30 ರಂದು ಸಂತ ಸೆಬಾಸ್ಟೀನ್‌ ದೇವಾಲಯ ಲೋಕಾರ್ಪಣೆ

| Published : Apr 28 2024, 01:19 AM IST

ಸಾರಾಂಶ

30ರಂದು ಸಂತ ಸೆಬಾಸ್ಟೀನ್‌ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ಪ್ರಾರ್ಥನ ಮಂದಿರ ಸರಿಸುಮಾರು 500 ಮಂದಿಗೆ ಸ್ಥಳಾವಕಾಶವಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶ್ರದ್ಧೆ ಭಕ್ತಿ ಸೇವಾ ಮನೋಭಾವ ಮೇಲೈಳಿಸಿದಾಗ ಸಮಾಜಮುಖಿಯಾಗಿ ಶ್ರದ್ಧಾ ಕೇಂದ್ರ ಹೇಗೆ ಹೊರಹೊಮ್ಮಬಹುದು ಎಂಬುದಕ್ಕೆ 7ನೇ ಹೊಸಕೋಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂತ ಸೆಬಾಸ್ಟೀನ್‌ ಅವರ ರೋಮನ್ ಕ್ಯಾಥೋಲಿಕ್ ದೇವಾಲಯ ಸಾಕ್ಷಿಯಾಗಿ ನಿಂತಿದೆ. ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಏ. 30 ರಂದು ಲೋಕಾರ್ಪಣೆಗೊಳ್ಳಲಿದೆ.

ಬೆಳ್ತಂಗಡಿ ಧರ್ಮಕ್ಷೇತ್ರದ ಅಧೀನದಲ್ಲಿ ಬರುವ ಸಿದ್ಧಾಪುರ ಕರಡಿಗೋಡುವಿನ ಸಂತ ಮೇರಿ ದೇವಾಲಯದ ನೇತೃತ್ವದಲ್ಲಿ ಸಂತ ಸೆಬಾಸ್ಟೀನ್ ಅವರ ರೋಮನ್ ಕ್ಯಾಥೋಲಿಕ್ ದೇವಾಲಯವು 1982 ರಲ್ಲಿ ಆರಂಭಗೊಂಡು ಕಾರ್ಯಾಚರಿಸುತ್ತಿತ್ತು.

ಈ ದೇವಾಲಯದ ಧರ್ಮಗುರುಗಳಾಗಿ ವಂ. ರೆ. ಫಾದರ್ ಸೆಬಾಸ್ಟೀನ್ ಪೂವತ್ತಿಗಲ್ ಅವರು 9 ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಿಕೊಂಡರು. ಕಾಲಕ್ರಮೇಣ ಸಮುದಾಯದ ಕುಟುಂಬಗಳ ದ್ವಿಗುಣಗೊಳ್ಳುತ್ತಿದ್ದಂತೆ ದೇವಾಲಯದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಅನಿವಾರ್ಯವಾಗಿದ್ದು, ಕಂಡುಕೊಂಡ ರೇ. ಫಾ. ಸೆಬಾಸ್ಟೀನ್ ಅವರು ತಮ್ಮ ಕನ್ಯಾಸ್ತ್ರೀ ಹಾಗೂ ಶಿಷ್ಯ ವರ್ಗದವರೊಂದಿಗೆ ಚರ್ಚಿಸಿದಾಗ ದೇವಾಲಯದ ಅಭಿವೃದ್ಧಿ ಮತ್ತು ವಿಸ್ತರಣೆ ಕುರಿತು ಒಮ್ಮತದ ತೀರ್ಮಾನಕ್ಕೆ ಬಂದ ಹಿನ್ನೆಲೆಯಲ್ಲಿ ಕರಡಿಗೋಡುವಿನ ಸಂತ ಮೇರಿ ದೇವಾಲಯದ ಮುಖ್ಯಸ್ಥರ ಮೂಲಕ ಬೆಳ್ತಂಗಡಿ ಧರ್ಮಕ್ಷೇತ್ರಕ್ಕೆ ವಿವರವಾದ ನೀಲಿನಕ್ಷೆಯನ್ನು ತಯಾರಿಸಿ ಕಳುಹಿಸಿಕೊಡಲಾಯಿತು. ಅಲ್ಲಿಂದ ಬಂದ ಆದೇಶದ ಪ್ರಕಾರ ದೇವಾಲಯದ ತಳ ಭಾಗದಲ್ಲಿ 2016 ಮೇ 22ರಲ್ಲಿ ನೂತನ ದೇವಾಲಯ ನಿರ್ಮಿಸುವ ಕಾರ್ಯಕ್ಕೆ ಆಶೀರ್ವಚನವನ್ನು ಬೆಳ್ತಂಗಡಿ ಧರ್ಮಾಕ್ಷೇತ್ರದ ಧರ್ಮಾಧ್ಯಕ್ಷರಾದ ಮಾರ್ ಲಾರೆನ್ಸ್ ಮುಕ್ಕಾಜಿ ನೀಡಿದರು.

