ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಬೆಂಬಲಕ್ಕೆ ನಿಂತ ದರ್ಶನ್

| Published : Apr 19 2024, 01:03 AM IST / Updated: Apr 19 2024, 08:22 AM IST

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಬೆಂಬಲಕ್ಕೆ ನಿಂತ ದರ್ಶನ್
Share this Article
  • FB
  • TW
  • Linkdin
  • Email

ಸಾರಾಂಶ

 ಜಿಲ್ಲೆಯೊಳಗೆ ದರ್ಶನ್ ಹೆಸರಿನಲ್ಲಿ ಒಂದಷ್ಟು ವೋಟ್‌ಬ್ಯಾಂಕ್ ಇದೆ. ಅದನ್ನು ಕಾಂಗ್ರೆಸ್‌ನತ್ತ ಸೆಳೆಯುವ ಸಲುವಾಗಿ ದರ್ಶನ್ ಅವರನ್ನು ಕೈಪಡೆಯ ನಾಯಕರು ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ.

  ಮಂಡ್ಯ :  ರಾಷ್ಟ್ರದ ಗಮನಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರ ದಿನಕ್ಕೊಂದು ರೀತಿಯ ರಂಗನ್ನು ಪಡೆದುಕೊಳ್ಳುತ್ತಿದೆ. ಅಖಾಡದಲ್ಲಿ ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಬೆಂಬಲಕ್ಕೆ ನಟ ದರ್ಶನ್ ನಿಂತಿದ್ದಾರೆ.

ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಬಳಿಕವೂ ನಟ ದರ್ಶನ್ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ, ನಟ ದರ್ಶನ್ ಒಬ್ಬ ಸ್ಟಾರ್ ಪ್ರಚಾರಕರಾಗಿದ್ದು, ಅವರ ಪ್ರಚಾರ ಪಕ್ಷಾತೀತವಾಗಿದೆ. ಅವರೊಂದಿಗೆ ಸ್ನೇಹ, ವಿಶ್ವಾಸದಿಂದ ಇರುವವರ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಲೇ ಬಂದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರಿನಿಂದ ಸ್ಪರ್ಧಿಸಿದ್ದ ಕೆ.ಎಂ.ಉದಯ್, ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಪರ ದರ್ಶನ್ ಹಾಗೂ ಚುನಾವಣಾ ಪ್ರಚಾರ ನಡೆಸಿದ್ದರು. ಇಬ್ಬರೂ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.

ಜಿಲ್ಲೆಯೊಳಗೆ ದರ್ಶನ್ ಹೆಸರಿನಲ್ಲಿ ಒಂದಷ್ಟು ವೋಟ್‌ಬ್ಯಾಂಕ್ ಇದೆ. ಅದನ್ನು ಕಾಂಗ್ರೆಸ್‌ನತ್ತ ಸೆಳೆಯುವ ಸಲುವಾಗಿ ದರ್ಶನ್ ಅವರನ್ನು ಕೈಪಡೆಯ ನಾಯಕರು ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ.

