ಜೆಡಿಎಸ್‌ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

| Published : Apr 28 2024, 01:22 AM IST / Updated: Apr 28 2024, 01:31 PM IST

ಸಾರಾಂಶ

ಒಂದೆರೆಡು ದಿನಗಳಲ್ಲಿ ಪೊಲೀಸರ ಕ್ರಮ ಗಮನಿಸಿ ಸೋಮವಾರದಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೃಷ್ಣಾರೆಡ್ಡಿ ಭೇಟಿ ಮಾಡಲಿದ್ದಾರೆ. ನ್ಯಾಯ ದೊರೆಯದಿದ್ದಲ್ಲಿ ಸೋಮವಾರ ಕೆಂಚರ‍್ಲಹಳ್ಳಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ

 ಚಿಂತಾಮಣಿ :  ರಾಜಕೀಯ ವೈಷಮ್ಯದ ಹಿನ್ನಲೆಯಲ್ಲಿ ಗುಂಪೊಂದು ಜೆಡಿಎಸ್ ಕಾರ್ಯಕರ್ತನ ಮೇಲೆ ಮಾರಾಕಾಯುಧಗಳಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕನಿಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಘಟನೆಯ ಬಗ್ಗೆ ಗಾಯಾಳು ಗೋವರ್ಧನ್ ಮಾಧ್ಯಮದವರೊಂದಿಗೆ ಮಾತನಾಡಿ, ತಾನು ಗ್ರಾಮದಲ್ಲಿ ೨೬ರಂದು ಸಂಜೆ ೪ ಸುಮಾರಿಗೆ ವಾಲಿಬಾಲ್ ಆಟವಾಡುತ್ತಿದ್ದಾಗ ಬಂದ ನರೇಂದ್ರ, ಗಣೇಶಪ್ಪ, ಸೀನಾ, ಮಂಜುನಾಥ್, ಮಣಿ, ಬಾಲಾಜಿ, ಅನಿಲ್, ಅಶೋಕ್ ಮತ್ತಿತರರು ನನ್ನನ್ನು ಕರೆದು ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಮತ ಚಲಾಯಿಸುತ್ತೇನೆಂದು ಹೇಳಲು ನಿನಗೆಷ್ಟು ಧೈರ್ಯವೆಂದು ಪ್ರಶ್ನಿಸಿ ಬೆದರಿಕೆ ಹಾಕಿದಲ್ಲದೆ ದೊಣ್ಣೆ ಮಚ್ಚು ಮತ್ತಿತರ ಮಾರಾಕಾಯುಧಗಳಿಂದ ಹಲ್ಲೆ ನಡೆಸಿದ್ದಾಗಿ ಆರೋಪಿಸಿದರು.

ಗಾಯಾಳುವನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಜೆಡಿಎಸ್‌ ಕಾರ್ಯಕರ್ತ ಗೋವರ್ಧನ್‌ ಅವರ ಮೇಲೆ ಗುಂಪೊಂದು ಮಾರಾಣಾಂತಿಕ ಹಲ್ಲೆ ನಡೆಸಿದೆ. ಘಟನೆ ಬಗ್ಗೆ ಡಿವೈಎಸ್‌ಪಿ ಮುರಳೀಧರ್‌ರೊಂದಿಗೆ ಮಾತುಕತೆ ನಡೆಸಿ ತಮ್ಮ ಬಳಿ ಲಭ್ಯವಿರುವ ದೃಶ್ಯಾವಳಿ ಹಾಗೂ ಪೋಟೋಗಳನ್ನು ಅವರಿಗೆ ಕಳುಹಿಸಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆಂದರು.

ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ

ಒಂದೆರೆಡು ದಿನಗಳಲ್ಲಿ ಪೊಲೀಸರ ಕಾರ್ಯವೈಖರಿಯನ್ನು ಗಮನಿಸಿ ಸೋಮವಾರದಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ನ್ಯಾಯ ದೊರೆಯದಿದ್ದಲ್ಲಿ ಸೋಮವಾರ ಮಧ್ಯಾಹ್ನ ೩ ಗಂಟೆಗೆ ಚಿಂತಾಮಣಿ ತಾಲ್ಲೂಕಿನ ಕೆಂಚರ‍್ಲಹಳ್ಳಿ ಪೊಲೀಸ್ ಠಾಣೆ ಎದುರು ಸಂಸದ ಮುನಿಸ್ವಾಮಿ, ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು, ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ಹಾಗೂ ಮುಖಂಡರು, ಕಾರ್ಯಕರ್ತರು ರೊಡಗೂಡಿ ಬೃಹತ್ ಪ್ರತಿಭಟನೆಯನ್ನು ನಡೆಸುವುದಾಗಿ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು.

ಈ ಬಗ್ಗೆ ಕೆಂಚರ‍್ಲಹಳ್ಳಿ ಪೊಲೀಸರು ಪರ ಹಾಗೂ ವಿರುದ್ಧ ಎರಡು ಪ್ರಕರಣಗಳು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿರುವುದಾಗಿ ವರದಿಯಾಗಿದೆ.