ಎನ್‌ಡಿಎ ಅಭ್ಯರ್ಥಿಗಾಗಿ ಚುನಾವಣಾ ನಿಧಿ ಸಂಗ್ರಹ: ಆರ್.ಮೋಹನ್

| Published : Apr 28 2024, 01:25 AM IST / Updated: Apr 28 2024, 12:36 PM IST

ಸಾರಾಂಶ

ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರಿಗಾಗಿ ಚುನಾವಣಾ ನಿಧಿ ಸಂಗ್ರಹಣೆಗಾಗಿ ಅಕ್ರಮವಾಗಿ ಹಣ ಸಂಗ್ರಹಿಸಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೊಳೆನರಸೀಪುರದ ಆರ್.ಮೋಹನ್ ತಿಳಿಸಿದರು.  

 ಹಾಸನ :  ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಹಾಗೂ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರಿಗಾಗಿ ಚುನಾವಣಾ ನಿಧಿ ಸಂಗ್ರಹಣೆಗಾಗಿ ಅಕ್ರಮವಾಗಿ ಹಣ ಸಂಗ್ರಹಿಸಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೊಳೆನರಸೀಪುರದ ಆರ್.ಮೋಹನ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಇತ್ತೀಚೆಗೆ ಮಾತನಾಡಿ, ‘ಗೊರೂರಿನ ಹೇಮಾವತಿ ಜಲಾನಯನ ಯೋಜನಾ ವಲಯ ಕಚೇರಿಯ ಮುಖ್ಯ ಎಂಜಿನಿಯರ್ ವ್ಯಾಪ್ತಿಯಲ್ಲಿ ಎಂಪಿ ಚುನಾವಣಾ ನಿಧಿ ಸಂಗ್ರಹಣೆಗಾಗಿ ಅಕ್ರಮವಾಗಿ ಹಣ ಪಡೆದಿರುವ ಬಗ್ಗೆ ಖಚಿತ ಮೂಲ ದಾಖಲಾತಿಗಳೊಂದಿಗೆ ಪ್ರಚುರಪಡಿಸಲಾಗಿದೆ. ವಿಷಯದ ಕುರಿತು ತನಿಖೆ ನಡೆಸಲು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣರವರಿಗೆ ಒತ್ತಾಯಿಸುತ್ತೇವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ’ ಎಂದು ಹೇಳಿದರು.

ಹೇಮಾವತಿ ಬಲ ಮೇಲ್ದಂಡೆ ವಿಭಾಗ ಕಚೇರಿ ವ್ಯಾಪ್ತಿಯ ದೊಡ್ಡಕಾಡನೂರು ಉಪವಿಭಾಗದಲ್ಲಿ 2023 ರ ಅಕ್ಟೋಬರ್ 20 ರಿಂದ 2023ರ ನವೆಂಬರ್ 2 ರ ಸಪ್ಲೈಯಿಂಗ್ ಆಫ್ ಸವಡೀಸ್ 54  ಜನ ಮತ್ತು ಸಪ್ಲೈಯಿಂಗ್ ಆಫ್ ಗೇಜ್ ರೀಡರ್ ಒಬ್ಬ ಕೆಲಸಗಾರರ 14 ದಿನದ ವೇತನವನ್ನು ಗುತ್ತಿಗೆದಾರ ವರದ ಅವರ ಹೆಸರಿನಲ್ಲಿ ಒಟ್ಟು ಮೊತ್ತ 5.28618.00  ರು. ಅನ್ನು ಗುತ್ತಿಗೆದಾರರ ಖಾತೆಗೆ ಜಮಾವಣೆಗೊಂಡಿರುತ್ತದೆ. ಆದರೆ 14 ದಿನಕ್ಕೆ 5.28. 618  ರು.ನಂತೆ ಪ್ರತಿ ತಿಂಗಳು 28 ದಿನಕ್ಕೆ 10.57 236  ರು.ಗೂ ಹೆಚ್ಚು ಹಣವನ್ನು ದೊಡ್ಡಕಾಡನೂರು ಒಂದು ಉಪವಿಭಾಗದಲ್ಲಿ ನಿರ್ವಹಿಸುವುದಾದರೆ ಇತರೆ ಉಪವಿಭಾಗಗಳು ಮತ್ತು ವಿಭಾಗ ಕಚೇರಿಗಳಿಂದ ಸರ್ಕಾರಿ ಹಾಗೂ ಸಾರ್ವಜನಿಕರ ಕೋಟ್ಯಂತರ ರುಪಾಯಿಗಳನ್ನು ಮುಖ್ಯ ಎಂಜಿನಿಯರ್ ಹೇಮಾವತಿ ಯೋಜನಾವಲಯ ಗೊರೂರು ಕಚೇರಿ ವ್ಯಾಪ್ತಿಯಲ್ಲಿ ದುರ್ಬಳಕೆ ಮಾಡಿಕೊಂಡಿರುವುದು ಕಚೇರಿಯ ಬಲ್ಲ ಮೂಲಗಳಿಂದ ದಾಖಲಾತಿ ಸಮೇತ ತಿಳಿದಿದೆ’ ಎಂದು ಮಾಹಿತಿ ನೀಡಿದರು.