ಅಂದಿನಿಂದ ನಿರಂತರವಾಗಿ ದೇವಾಲಯದ ಪುನರ್ ನಿರ್ಮಾಣ ಮತ್ತು ವಿಸ್ತರಣಾ ಕಾರ್ಯ ಹಗಲು ರಾತ್ರಿ ಎನ್ನದೆ ನಡೆದುಕೊಂಡು ಬಂದಿದೆ. ವಂದನೀಯ ಧರ್ಮಗುರುಗಳೊಂದಿಗೆ ಕನ್ಯಾಸ್ತ್ರೀಯರು ಹಾಗೂ ಹಣಕಾಸು ಸಮಿತಿಯೊಂದನ್ನು ರಚಿಸಿಕೊಳ್ಳಲಾಯಿತು. ಈ ಸಮಿತಿಯಲ್ಲಿ ಇ.ಬಿ.ಜೋಸೆಫ್, ಜೋಣಿಪಾಲತ್, ಜೋಯಿ ಅರಕಲ್, ವಿಲಿ ಜೇಕಬ್ ಅವರು ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ದೇವಾಲಯದ ಮುಖ್ಯ ಪ್ರಾರ್ಥನ ಮಂದಿರವು ಸರಿಸುಮಾರು 500 ಮಂದಿಗೆ ಸ್ಥಳವಕಾಶವಿದ್ದು, ಸಮುದಾಯ ಭವನವು 400 ಮಂದಿಗೆ ಸ್ಥಳಾವಕಾಶವನ್ನು ಹೊಂದಿದೆ.

ಅತ್ಯಂತ ಆಕರ್ಷಣೀಯ ವಾಸ್ತುಶಿಲ್ಪ ಕೆತ್ತನೆ ಕೆಲಸ ಮತ್ತು ಯೇಸು ತಮ್ಮ ಶಿಷ್ಯರೊಂದಿಗೆ ಕೊನೆಯ ಬೋಧನೆ ಮಾಡುತ್ತಿರುವ ದೃಶ್ಯವನ್ನು ಶಿಲ್ಪಕಲಾಕೃತಿಗಳ ಮೂಲಕ ಬಲಿ ಅರ್ಪಣ ಪೀಠದಲ್ಲಿ ನಿರ್ಮಿಸಲಾಗಿದೆ. ಇವುಗಳಿಗೆ ಆಕರ್ಷಕವಾದ ಭಕ್ತಿಪ್ರಧಾನವಾದ ಭಾವನೆಗಳನ್ನು ಹೊಮ್ಮಿಸುವ ಬಣ್ಣದ ದೀಪಗಳ ಅಲಂಕಾರ ವ್ಯವಸ್ಥೆಯನ್ನು ಧ್ವನಿ ಬೆಳಕಿನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇಡೀ ದೇವಾಲಯವನ್ನು ಚಪ್ಪಡಿ ಕಲ್ಲು ಶಿಲಾಕಲ್ಲಿನಿಂದ ಸುತ್ತಲೂ ಗೋಡೆಯನ್ನು ನಿರ್ಮಿಸಲಾಗಿದ್ದು ಎತ್ತರದ ಗೋಪುರ ಆಕೃತಿಯಲ್ಲಿ ಮೇಲ್ಚಾವಣಿಯನ್ನು ನಿರ್ಮಿಸಲಾಗಿದ್ದು ಇದರಿಂದ ಹೊರಗಿನ ವಾತವರಣ ಎಷ್ಟೇ ಬಿಸಿಯಾಗಿದ್ದರೂ, ಒಳಗೆ ಅತ್ಯಂತ ತಂಪಾಗಿ ಇರುವಂತೆ ನಿರ್ಮಿಸಲಾಗಿದೆ. ಇದರ ಹೊರ ಭಾಗದಲ್ಲಿ ಸುಮಾರು 75 ಅಡಿಗಳಷ್ಟು ಎತ್ತರವಾದ ದೇವಾಲಯ ಗೋಪುರವನ್ನು ನಿರ್ಮಿಸಲಾಗಿದೆ. ಗೋಪುರದ ಮುಂದೆ ಅಷ್ಟೇ ಆಕರ್ಷಕವಾದ ಧ್ವಜಸ್ತಂಭ ಸುಮಾರು 70 ಅಡಿಗಳಷ್ಟು ಎತ್ತರದಾಗಿದೆ. ಹಾಗೂ ಕ್ರೈಸ್ತರ ಶ್ರದ್ಧಾ ಗುರುತದ ಶಿಲುಬೆಯನ್ನು 30 ಅಡಿಗಳಷ್ಟು ಎತ್ತರದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಹೊರ ಆವರಣದಲ್ಲಿ ಯೇಸುವಿನ ಸಾಕು ತಂದೆ ಜೋಸೆಫ್ ಮತ್ತು ತಾಯಿ ಮರಿಯಮ್ಮ ಅವರ ಪೂರ್ಣ ಪ್ರಮಾಣದ ಭಾವಚಿತ್ರಗಳನ್ನು ವಿಶೇಷ ಗಾಜಿನ ಫಲಕದಲ್ಲಿ ನಿರ್ಮಿಸಲಾಗಿದೆ. ಅದರ ಮೇಲ್ಬಾಗದಲ್ಲಿ ಕ್ರೈಸ್ತ ಸಮುದಾಯದಲ್ಲಿ ಸಂತರು ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಪ್ರಧಾನ ಬಲಿಪೀಠದಲ್ಲಿ ಶಿಲ್ಪ ಕಲಾಕೃತಿಗಳ ಹಿಂಭಾಗದಲ್ಲಿ ಯೇಸು ಶಿಲುಬೆ ಪ್ರಾಣವನ್ನು ತ್ಯಾಗ ಪೀತ ತಂದೆಯೊಂದಿಗೆ ಸಮ್ಮಿಲನದ ದೃಶ್ಯವು ಅತ್ಯಂತ ಮಹತ್ವಪೂರ್ಣವಾಗಿ ಬಿಂಬಿತವಾಗಿದೆ.

