ಮೂಡುಬಿದಿರೆ: ಮಳೆ ನೀರು ಹರಿವಿಗಿಲ್ಲ ಚರಂಡಿ, ರಸ್ತೆಗಳಲ್ಲೇ ಕೃತಕ ನೆರೆ ಸೃಷ್ಟಿ

| Published : May 11 2024, 12:05 AM IST

ಮೂಡುಬಿದಿರೆ: ಮಳೆ ನೀರು ಹರಿವಿಗಿಲ್ಲ ಚರಂಡಿ, ರಸ್ತೆಗಳಲ್ಲೇ ಕೃತಕ ನೆರೆ ಸೃಷ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹನುಮಂತ ದೇವಸ್ಥಾನದ ಎದುರಿನ ಲಾವಂತ ಬೆಟ್ಟು ರಸ್ತೆಯ ಆರಂಭ, ಕೊನೆ, ದೊಡ್ಮನೆ ರಸ್ತೆ, ಪೇಟೆಯ ಹಲವು ಮುಖ್ಯ ಬೀದಿ, ಅಡ್ಡರಸ್ತೆಗಳಿಗೆ ಚರಂಡಿ ಎನ್ನುವುದೇ ಇಲ್ಲ. ಚರಂಡಿ ಇದ್ದ ಕಡೆ ಅವುಗಳ ಹೂಳೆತ್ತುವ ಗೋಜಿಗೆ ಯಾರೂ ಹೋಗಿಲ್ಲ.

ಗಣೇಶ್‌ ಕಾಮತ್‌ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ರಣ ಬಿಸಿಲಿಗೆ ಬೆವರಿ ಬಸವಳಿದಿರುವ ಮೂಡುಬಿದಿರೆಯ ಜನತೆ ಇನ್ನೇನು ಆರಂಭವಾಗಲಿರುವ ಮುಂಗಾರು ಮಳೆಯನ್ನು ಸ್ವಾಗತಿಸುವ ತವಕದಲ್ಲಿದ್ದಾರೆ. ಆದರೆ ಮಳೆ ಸುರಿಯಲಾರಂಭಿಸಿದರೆ ತೋಡುಗಳಿಲ್ಲದ ಇಲ್ಲಿನ ರೋಡುಗಳಲ್ಲಿ ಹರಿವ ನೀರು ಅಲ್ಲಲ್ಲಿ ಕೃತಕ ಕೆರೆಗಳನ್ನು ಸೃಷ್ಟಿಸಿ ಆತಂಕವನ್ನೂ ತರುತ್ತದೆ. ಕಳೆದ ಬಾರಿ ಅದೆಷ್ಟೋ ಚರಂಡಿಗಳ ಬಳಿ ಜೆಸಿಬಿ ಬಳಸಿ ಹೂಳೆತ್ತಿ ಶುಚಿಗೊಳಿಸಿದ ದೃಶ್ಯಗಳು ಕೆಲವೆಡೆ ಕಂಡಿದ್ದವು. ಆದರೆ ಈ ಬಾರಿ ಚುನಾವಣೆಯಿಂದಾಗಿ ಅದೆಲ್ಲವೂ ಮರೆತು ಹೋದಂತಿದೆ. ಮೆಸ್ಕಾಂನವರು ಪೇಟೆಯ ರಸ್ತೆಗಳಲ್ಲಿ ಬಾಗಿದ ಮರಗಳ ಗೆಲ್ಲುಗಳನ್ನು ಸವರಿದ್ದಾರೆ. ಪುರಸಭೆಯವರೂ ಕೆಲಸ ಆರಂಭಿಸಿದ್ದರೂ ಕೀ ಪಾಯಿಂಟ್‌ಗಳಲ್ಲಿ ಸಮಸ್ಯೆ ಬಾಕಿ ಉಳಿದಿದೆ. ಜಲಾವೃತವಾಗುವ ಪ್ರಮುಖ ರಸ್ತೆಗಳು: ಹೇಳಿ ಕೇಳಿ ಮೂಡುಬಿದಿರೆ 18 ಕೆರೆಗಳ ಬೀಡು. ಮಳೆ ಬಿಡದಂತೆ ಸುರಿದರೆ ಇಲ್ಲಿ ಮಾರ್ಕೆಟ್ ಕಾಂಪ್ಲೆಕ್ಸ್ ಮುಂದಿನ ಮುಖ್ಯ ಹೈವೇ ರಸ್ತೆ, ಕೃಷ್ಣ ಕಟ್ಟೆಯ ಪರಿಸರ ಜಲಾವೃತವಾಗುತ್ತದೆ. ಮಸೀದಿ ಬಳಿಯ ವಿಜಯನಗರ ಈಜುಕೊಳದಂತಾಗುತ್ತದೆ. ಪಕ್ಕದ ಅಮರಶ್ರೀ ಟಾಕೀಸು ಮುಂದಿರುವ ರಸ್ತೆಯೂ ಕೆರೆಯಾಗುತ್ತದೆ. ಆಳ್ವಾಸ್ ಆಸ್ಪತ್ರೆ ರಸ್ತೆ, ಕಲ್ಸಂಕ, ಮಹಾವೀರ ಕಾಲೇಜು ರಸ್ತೆ ಪೆಟ್ರೋ ಲ್ ಪಂಪ್ ಎದುರಿಗೂ ರಸ್ತೆ ಜಲಾವೃತವಾಗುತ್ತದೆ. ಪೊನ್ನೆಚಾರಿ ಸೇತುವೆ ಬಳಿ, ಬೈಲಾರೆಯ ಮನೆಗಳಿಗೆ ನೀರು ನುಗ್ಗುತ್ತದೆ. ಹೀಗೆ ಪಟ್ಟಿ ಮಾಡಿದರೆ ಹಲವು ಕಡೆ ಸಮಸ್ಯೆಗಳು ಬಿಗಡಾಯಿಸುತ್ತಲೇ ಇವೆ.

