ₹ 250 ಆಗಿದೆ, ಮದ್ಯಪ್ರಿಯ ಅಣ್ತಮ್ಮಂದಿರು ಕುಡಿಯೋದು ಬಿಟ್ಟು ಸರ್ಕಾರಕ್ಕೆ ಹಿಡಿ‌ಶಾಪ ಹಾಕುತ್ತಿದ್ದಾರೆ. ಯಾಕೆ ಬೇಕು ಇಂಥ ಕೆಟ್ಟ ಸರ್ಕಾರ ಎನ್ನುತ್ತಿದ್ದಾರೆ.

ಗ್ಯಾರಂಟಿ ಯೋಜನೆ ಜಾರಿ ಮಾಡಿ ಬಡವರ ಕುಟುಂಬದಲ್ಲಿ ನೆಮ್ಮದಿ ಹಾಳು ಮಾಡಿದ್ದಾರೆ, ₹ 2 ಸಾವಿರದಲ್ಲಿ ನಿನಗೊಂದು ಸಾವಿರ ನನಗೊಂದು ಸಾವಿರ ಅಂತ ಗಂಡ-ಹೆಂಡತಿ ಜಗಳ ಆಡುತ್ತಿದ್ದಾರೆ. ಇಂಥ ಪರಿಸ್ಥಿತಿ ಕರ್ನಾಟಕದಲ್ಲಿ ಕಾಂಗ್ರೆಸ್ ತಂದಿಟ್ಟಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಣ್ಣ ಕುರುಡಗಿ, ಅನಿಲ ಅಬ್ಬಿಗೇರಿ, ಬಸವರಾಜ ಅಪ್ಪಣ್ಣವರ, ಎಂ.ಎಸ್.ಕರಿಗೌಡ್ರ, ಅಶೋಕ ಸಂಕಣ್ಣವರ, ಮುಧೋಳ, ಈರಣ್ಣ ಬಾಳಿಕಾಯಿ, ಎಂ.ಎಸ್. ಪರ್ವತಗೌಡ್ರ, ಮಂಜುಳಾ ಮೇಟಿ ಮುಂತಾದವರು ಹಾಜರಿದ್ದರು.

ಗ್ಯಾರಂಟಿ ಯೋಜನೆಯಿಂದ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಕೈ ಕಾಲು ಮುರಿದುಕೊಂಡಿದ್ದಾರೆ. ನೀವು ಯೋಜನೆ ಜಾರಿ ಮಾಡಿ, ಆದರೆ ಹೆಚ್ಚಿನ ಹೊಸ ಬಸ್ ಕೊಡಿ, ಗಂಡು ಮಕ್ಕಳು ಹಣ ಕೊಟ್ಟರೂ ಬಸ್ ನಲ್ಲಿ ಸಂಚರಿಸಲು ಸಾಧ್ಯವಿಲ್ಲದಂತ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ‌ ಎಂದು ಅಲ್ಕೋಡ ಆಕ್ರೋಶ ವ್ಯಕ್ತ ಪಡಿಸಿದರು.

ದಲಿತ ಸಂಘಟನೆಗಳು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿ, ಕಾಂಗ್ರೆಸ್ ದಲಿತರನ್ನು ಇದುವರೆಗೂ ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಆದರೆ ಯಾರಾದರೂ ಒಬ್ಬ ದಲಿತ ನಾಯಕನನ್ನು ಅವರು ಬೆಳೆಸಿದ್ದಾರಾ ಅಥವಾ ಬೆಳೆಯಲು ಬಿಟ್ಟಿದ್ದಾರಾ? ಎಂದು ಅಲ್ಕೋಡ ಹನಮಂತಪ್ಪ ಪ್ರಶ್ನಿಸಿದರು.