ಮುಂಗಾರು ಪೂರ್ವ ಮಳೆ ಕೊರತೆ : ಹೊಲ ಹದಗೊಳಿಸಲು ಉಳಿಯದ ತೇವಾಂಶ

| Published : May 11 2024, 12:02 AM IST / Updated: May 11 2024, 01:25 PM IST

Drought survey

ಸಾರಾಂಶ

ರೈತರು ಹೊಲಗಳನ್ನು ರಂಟಿ, ಕುಂಟಿ ಹೊಡೆದು ಹರಗಿ ಕಸ ಆರಿಸಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದುಕೊಂಡರೆ ಈ ಬಾರಿ ಮುಂಗಾರು ಪೂರ್ವ ಮಳೆ ಅಷ್ಟಾಗಿ ಆಗಿಲ್ಲ. ಜಿಲ್ಲೆಯಲ್ಲಿ ಕಳೆದ ತಿಂಗಳು ಮಳೆಯಾಗಿದೆ ಆದರೂ ಹೊಲ ಹದಗೊಳಿಸುವ ತೇವಾಂಶವಿಲ್ಲ.

ಮಹೇಶ ಛಬ್ಬಿ

ಗದಗ:  ಕಳೆದ ವರ್ಷ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟು ಜಿಲ್ಲೆಯಾದ್ಯಂತ ಬರ ಆವರಿಸಿ ಕುಡಿಯುವ ನೀರಿಗೂ, ನೆರಳಿಗೂ ಹಾಹಾಕಾರ ಸೃಷ್ಟಿಯಾಗಿ ಅಕ್ಷರಶಃ ಜಿಲ್ಲೆಯೇ ಜನತೆ ನಲುಗಿದ್ದಾರೆ. ಪ್ರಸಕ್ತ ವರ್ಷ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ಜನತೆಗೆ ಬಿಸಲಿನ ತಾಪಮಾನದ ಏರಿಕೆ ಮತ್ತಷ್ಟು ಆತಂಕ ಹೆಚ್ಚಿಸಿದ್ದು ಬಿತ್ತನೆಗೆ ಭೂಮಿ ಹದಗೊಳಿಸಲು ಹಿನ್ನಡೆಯಾಗಿದೆ.

ಭೂಮಿ ಹದಗೊಳಿಸಲು ಹಿನ್ನಡೆ:

ರೈತರು ಹೊಲಗಳನ್ನು ರಂಟಿ, ಕುಂಟಿ ಹೊಡೆದು ಹರಗಿ ಕಸ ಆರಿಸಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದುಕೊಂಡರೆ ಈ ಬಾರಿ ಮುಂಗಾರು ಪೂರ್ವ ಮಳೆ ಅಷ್ಟಾಗಿ ಆಗಿಲ್ಲ. ಜಿಲ್ಲೆಯಲ್ಲಿ ಕಳೆದ ತಿಂಗಳು ಮಳೆಯಾಗಿದೆ ಆದರೂ ಹೊಲ ಹದಗೊಳಿಸುವ ತೇವಾಂಶವಿಲ್ಲ. ಹೀಗಾಗಿ ಬಿತ್ತನೆ ಭೂಮಿ ಹದಗೊಳಿಸಲು ಆಗದೆ ರೈತರು ಆತಂಕಗೊಂಡಿದ್ದಾರೆ. ಒಮ್ಮೇಲೆ ಮಳೆ ಸುರಿದರೆ ಭೂಮಿ ಹದಗೊಳಿಸಲು ಸಮಯ ತೆಗೆದುಕೊಳ್ಳುವ ಜತೆಗೆ ಬಿತ್ತನೆಗೂ ಹಿನ್ನಡೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.