ಹನುಮಂತ ದೇವಸ್ಥಾನದ ಎದುರಿನ ಲಾವಂತ ಬೆಟ್ಟು ರಸ್ತೆಯ ಆರಂಭ, ಕೊನೆ, ದೊಡ್ಮನೆ ರಸ್ತೆ, ಪೇಟೆಯ ಹಲವು ಮುಖ್ಯ ಬೀದಿ, ಅಡ್ಡರಸ್ತೆಗಳಿಗೆ ಚರಂಡಿ ಎನ್ನುವುದೇ ಇಲ್ಲ. ಚರಂಡಿ ಇದ್ದ ಕಡೆ ಅವುಗಳ ಹೂಳೆತ್ತುವ ಗೋಜಿಗೆ ಯಾರೂ ಹೋಗಿಲ್ಲ.

ನೀರು ಸರಾಗ ಹರಿವೆಗೆ ಚರಂಡಿಗಳೇ ಇಲ್ಲ: ಹಲವು ವರ್ಷಗಳಿಂದ ರಾಜಕೀಯ ಪಕ್ಷಗಳ ಆಶ್ವಾಸನೆಯ ಪಟ್ಟಿಯಲ್ಲಿರುವ ಒಳಚರಂಡಿ ಯೋಜನೆಯ ಹೆಸರಿನಲ್ಲಿ ಅಲ್ಲಲ್ಲಿ ಗೊತ್ತು ಗುರಿ ಇಲ್ಲದೇ ರಚನೆಯಾದ ಕಾಂಕ್ರೀಟು ಚರಂಡಿಗಳು ಊರವರು ಎಸೆದ ತ್ಯಾಜ್ಯ ಪೊಟ್ಟಣಗಳಿಂದ ತುಂಬಿವೆ.