ಈ ಸಂದರ್ಭ ದೇವಾಲಯದ ಪುನರ್ ನಿರ್ಮಾಣ ಮತ್ತು ವಿಸ್ತರಣಾ ಕಾರ್ಯದ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ವಂ.ರೆ.ಫಾದರ್ ಸೆಬಾಸ್ಟೀನ್ ಪೂವತ್ತಿಗಲ್, ಎಲ್ಲರಿಗೂ ತಿಳಿದಿರುವಂತೆ 7ನೇ ಹೊಸಕೋಟೆ ಪ್ರದೇಶವು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಡಿಕೇರಿ ಕುಶಾಲನಗರ ನಡುವೆ ಬರುವ ಒಂದು ಪ್ರಮುಖ ಸ್ಥಳವಾಗಿದ್ದು, ಇಲ್ಲಿ ಧಾರ್ಮಿಕ ಸಾಮಾಜಿಕ ಮತ್ತು ಭಾವೈಕ್ಯತೆಯ ಸಹಬಾಳ್ವೆ ಇದೆ ಎನ್ನುವುದಕ್ಕೆ ಚರ್ಚಿನ ಮುಂಭಾಗದಲ್ಲಿ ಶ್ರೀಮಹಾಗಣಪತಿ ಹಾಗೂ ಶ್ರೀಕೃಷ್ಣ ದೇವಸ್ಥಾನ ಚರ್ಚಿನ ಬಲಪಾರ್ಶ್ವದಲ್ಲಿ ಮಸೀದಿ ಇದ್ದು, ಯಾವುದೇ ಗೊಂದಲಗೊಜಲುಗಳು ಇಲ್ಲದೆ ಪರಸ್ಪರ ಸಹೋದರತ್ವ ಧಾರ್ಮಿಕ ಬಾವೈಕೈತೆಯಿಂದ ಬಾಳುತ್ತಿದ್ದೇವೆ. ಈಗಾಗಲೇ ಕೊಡಗು ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದ್ದು, 7ನೇ ಹೊಸಕೋಟೆಯು ನಮ್ಮ ದೇವಾಲಯದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆದು ಪ್ರವಾಸೋದ್ಯಮಕ್ಕೆ ಇನ್ನಷ್ಟು ಇಂಬುಕೊಡುವ ನಿಟ್ಟಿನಲ್ಲಿ ದೇವಾಲಯದ ಪುನರ್ ನಿರ್ಮಾಣವಾಗಿದೆ. ದೇವಾಲಯದ ತಳಭಾಗದಲ್ಲಿರುವ ಸುಸಜ್ಜಿತವಾದ ಸಮುದಾಯ ಭವನ ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಅನುದಾನದ ಮಾಹಿತಿ ನೀಡಿದ ಅವರು ದೇವಾಲಯದ ಜೀರ್ಣೋದ್ಧಾರಕ್ಕಾಗಿ 25, 000, 00 ರು. ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ 50,000,00 ರು. ಮೊತ್ತವನ್ನು ನೀಡಿದೆ. ಇದರಲ್ಲಿ 5,000,00 ರು. ಬಾಕಿ ಇದ್ದು ಶೀಘ್ರದಲ್ಲೇ ಮಂಜೂರು ಮಾಡಲಾಗುತ್ತದೆ ಎಂಬ ಮಾಹಿತಿ ತಮಗೆ ಬಂದಿದೆ ಎಂದು ರೇ.ಫಾದರ್ ಮಾಹಿತಿ ನೀಡಿದರು.

