ಕುಷ್ಟಗಿ ಹಾಲಿ, ಮಾಜಿಗಳ ಮೇಲೆ ಜಾತಿ ಗುಮ್ಮ

| Published : Apr 28 2024, 01:19 AM IST

ಸಾರಾಂಶ

ಕೊಪ್ಪಳ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಲೀಡ್ ಕೊಡಿಸಲು ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಮಾಜಿ ಶಾಸಕ ಅಮರೇಗೌಡ ಭಯ್ಯಾಪುರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳಿಗಿಂತ ಹಾಲಿ ಶಾಸಕರು ಮತ್ತು ಮಾಜಿ ಶಾಸಕರಿಗೆ ದೊಡ್ಡ ಚಿಂತೆಯಾಗಿದೆ. ಅವರ ಮೇಲೆಯೇ ದೊಡ್ಡ ಹೊಣೆಗಾರಿಕೆ ಬಿದ್ದಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಲೀಡ್ ಕೊಡಿಸಬೇಕಾಗಿರುವುದು ಹಾಲಿ ಶಾಸಕರು ಅಥವಾ ಪರಾಭವಗೊಂಡಿರುವ ಅಭ್ಯರ್ಥಿಗಳು ಅಥವಾ ಮಾಜಿ ಶಾಸಕರು ಎಂದು ಹೇಳಿರುವುದರಿಂದ ವಿಧಾನಸಭಾ ಕ್ಷೇತ್ರವಾರು ಲೀಡ್ ಯಾರಿಗೆ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಇದ್ದರೆ ಕಾಂಗ್ರೆಸ್ ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ಇದ್ದಾರೆ. ಅವರಿಬ್ಬರಿಗೂ ಏನೇ ಮಾಡಿದರೂ ಜಾತಿಯ ಗುಮ್ಮ ಬಿಡುವುದೇ ಇಲ್ಲ.

ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಸಮುದಾಯದವರೇ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇನ್ನು ಅಮರೇಗೌಡ ಭಯ್ಯಾಪುರ ಅವರಿಗೆ ಈ ಆತಂಕ ಇಲ್ಲವಾದರೂ ಲಿಂಗಾಯತ ಸಮುದಾಯದವರು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ, ಇವರಿಬ್ಬರು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಿಲ್ಲ ಎನ್ನುವ ಆರೋಪ ಈಗಾಗಲೇ ಕ್ಷೇತ್ರದಾದ್ಯಂತ ಹರಿದಾಡುತ್ತಿದೆ. ಈ ಕುರಿತು ಅವರು ಸಹ ಹಲವಾರು ಬಾರಿ ಸ್ಪಷ್ಟನೆ ನೀಡಿದ್ದರೂ ಇವರನ್ನು ಕಾಡದೆ ಬಿಡುತ್ತಿಲ್ಲ ಜಾತಿಯ ಗುಮ್ಮ.

ಭಾರಿ ಹಣಾಹಣಿ: ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಭಾರಿ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಅವರು ಕುಷ್ಟಗಿಯವರೇ ಆಗಿರುವುದರಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಪ್ಲಸ್ ಜಾಸ್ತಿಯೇ ಇದೆ. ಇದನ್ನೇ ಪ್ರಮುಖ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಅಭ್ಯರ್ಥಿ ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಅದರಲ್ಲೂ ಡಾ. ಬಸವರಾಜ ಕ್ಯಾವಟರ್ ಅವರ ತಂದೆ ಕೆ. ಶರಣಪ್ಪ ಮಾಜಿ ಶಾಸಕರಾಗಿದ್ದಾರೆ. ಮೊದಲು ಜೆಡಿಎಸ್‌ನಲ್ಲಿದ್ದ ಅವರು ಈಗ ಬಿಜೆಪಿಯಲ್ಲಿದ್ದಾರೆ. ಈ ಅಂಶವೂ ಬಿಜೆಪಿ ಅಭ್ಯರ್ಥಿಗೆ ಅನುಕೂಲಕರವೇ ಆಗಿದೆ.

ಹೀಗಾಗಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ನನ್ನ ಮರ್ಯಾದೆ ಉಳಿಸಲು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಎಂದೆಲ್ಲ ಮನವಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮೋಸ ಮಾಡಬೇಡಿ ಎಂದೆಲ್ಲ ಮತಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಪರವಾಗಿ ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ಅವರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಅಮರೇಗೌಡ ಭಯ್ಯಾಪುರ ಅವರು ಇತ್ತಿಚೆಗಷ್ಟೇ ಕಾಂಗ್ರೆಸ್ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವುದರಿಂದ ಮರ್ಯಾದೆ ಪ್ರಶ್ನೆ ಎನ್ನುವಂತೆ ಆಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವುದರಿಂದ ಹೇಗಾರದೂ ಮಾಡಿ ಕುಷ್ಟಗಿ ಕ್ಷೇತ್ರದಲ್ಲಿ ಲೀಡ್ ಕೊಡಿಸಲು ಯತ್ನಿಸುತ್ತಿದ್ದಾರೆ. ಅಮರೇಗೌಡ ಭಯ್ಯಾಪುರ ಅವರು ಜಾತಿ ರಾಜಕಾರಣ ಮಾಡುತ್ತಾರೆ, ಲಿಂಗಾಯತ ಸಮುದಾಯದ ಪರವಾಗಿ ಕಾರ್ಯ ನಿರ್ವಹಿಸುತ್ತಾರೆ ಎನ್ನುವ ಆರೋಪ ಬಂದಿದ್ದರಿಂದ ರೊಚ್ಚಿಗೆದ್ದವರಂತೆ ವೇದಿಕೆಯಲ್ಲಿ ನಾನು ಮೋಸ ಮಾಡುವುದಿಲ್ಲ ಮತ್ತು ಯಾರಿಗೆ ಹುಟ್ಟಿರುತ್ತೇವೆಯೋ ಅವರ ಹೆಸರು ಹೇಳುತ್ತೇನೆಯೇ ಹೊರತು ಬೇರೆಯವರ ಹೆಸರು ಹೇಳುವುದಿಲ್ಲ. ಅಂದರೆ ನಾನು ಕಾಂಗ್ರೆಸ್‌ನಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇನೆಯೇ ಹೊರತು ಮತ್ತೊಂದು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕುಷ್ಟಗಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಬಹುದೊಡ್ಡ ಲೀಡ್ ಬಂದೇ ಬರುತ್ತದೆ. ಸ್ಥಳೀಯರೇ ಆಗಿರುವುದರಿಂದ ಬೆಂಬಲಿಸುತ್ತಾರೆ ಎನ್ನುವ ನಂಬಿಕೆ ಇದೆ. ನಾನು ಬಿಜೆಪಿಯಲ್ಲಿದ್ದು, ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳುತ್ತಾರೆ.ಯಾರೇ ಆರೋಪ ಮಾಡಲಿ, ಆದರೇ ನಾನು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವುದು ನಮ್ಮ ಕರ್ತವ್ಯವಾಗಿದೆ. ಹಾಗೊಂದು ವೇಳೆ ಬೇಡವಾಗಿದ್ದರೆ ಪಕ್ಷ ಬದಲಾಯಿಸುತ್ತೇನೆಯೇ ಹೊರತು, ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ಹೇಳುತ್ತಾರೆ.