ಕುಡಿಯುವ ನೀರಿನ ಸಮಸ್ಯೆ:

ಹಿಂಗಾರು ಮಳೆ ತಕ್ಕ ಮಟ್ಟಿಗೆ ಆಗಿದ್ದರಿಂದ ಜೋಳ, ಕಡ್ಲಿ ಸೇರಿದಂತೆ ಇನ್ನಿತರೆ ಬೆಳೆಗಳು ಹುಲಸಾಗಿ ಬೆಳೆದು ಸದ್ಯ ಮೇವಿನ ಕೊರತೆ ಇಲ್ಲ. ಆದರೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅಡವಿಯಲ್ಲಿ ಯಾವ ಕೆರೆ, ಕೃಷಿಹೊಂಡಗಳಲ್ಲಿ ನೀರಿಲ್ಲ. ಕೃಷಿ ಚಟಿವಟಿಕೆಗೆ ಎತ್ತುಗಳನ್ನು ತೆಗೆದುಕೊಂಡ ಹೋದರೆ ಮನೆಯಲ್ಲಿ ನೀರು ಕುಡಿಸಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬೀಜ, ಗೊಬ್ಬರ ಖರೀದಿಗೆ ನೆರವಾಗಿ:

ಒಂದೆಡೆ ಮಳೆ ವಿಳಂಬ, ಮತ್ತೊಂದೆಡೆ ಮಳೆ ಸುರಿದರೆ ಬಿತ್ತನೆಗೆ ಬೇಕಾಗುವ ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಹಣವಿಲ್ಲ. ಆದರಿಂದ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ತುಂಬಿದ ಮಧ್ಯಂತರ ಪರಿಹಾರ ನೀಡಬೇಕು ಎಂಬುದು ರೈತರ ಅಂಬೋಣ.

ತೋಟಗಾರಿಕೆ ಬೆಳೆ ನಾಶ:

ವಿಪರಿತ ಬಿಸಲಿನ ತಾಪಮಾನ, ಬಿಸಿ ಗಾಳಿಯಿಂದ ತೋಟಗಳಲ್ಲಿ ಬೆಳೆದ ಮೆಣಸಿನಕಾಯಿ, ಹಿರೇಕಾಯಿ, ಟೋಮ್ಯಾಟೋ ಸೇರಿ ತರಕಾರಿ ಬೆಳೆ ಹಾಗೂ ಇನ್ನಿತರೆ ತೋಟಗಾರಿಕೆ ಬೆಳೆ ನಾಶವಾಗುತ್ತಿವೆ. ಮಳೆ ಕೊರತೆಯಿಂದ ಅಂತರ್ಜಲ ಕುಸಿತವಾಗಿದ್ದು, ಬೆಳೆಗೆ ನೀರು ಸಾಕಾಗುತ್ತಿಲ್ಲ.ಚುನಾವಣಾ ಮೂಡ್‌ನಿಂದ ಹೊರ ಬಂದ ರೈತರು:ಕಳೆದ ಎರಡು ತಿಂಗಳಿಂದ ಚುನಾವಣೆಯಲ್ಲಿ ತೊಡಗಿದ್ದ ರೈತರು ಇದೀಗ ಆ ಮೂಡ್‌ನಿಂದ ಹೊರಬಂದು ಹೊಲದತ್ತ ಚಿತ್ತ ಹರಿಸಿದ್ದಾರೆ. ಹೊಲದಲ್ಲಿ ಬೆಳೆದಿರುವ ಗಿಡ, ಗಂಟಿ ಕಿತ್ತು ಭೂಮಿ ಹದಗೊಳಿಸುವ ಕಾರ್ಯಕ್ಕೆ ಸಿದ್ಧರಾಗುತ್ತಿದ್ದಾರೆ. ಆದರೆ, ಮುಂಗಾರು ಪೂರ್ವ ಮಳೆ ಈ ಬಾರಿ ಸುರಿಯದ ಹಿನ್ನಲೆ ಬಿತ್ತನೆಗೂ ಹಿನ್ನಡೆ ಆಗುತ್ತದೆ ಎಂದು ಆತಂಕ ರೈತರನ್ನು ಕಾಡುತ್ತಿದೆ. ಮಧ್ಯಂತರ ಬೆಳೆ ವಿಮೆ ಪರಿಹಾರ ಬಂದಿದೆ. ಇನ್ನುಳಿದ ಪರಿಹಾರವು ಸದ್ಯದಲ್ಲಿಯೇ ಬರುತ್ತದೆ. ಪ್ರಸಕ್ತ ವರ್ಷ ಮುಂಗಾರು ಬಿತ್ತನೆಗೆ ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮಕೈಗೊಂಡಿದೆ ಎಂದು ಗದಗ ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರಗಣ್ಣವರ ತಿಳಿಸಿದ್ದಾರೆ.