ಹಣಕಾಸು ಸಮಿತಿಯ ಸದಸ್ಯರಲ್ಲಿ ಒಬ್ಬರು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿರುವ ಇ.ಬಿ.ಜೋಸೆಫ್ ಅವರು ಪತ್ರಿಕೆಯೊಂದಿಗೆ ಮಾತನಾಡಿ, ವಂದನೀಯ ಧರ್ಮಗುರು ಸೆಬಾಸ್ಟೀನ್ ಪೂವತ್ತಿಗಲ್ ಅವರ ನಾಯಕತ್ವ ಪ್ರಾರ್ಥನೆಯ ಫಲವಾಗಿ ನಮ್ಮಲ್ಲಿ ಹುಮ್ಮಸ್ಸು ಉತ್ಸಾಹ ತುಂಬಿದ ಅವರನ್ನು ಸುತ್ತ ಮುತ್ತಲಿನ ಜನ ಫಾದರ್ ಸುನಿಲ್ ಎಂದೇ ಪ್ರಖ್ಯಾತಿ ಹೊಂದಿರುವುದು ವಿಶೇಷ ಎಂದು ಸ್ಮರಿಸಿದ ಜೋಸೆಫ್ ಅವರು 9 ವರ್ಷಗಳ ಸುದೀರ್ಘ ಶ್ರಮ ತ್ಯಾಗದ ಫಲವಾಗಿ ಈ ಭವ್ಯ ಮಂದಿರ ಸಾಕರಗೊಂಡಿದೆ. ಪ್ರತೇಕ್ಷವಾಗಿ ಪರೋಕ್ಷವಾಗಿ ಸುತ್ತ ಮುತ್ತಲಿನ ಜನರು ನಾಡಿನ ಅನೇಕ ಧರ್ಮಕ್ಷೇತ್ರಗಳು ನೀಡಿದ ತನು ಮನ ಧನ ದೇಣಿಗೆಯಿಂದ ನಮ್ಮ ಕನಸು ಸಾಕರಗೊಳ್ಳಲು ಕಾರಣವಾಗಿದೆ. ಒಟ್ಟಾರೆಯಾಗಿ ದೇವಾಲಯವು 3.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಇಂಟರ್‌ಲಾಕ್ ಅಳವಡಿಕೆ ಸೇರಿದಂತೆ ಅಂತಿಮ ಹಂತದ ಕೆಲಸಗಳು ಬಾಕಿ ಇವೆಯೆಂದು ಅವರು ಮಾಹಿತಿ ನೀಡಿದರು.

ಏ. 30 ರಂದು ಲೋಕಾರ್ಪಣೆ: ಈ ಭವ್ಯ ದೇವಾಲಯವನ್ನು ಏ.30ರಂದು ಅಪರಾಹ್ನ ನಡೆಯುವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜನೀಯ ಬಿಷಪ್ ಮಾರ್‌ಲಾರೆನ್ಸ್ ಮುಕುಜಿ ಅವರು ಆಶೀರ್ವಚನ ನೀಡುವ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕರಾದ ಡಾ.ಮಂತರ್‌ಗೌಡ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಳ್ತಂಗಡಿ ಧರ್ಮಕ್ಷೇತ್ರದ ಜೋಸೆಫ್ ವಲಿಯಪರಂಬಿಲ್, ಸಿದ್ದಾಪುರ ಸಂತ ಮೇರಿ ಚರ್ಚಿನ ವಲಯ ಧರ್ಮಗುರುಗಳಾದ ಜೋಜಿ ವಡಕ್ಕಿವೀಟಿ, ಮೈಸೂರಿನ ಸೆಂಟ್ ಪೌಲಸ್ ಪ್ರಾಂತ್ಯದ ಧರ್ಮಗುರು ಆಗಸ್ಟೀನ್ ಪಾಯಂಪಳ್ಳಿ, ತಲಚೇರಿಯ ಸಂತ ಜೋಸೆಫರ ಪ್ರಾಂತ್ಯದ ಧರ್ಮಗುರು ಡಾ. ತ್ರೇಸಾ ಪಾಲಕ್ಕಾಡ್, ಚೆರುಪುಜಾ ಪ್ರಾಂತ್ಯದ ಧರ್ಮಗುರು ಜೋಸ್ ವೆಲ್ಟಿಕಲ್, 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್ ಪಾಲ್ಗೊಳ್ಳಲಿದ್ದಾರೆಂದು ಧರ್ಮಗುರು ಸೆಬಾಸ್ಟೀನ್ ಪೂವತ್ತಿಗಲ್ ತಿಳಿಸಿದ್ದಾರೆ.