ಕೈ ಹಿಡಿದ ಬಿಜೆಪಿ ಮಾಜಿ ಶಾಸಕ ನೆಹರು ಓಲೇಕಾರ

| Published : May 02 2024, 12:20 AM IST / Updated: May 02 2024, 09:26 AM IST

ಕೈ ಹಿಡಿದ ಬಿಜೆಪಿ ಮಾಜಿ ಶಾಸಕ ನೆಹರು ಓಲೇಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡು ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದ ಬಿಜೆಪಿ ಮಾಜಿ ಶಾಸಕ ನೆಹರು ಓಲೇಕಾರ ಬುಧವಾರ ಯಾದಗಿರಿಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಹಾವೇರಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡು ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದ ಬಿಜೆಪಿ ಮಾಜಿ ಶಾಸಕ ನೆಹರು ಓಲೇಕಾರ, ಕಾಂಗ್ರೆಸ್‌ ಸೇರ್ಪಡೆಯಾಗಿರುವುದು ಕ್ಷೇತ್ರದ ಲೋಕಸಭಾ ಚುನಾವಣಾ ಕಣ ಮತ್ತಷ್ಟು ರಂಗೇರಿದಂತಾಗಿದೆ.

ಯಾದಗಿರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಮ್ಮುಖದಲ್ಲಿ ಓಲೇಕಾರ ಕಾಂಗ್ರೆಸ್‌ ಸೇರಿದ್ದಾರೆ.

ಅದಕ್ಕೂ ಮುನ್ನ ಬುಧವಾರ ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪಕ್ಷ ಸೇರ್ಪಡೆ ಕುರಿತು ಚರ್ಚಿಸಿದರು. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರೊಂದಿಗೆ ತೆರಳಿ ಅಧಿಕೃತವಾಗಿ ಕಾಂಗ್ರೆಸ್‌ ಸೇರಿದರು. ಲೋಕಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟು ದಿನ ಬಾಕಿ ಇರುವಾಗ ಅವರು ಬಿಜೆಪಿ ಬಿಟ್ಟು ಕೈ ಹಿಡಿದಿರುವುದು ಚರ್ಚೆಗೆ ಗ್ರಾಸವಾಗಿದೆ.

ಬ್ಯಾಡಗಿ ಕ್ಷೇತ್ರದಿಂದ ಒಂದು ಸಲ, ಹಾವೇರಿ ಎಸ್ಸಿ ಮೀಸಲು ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ನೆಹರು ಓಲೇಕಾರ ಅವರಿಗೆ ಕಳೆದ ವಿಧಾನಸಭೆ ಟಿಕೆಟ್‌ ಕೈತಪ್ಪಿತ್ತು. ಜಿಲ್ಲೆಯವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಅವರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದು ಓಲೇಕಾರ ಅವರಿಗೆ ಮುಳುವಾಗಿತ್ತು. ಬಿಜೆಪಿ ಟಿಕೆಟ್‌ ಕೈತಪ್ಪಿದರೂ ಯಾವುದೇ ಪಕ್ಷ ಸೇರದೆ ಒಂದು ವರ್ಷದಿಂದ ತಟಸ್ಥರಾಗಿದ್ದ ಓಲೇಕಾರ ಅವರನ್ನು ಲೋಕಸಭೆ ಚುನಾವಣೆ ವೇಳೆ ಸಕ್ರಿಯಗೊಳಿಸುವ ಬಗ್ಗೆ ಅನೇಕರು ಪ್ರಯತ್ನಿಸಿದ್ದರು. ಆದರೆ, ಪಕ್ಷದೊಳಗಿನ ಅನೇಕ ಮುಖಂಡರು, ಕಾರ್ಯಕರ್ತರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಆ ಪ್ರಕ್ರಿಯೆ ಅಲ್ಲಿಯೇ ನಿಂತಿತ್ತು. ಬಳಿಕ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಸಂಪರ್ಕ ಬೆಳೆಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಕಾಂಗ್ರೆಸ್‌ನ ಕೆಲವರು ಓಲೇಕಾರ ಸೇರ್ಪಡೆಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಗೆ ಇನ್ನು 5 ದಿನಗಳಷ್ಟೇ ಇರುವಾಗ ಓಲೇಕಾರ ಸೇರ್ಪಡೆ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದು ಫಲಿತಾಂಶದ ಬಳಿಕ ಗೊತ್ತಾಗಲಿದೆ. ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದಿದ್ದಾರೆ. ರಾಜಕೀಯ ಸ್ಥಿತ್ಯಂತರ ಸಹಜ ಪ್ರಕ್ರಿಯೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದರೂ ಸರಿಪಡಿಸಿಕೊಂಡು ಹೋಗುತ್ತೇವೆ. ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಜನ ಪಕ್ಷಪಾತ, ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ನಾನು ಕಾಂಗ್ರೆಸ್‌ ಸೇರಿದ್ದೇನೆ. ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಜಿಲ್ಲೆಯಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಅಲ್ಲದೇ ಪಕ್ಷದಲ್ಲಿ ನನ್ನನ್ನು ಕಡೆಗಣಸಿದ್ದಕ್ಕೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸಿದ್ಧಾಂತ ಒಪ್ಪಿಕೊಂಡು ಹೋಗಿದ್ದೇನೆ ಎಂದು ಮಾಜಿ ಶಾಸಕ ನೆಹರು ಓಲೇಕಾರ ಹೇಳಿದರು.