ಮಳವಳ್ಳಿ ತಾಲೂಕಿನಲ್ಲಿ ನಟ ದರ್ಶನ್ ಗುರುವಾರ ಇಡೀ ದಿನ ಪ್ರಚಾರ ನಡೆಸಿದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮದ್ದೂರು ಶಾಸಕ ಕೆ.ಎಂ.ಉದಯ್ ಪ್ರಚಾರದಲ್ಲಿ ದರ್ಶನ್ ಜೊತೆ ಭಾಗವಹಿಸಿದ್ದರು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸಿ ಅವರ ಗೆಲುವಿಗೆ ಕಾರಣರಾದವರಲ್ಲಿ ಒಬ್ಬರಾಗಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಟರಾದ ದರ್ಶನ್ ಮತ್ತು ಯಶ್ ಇಬ್ಬರೂ ‘ಜೋಡೆತ್ತು’ಗಳಂತೆ ಸುಮಲತಾ ಬೆಂಬಲಕ್ಕೆ ನಿಂತು ಅಂದು ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ಕುಮಾರಸ್ವಾಮಿ ವಿರುದ್ಧ ಪ್ರಚಾರ ನಡೆಸಿದ್ದರು. ಯುವ ಸಮೂಹದ ಮತಗಳನ್ನು ಸೆಳೆಯುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದರು. ಈಗ ಸುಮಲತಾ ಅಂಬರೀಶ್ ಚುನಾವಣಾ ಕಣದಲ್ಲಿ ಇಲ್ಲದಿದ್ದರೂ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ನಡೆಸುವ ಮೂಲಕ ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆಯೇ ಅಥವಾ ತಮ್ಮ ವಿರುದ್ಧ ಸುಮಲತಾ ಅಂಬರೀಶ್ ನಟ ದರ್ಶನ್ ಅವರನ್ನು ಪ್ರಚಾರಕ್ಕೆ ಕಳುಹಿಸಿದ್ದಾರೆಯೇ ಎಂಬ ಅನುಮಾನಗಳು ಜೆಡಿಎಸ್‌ನವರಲ್ಲಿ ಮೂಡುವಂತೆ ಮಾಡಿದೆ.

ನಟ ದರ್ಶನ್ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಒಂದೇ ಪಕ್ಷದ ಪರವಾಗಿ ಅವರು ಚುನಾವಣಾ ಪ್ರಚಾರವನ್ನೂ ನಡೆಸಿಲ್ಲ. ಅವರ ಬಳಿ ಯಾರು ಹೋಗಿ ಪ್ರಚಾರಕ್ಕೆ ಕರೆಯುವರೋ ಅವರ ಪರ ಪ್ರಚಾರಕ್ಕೆ ಬರುತ್ತಾರೆ. ನಾವು ಅವರ ಬಳಿ ಹೋಗಿ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದೆವು. ಅದನ್ನು ಒಪ್ಪಿ ಅವರು ಬಂದಿದ್ದಾರೆ. ತಮ್ಮ ಪರವಾಗಿ ಪ್ರಚಾರಕ್ಕೆ ಬರುವಂತೆ ಕುಮಾರಸ್ವಾಮಿಯಾಗಲೀ ಅಥವಾ ಜೆಡಿಎಸ್ ಸ್ಥಳೀಯ ನಾಯಕರಾಗಲೀ ದರ್ಶನ್ ಬಳಿಗೆ ಹೋಗಿಲ್ಲ. ದರ್ಶನ್ ಪ್ರಚಾರವನ್ನು ರಾಜಕೀಯಕ್ಕೆ ತಾಳೆ ಹಾಕಿ ನೋಡುವುದು ಸರಿಯಲ್ಲ ಎನ್ನುವುದು ಕಾಂಗ್ರೆಸ್ಸಿಗರು ಹಾಗೂ ಸುಮಲತಾ ಬೆಂಬಲಿಗರ ಅಭಿಪ್ರಾಯವಾಗಿದೆ.

ಎಚ್ ಡಿಕೆ ಸೋಲಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್:

ಪ್ರಸ್ತುತ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಚುನಾವಣೆಯಲ್ಲಿ ಸೋಲಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಕಲಿಗಳು ಯಾವ ಯಾವ ಮೂಲದಿಂದ ಮತಗಳು ಹರಿದುಬರುತ್ತವೋ ಅವೆಲ್ಲವನ್ನೂ ಕಾಂಗ್ರೆಸ್ ಬುಟ್ಟಿಗೆ ಸೇರಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ನಟ ದರ್ಶನ್ ಬಳಿಕ ಮಾಜಿ ಸಂಸದೆ ರಮ್ಯಾ ಅವರೂ ಪ್ರಚಾರಕ್ಕೆ ಬರುತ್ತಿದ್ದಾರೆ. ಅವರಿಂದಲೂ ಒಂದಷ್ಟು ಮತಗಳು ಕಾಂಗ್ರೆಸ್‌ಗೆ ಬಂದು ಸೇರಲಿವೆ ಎಂಬ ನಂಬಿಕೆ ಕಾಂಗ್ರೆಸ್ಸಿಗರಲ್ಲಿದೆ.

