ತುರುವೇಕೆರೇಲಿ ಶೇ.80 ಶಾಂತಿಯುತ ಮತದಾನ

| Published : Apr 27 2024, 01:20 AM IST

ಸಾರಾಂಶ

ತಾಲೂಕಿನಲ್ಲಿ ಲೋಕಸಭಾ ಚುನಾವಣೆಯ ಮತದಾನವು ಶೇಕಡಾ ೮೦ ರಷ್ಟು ಆಗಿದೆ. ಎಲ್ಲಾ ಕಡೆಯೂ ಶಾಂತಿಯುತವಾಗಿ ಮತದಾನ ನಡೆದಿದೆ.

ತುರುವೇಕೆರೆ: ತಾಲೂಕಿನಲ್ಲಿ ಲೋಕಸಭಾ ಚುನಾವಣೆಯ ಮತದಾನವು ಶೇಕಡಾ ೮೦ ರಷ್ಟು ಆಗಿದೆ. ಎಲ್ಲಾ ಕಡೆಯೂ ಶಾಂತಿಯುತವಾಗಿ ಮತದಾನ ನಡೆದಿದೆ.

ನಾಲ್ಕು ಕಡೆ ಮಾತ್ರ ಕೆಲ ಕಾಲ ವಿವಿ ಪ್ಯಾಟ್ ಕೈ ಕೊಟ್ಟಿತ್ತು. ನಂತರ ಇಂಜಿನಿಯರ್ ಗಳು ಸ್ಥಳಕ್ಕೆ ಧಾವಿಸಿ ಸರಿಪಡಿಸಿದರು. ಬೆಳಿಗ್ಗೆ ೧೦ ಗಂಟೆಯ ನಂತರ ಮತದಾನ ಚುರುಕುಗೊಂಡು ಮಧ್ಯಾಹ್ನ ೧ ಗಂಟೆಗೆ ಶೇ.೪೩.೨೩ ಮತದಾನವಾಗಿತ್ತು. ೩ ಗಂಟೆ ವೇಳೆಗೆ ಬಿರುಸಿನ ಮತದಾನ ನಡೆಯಿತು. ೫ ಗಂಟೆಗೆ ಶೇ ೭೪.೮೩ ಮತದಾನವಾಗಿತ್ತು. ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಅಂಚಿಹಳ್ಳಿ ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ತೆರಳಿ ಮತ ಚಲಾಯಿಸಿದರು. ಮಾಜಿ ಶಾಸಕ ಮಸಾಲ ಜಯರಾಮ್ ಅಂಕಳಕೊಪ್ಪ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮಾಜಿ ಶಾಸಕ ಎಸ್.ರುದ್ರಪ್ಪ ಶ್ರೀರಾಂಪುರ ಮತಗಟ್ಟೆಯಲ್ಲಿ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮುನಿಯೂರು ಮತಗಟ್ಟೆಯಲ್ಲಿ, ಮಾಜಿ ಶಾಸಕ ಎಚ್.ಬಿ.ನಂಜೇಗೌಡ ಹೊಡಿಕೆಘಟ್ಟ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಕೈಕೊಟ್ಟ ಮತ ಯಂತ್ರ: ತಾಲೂಕಿನ ತಾಳಕೆರೆ ಗ್ರಾಪಂ ವ್ಯಾಪ್ತಿಯ ಚಂಡೂರು ಮತಗಟ್ಟೆ ಹಾಗೂ ಮಾಯಸಂದ್ರ ಹೋಬಳಿಯ ಕಣಕೂರು ಮತಗಟ್ಟೆಯಲ್ಲಿ ಪಟ್ಟಣದ ಎರಡು ಮತಗಟ್ಟೆಗಳಲ್ಲಿ ಮತಯಂತ್ರ ಕೆಟ್ಟು ಹೋಗಿ ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು. ಅಧಿಕಾರಿಗಳು ಕೂಡಲೇ ತೆರಳಿ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.