‘ಈ ವಿಚಾರವಾಗಿ ಸವಡೀಸ್‌ಗಳ ಹಣ ನಿರ್ವಹಿಸಿರುವುದರ ಬಗ್ಗೆ ದೊಡ್ಡಕಾಡನೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಹಾಜರಾಗಿ ಕೇಳಲಾಗಿ ಎಂಪಿ ರವರ ಚುನಾವಣಾ ವೆಚ್ಚ ಭರಿಸಲೆಂದು ಸವಡೀಸ್‌ಗಳ ಹೆಸರಿನಲ್ಲಿ ನಿಧಿ ಸಂಗ್ರಹಣೆ ಬಳಕೆ ಮಾಡಿಕೊಂಡಿರುತ್ತೇವೆಂದು ಮೌಖಿಕವಾಗಿ ನುಡಿಯುತ್ತಾರೆ. ಆದರೆ ಈ ರೀತಿ ಬಿಲ್ಲುಗಳನ್ನು ನಿರ್ವಹಿಸಲು ನಮಗೆ ಚೆಕ್ ಪವರ್ ಇರುವುದಿಲ್ಲ ಎಂದರು. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮೇಲ್ಮಟ್ಟ ಅಧಿಕಾರಿಗಳಿಗೆ ೩೫%, ಮುಖ್ಯ ಎಂಜಿನಿಯರ್ ವ್ಯಾಪ್ತಿಗೆ ೧೫% ನೀಡಬೇಕಾಗಿರುತ್ತದೆ. ಮುಖ್ಯ ಎಂಜಿನಿಯರ್ ಹೇಮಾವತಿ ಯೋಜನಾ ವಲಯ ವ್ಯಾಪ್ತಿಯ ಪ್ರತಿ ಉಪ ವಿಭಾಗಗಳಿಂದ ಸವಡೀಸ್‌ಗಳ ಮತ್ತು ಗೇಜ್ ರೀಡರ್‌ಗಳ ಹೆಸರಿನಲ್ಲಿ ಹಣ ಸಂಗ್ರಹಣೆ ಮಾಡಿರುವುದರಿಂದ. ಮುಖ್ಯ ಎಂಜಿನಿಯರ್ ರವರಿಗೆ ಏ.2 ರಂದು ವಿಷಯದ ಸಂಬಂಧ ದೂರನ್ನು ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ’ ಎಂದು ದೂರಿದರು.

ಹೇಮಾವತಿ ಯೋಜನಾ ವಲಯ ಗೊರೂರಿನ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮಗ್ರ ಇಲಾಖಾ ವಿಚಾರಣೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಗ್ರಹಿಸುತ್ತಿದ್ದೇನೆ ಎಂದರು.

ಪಾಪಣಿ, ಬಾಬು ಇತರರು ಇದ್ದರು.