ನನ್ನದು ವ್ಯಕ್ತಿ ಪರ ಪ್ರಚಾರವೇ ವಿನಃ ಪಕ್ಷದ ಪರವಲ್ಲ: ದರ್ಶನ್

ಮಂಡ್ಯ: ಚುನಾವಣಾ ಸಮಯದಲ್ಲಿ ನನ್ನದು ವ್ಯಕ್ತಿ ಪರವಾದ ಪ್ರಚಾರವೇ ಹೊರತು ಯಾವುದೇ ಪಕ್ಷದ ಪರವಾಗಿರುವುದಿಲ್ಲ. ನನ್ನ ಹಿತೈಷಿಗಳು, ಸ್ನೇಹಿತರು ಯಾವುದೇ ಪಕ್ಷದಲ್ಲಿರಲಿ ಅವರು ಕರೆದಾಗ ಬಂದು ಪ್ರಚಾರ ಮಾಡುತ್ತೇನೆ ಎಂದು ನಟ ದರ್ಶನ್ ಹೇಳಿದರು.

ಹಲಗೂರಿನಲ್ಲಿ ಪ್ರಚಾರ ಮಾಡುವ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಐದು ವರ್ಷಗಳ ಹಿಂದೆ ಪಿ.ಎಂ.ನರೇಂದ್ರಸ್ವಾಮಿ ಅವರು ನನಗೆ ಮಾಡಿದ ಸಹಾಯವನ್ನು ನೆನಪಿಸಿಕೊಳ್ಳುತ್ತೇನೆ. ಜೊತೆಗೆ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಮಂಡ್ಯ ಟಿಕೆಟ್ ಕೈ ತಪ್ಪಿದರೆ ನಮ್ಮ ಪರವಾಗಿ ಪ್ರಚಾರ ಮಾಡಬೇಕು ಎಂದು ಶಾಸಕ ಉದಯ್‌ಗೌಡ ಅವರು ಕೇಳಿದ್ದರು. ಮೊದಲು ಅವರು ನನ್ನನ್ನು ಕರೆದರು ಎಂಬ ಕಾರಣಕ್ಕೆ ನಾನು ಪ್ರಚಾರಕ್ಕೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸ್ಟಾರ್ ಚಂದ್ರು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಈ ಬಾರಿ ಜನರು ಅವರನ್ನು ಬೆಂಬಲಿಸುವುದರೊಂದಿಗೆ ನರೇಂದ್ರಸ್ವಾಮಿ ಮತ್ತು ಕೆ.ಎಂ.ಉದಯ್ ಅವರ ಕೈಬಲಪಡಿಸುವಂತೆ ಮನವಿ ಮಾಡಿದರು.

ನನಗೆ ಗೊತ್ತಿರುವುದು ಸ್ನೇಹದ ರಾಜಕಾರಣ. ದ್ವೇಷದ ರಾಜಕಾರಣ ನನಗೆ ಗೊತ್ತಿಲ್ಲ. ನಾನು ಯಾರನ್ನೂ ದ್ವೇಷಿಸುವುದಿಲ್ಲ. ನನಗೆ ರಾಜಕೀಯ ಅಷ್ಟಾಗಿ ಗೊತ್ತೂ ಇಲ್ಲ. ನನಗೆ ವ್ಯಕ್ತಿ ಮುಖ್ಯವೇ ವಿನಃ ಪಕ್ಷವಲ್ಲ ಎಂದು ಪುನರುಚ್ಛರಿಸಿದರು.