ಜಪಾನಂದ ಸ್ವಾಮೀಜಿಯಿಂದ ಉಚಿತ ಮೇವು ವಿತರಣೆ

| Published : Apr 28 2024, 01:21 AM IST

ಸಾರಾಂಶ

ತಾಲೂಕಿನಾದ್ಯಂತ ದೇವರ ಎತ್ತುಗಳೂ ಸೇರಿದಂತೆ ಸಾವಿರಾರು ಜಾನುವಾರುಗಳಿಗೆ ಮೇವನ್ನು ನೀಡದೆ ಸರ್ಕಾರ ನಿರ್ಲಕ್ಷ್ಯವಹಿಸಿರುವುದು ಸರಿಯಲ್ಲ.

ಚಳ್ಳಕೆರೆ: ತಾಲೂಕಿನಾದ್ಯಂತ ದೇವರ ಎತ್ತುಗಳೂ ಸೇರಿದಂತೆ ಸಾವಿರಾರು ಜಾನುವಾರುಗಳಿಗೆ ಮೇವನ್ನು ನೀಡದೆ ಸರ್ಕಾರ ನಿರ್ಲಕ್ಷ್ಯವಹಿಸಿರುವುದು ಸರಿಯಲ್ಲ. ಬರಗಾಲ ಹಿನ್ನೆಲೆಯಲ್ಲಿ ಗೋಶಾಲೆಗಳಿದ್ದರೂ ಅಲ್ಲಿಯೂ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ವಿತರಣೆಯಾಗುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯದ ನಡುವೆಯೂ ಸುಧಾಮೂರ್ತಿ, ನಾರಾಯಣ ಮೂರ್ತಿ ಟ್ರಸ್ಟ್‌ವತಿಯಿಂದ ಮೇವು ವಿತರಣೆ ಮಾಡಲಾಗುತ್ತಿದೆ ಎಂದು ಪಾವಗಡದ ರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ತಿಳಿಸಿದರು.

ಅಜ್ಜಯ್ಯನಗುಡಿ ರಸ್ತೆ, ನನ್ನಿವಾಳ ಬೊಮ್ಮದೇವರ ಹಟ್ಟಿ, ರಾಯಪುರದ ದೇವರ ಎತ್ತುಗಳೂ ಸೇರಿದಂತೆ ಚಳ್ಳಕೆರೆ, ಮೊಳಕಾಲ್ಮುರು ತಾಲೂಕಿನ ಎತ್ತುಗಳಿಗೆ ಮೂರ್ತಿ ಟ್ರಸ್ಟ್‌ನಿಂದ ನೀಡಲಾದ ಮೇವನ್ನು ವಿತರಿಸಿ ಮಾತನಾಡಿದರು.

೨೦೧೮ರಿಂದ ೨೦೨೪ರ ತನಕ ಇದುವರೆಗೂ ಒಟ್ಟು ೩೭೪ ಟನ್ ಮೇವನ್ನು ೪೩ ಹಟ್ಟಿಯ ಜಾನುವಾರುಗಳಿಗೆ ನೀಡಲಾಗಿದೆ. ಇದರ ಜೊತೆಯಲ್ಲೇ ಜಾನುವಾರುಗಳನ್ನು ಜವಾಬ್ದಾರಿಯುತವಾಗಿ ಕಾಪಾಡುವ ಕಿಲಾರಿಗಳಿಗೂ ಸಹ ಅಭಿನಂದನೆ ಸಲ್ಲಿಸಲಾಗಿದೆ. ಯಾವುದೇ ಹಂತದಲ್ಲೂ ದೇವರ ಎತ್ತುಗಳು ಉಪವಾಸದಿಂದ ಇರದಂತೆ ಜಾಗ್ರತೆವಹಿಸುವಂತೆ ಕಿಲಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮೂರ್ತಿ ಟ್ರಸ್ಟ್‌ವತಿಯಿಂದ ಮುಂದಿನ ಹಲವಾರು ವರ್ಷಗಳ ಕಾಲ ಉಚಿತವಾಗಿ ಮೇವು ವಿತರಣೆ ಮಾಡುವ ಯೋಜನೆ ಇದೆ ಎಂದರು.

ಯಜಮಾನ ಚಿತ್ತಪ್ಪ, ಕಿಲಾರಿ ಕಾಟಪ್ಪ ಮಾತನಾಡಿ, ಮೂರ್ತಿ ಟ್ರಸ್ಟ್‌ವತಿಯಿಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಉಚಿತವಾಗಿ ಮೇವು ಸರಬರಾಜು ಮಾಡಲಾಗುತ್ತಿದೆ. ಪ್ರತಿ ತಿಂಗಳು ಸ್ವಾಮೀಜಿ ಉಚಿತ ಮೇವಿನ ಟ್ರ್ಯಾಕ್ಟರ್‌ಗಳೊಂದಿಗೆ ಆಗಮಿಸಿ ಕಿಲಾರಿಗಳು, ಸಾರ್ವಜನಿಕರ ಸಮಕ್ಷಮದಲ್ಲಿ ಜಾನುವಾರಿಗಳಿಗೆ ಮೇವು ವಿತರಿಸುತ್ತಾರೆ ಎಂದರು.

ಸಿ.ಪಿ.ಮಹೇಶ್, ಸಿದ್ದೇಶ್, ಕಿಲಾರಿಗಳಾದ ಓಬಣ್ಣ, ಮಂಜಣ್ಣ, ಗಾದ್ರಿಪಾಲಯ್ಯ, ಸಣ್ಣಬೋರಯ್ಯ ಮುಂತಾದವರು ಉಪಸ್ಥಿತರಿದ್ದರು.