ಹಸಿರನ್ನೇ ಮರೆತು, ಇದ್ದುದನ್ನೆಲ್ಲ ಕ್ರಾಂಕೀಟುಮಯವಾಗಿಸಿರುವ ಪೇಟೆಯಲ್ಲಿ ಚರಂಡಿಗಳನ್ನು ಭೂತಕನ್ನಡಿ ಹಿಡಿದು ಹುಡುಕುವ ಪರಿಸ್ಥಿತಿ ಇದೆ. ಹಾಗಾಗಿ ಈ ಬಾರಿ ಸುರಿವ ಮಳೆ ಅದೇನು ಅಪಾಯಗಳನ್ನು ತಂದೊಡ್ಡಲಿದೆ ಎಂದು ಊಹಿಸುವುದಕ್ಕೂ ಕಷ್ಟವಾಗುತ್ತಿದೆ.

ವಸತಿ, ವಾಣಿಜ್ಯ ಸಂಕೀರ್ಣಗಳವರು ನಿಯಮ ಮೀರಿ ತಮ್ಮ ದುರ್ನಾತವನ್ನು ಹತ್ತಿರದ ಚರಂಡಿಗಳಿಗೆ ದೇಣಿಗೆಯಾಗಿ ನೀಡುತ್ತಿರುವ ಕಾರಣ ಗಲೀಜು ನೀರು ರಸ್ತೆಗೆ ಹರಿದು ಮಳೆಗಾಲದಲ್ಲಿ ಪಾದಚಾರಿಗಳಿಗೆ ರಟ್ಟುವುದು ಎಂದಿನ ನರಕಯಾತನೆ ಕೇಳುವವರಿಲ್ಲದಂತಾಗಿದೆ. ಈಗಾಗಲೇ ಕೆಲವು ಚರಂಡಿಗಳ ಗಬ್ಬು ನಾತ ಪೇಟೆಯಲ್ಲಿ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಜನಪ್ರತಿನಿಧಿಗಳಿಲ್ಲದೇ ವರ್ಷ ಕಳೆದ ಪುರಸಭೆಯಲ್ಲಿ ಅಧಿಕಾರಿಗಳು ತಮ್ಮ ಇತಿ ಮಿತಿಯಲ್ಲಿ ಸ್ಪಂದಿಸಿದ್ದಾರೆ. ಆದರೆ ಸಮಗ್ರ ದೂರದರ್ಶಿತ್ವದ ಜವಾಬ್ದಾರಿಯಿಂದ ಕೆಲಸ ಮಾಡಿಸಬೇಕಾಗಿರುವ ಜನಪ್ರತಿನಿಧಿಗಳು ಮೌನ ವಹಿಸಿರುವುದು ವ್ಯವಸ್ಥೆಯ ದುರಂತ.

ಪುರಸಭಾ ವ್ಯಾಪ್ತಿಯಲ್ಲಿ ಚರಂಡಿಯ ಹೂಳೆತ್ತುವ ಕೆಲಸ ನಿರಂತರವಾಗಿ ಸಾಗಿದೆ. ಕಲ್ಸಂಕ ರಾಜ ಕಾಲುವೆಯನ್ನು ಶುಚಿಗೊಳಿಸಲಾಗಿದೆ. ಮಳೆಗಾಲವನ್ನೆದುರಿಸಲು ಈಗಾಗಲೇ ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುವ ತಂಡಗಳನ್ನು ರಚಿಸಲಾಗಿದೆ. ಸಹಾಯವಾಣಿ 08258236236 ಗೆ ಕರೆ ಮಾಡಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಪರಿಹರಿಸಿಕೊಳ್ಳಬಹುದು. ಮಳೆಗಾಲದ ಸವಾಲುಗಳನ್ನೆದುರಿಸಲು ನಾವು ಸಜ್ಜಾಗಿದ್ದೇವೆ

- ಸುಜಯ್ ಎಸ್.ಎಂ., ಪುರಸಭಾ ಮುಖ್ಯಾಧಿಕಾರಿ ಮೂಡುಬಿದಿರೆ