ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ: ಕಾಳಹಸ್ತೇಂದ್ರ ಶ್ರೀ

| Published : Apr 28 2024, 01:25 AM IST

ಸಾರಾಂಶ

ಶಹಾಪುರ ನಗರದ ಎಸ್‌ಎಂಸಿ ಜೈನ್ ಬಿಎಡ್ ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವನ್ನು ಏಕದಂಡಗಿ ಮಠದ ಕಾಳಹಸ್ತೇಂದ್ರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಯಶಸ್ಸು ಎನ್ನುವುದು ಸೋಮಾರಿಯ ಸ್ವತ್ತಲ್ಲ. ಶ್ರದ್ಧೆ, ನಿರಂತರ ಪ್ರಯತ್ನದಿಂದಷ್ಟೇ ಸಾಧನೆಯ ಶಿಖರ ಏರಬಹುದು. ಛಲದಿಂದ ಅಧ್ಯಯನ ಮತ್ತು ನಿರಂತರ ಪ್ರಯತ್ನ ಪಟ್ಟಲ್ಲಿ ಯಶಸ್ಸು ನಿಮ್ಮದಾಗಲಿದೆ ಎಂದು ಏಕದಂಡಗಿ ಮಠದ ಕಾಳಹಸ್ತೇಂದ್ರ ಶ್ರೀಗಳು ತಿಳಿಸಿದರು.ನಗರದ ಮಡ್ನಾಳ ರಸ್ತೆಯಲ್ಲಿರುವ ಎಸ್‌ಎಂಸಿ ಜೈನ್ ಬಿಎಡ್ ಕಾಲೇಜಿನಲ್ಲಿ ನಡೆದ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂಬ ಆಸೆ ಇರುತ್ತದೆ. ಯಶಸ್ಸು ಗಳಿಸಲು ಕಠಿಣ ದುಡಿಮೆ, ನಿರಂತರ ಸಾಧನೆ, ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲ, ಗುರಿ ತಲುಪುವ ತುಡಿತ ಇವು ಯಶಸ್ಸಿನ ಮೆಟ್ಟಿಲುಗಳು. ಭಾವಿ ಶಿಕ್ಷಕರಾಗುವ ನೀವು ದೇಶದ ಹಿತ ಚಿಂತನೆಯ ಸಮಾಜದ ಬಗ್ಗೆ ಕಾಳಜಿ ಇಟ್ಟು ಮಕ್ಕಳಿಗೆ ಬೋಧನೆ ಮಾಡುವ ಅಗತ್ಯವಿದೆ ಎಂದರು.

ಶಿಕ್ಷಕರು ಉತ್ತಮ ವ್ಯಕ್ತಿತ್ವ, ದೇಶ ಭಕ್ತಿ ಮಕ್ಕಳಲ್ಲಿ ಬೆಳೆಸಿದ್ದಲ್ಲಿ ಮುಂದೆ ನಮ್ಮ ದೇಶ ಸುಭೀಕ್ಷವಾಗಿ ಸುಭದ್ರವಾಗಿ ಬೆಳೆದು ನಿಲ್ಲಲ್ಲಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಕರೆ ನೀಡಿದರು.ಕಾಲೇಜು ಮಂಡಳಿ ಅಧ್ಯಕ್ಷ ಮಾಂಗಿಲಾಲ್ ಜೈನ್ ಮಾತನಾಡಿ, ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಮಾದರಿ ಶಿಕ್ಷಕರನ್ನು ನೀಡುವುದೇ ನಮ್ಮ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಆ ನಿಟ್ಟಿನಲ್ಲಿ ಸಂಸ್ಥೆ ಕಾರ್ಯೋನ್ಮುಖವಾಗಿದೆ ಎಂದರು. ಕಾರ್ಯಕ್ರಮ ಅಧ್ಯಕ್ಷತೆ ಕಾಲೇಜಿನ ಪ್ರಾಚಾರ್ಯರಾದ ಶಬಾನ್ವ ಹಿಸಿದ್ದರು. ಕೃಷ್ಣಾ ಪಟ್ಟಣ ಬ್ಯಾಂಕ್ ನಿರ್ದೇಶಕ ಬಸವರಾಜ ಆನೇಗುಂದಿ, ಉಪನ್ಯಾಸಕರಾದ ಮಾರುತಿ, ಅಶೋಕ, ಶರಣು ಭಾವಿಕಟ್ಟಿ, ಅನ್ನಪೂರ್ಣ, ಎಸ್‌.ಎಸ್. ಪಾಟೀಲ್ ಇತರರಿದ್ದರು.