ದ.ಕ. ಅಂತಿಮ ಮತದಾನ ಶೇ.77.56 ದಾಖಲು; ಶೇ.96.28 ಅಂಚೆ ಮತ ಚಲಾವಣೆ

| Published : Apr 28 2024, 01:27 AM IST

ಸಾರಾಂಶ

ದ.ಕ. ಲೋಕಸಭಾ ಕ್ಷೇತ್ರದ ಚುನಾವಣೆಯ ಮತಪೆಟ್ಟಿಗೆಗಳನ್ನು ಸುರತ್ಕಲ್‌ ಎನ್‌ಐಟಿಕೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಭದ್ರತಾ ಕೊಠಡಿಯ ಸುತ್ತಮುತ್ತ ಬಿಗು ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಲೋಕಸಭಾ ಕ್ಷೇತ್ರದ ಮತದಾನದ ಅಂತಿಮ ಮತದಾನ ಪ್ರಕಟವಾಗಿದೆ. ಈ ಬಾರಿ ಶೇ.77.56 ಮತದಾನ ದಾಖಲಾಗಿದೆ. ಕಳೆದ ಬಾರಿ ಶೇ.77.69 ಮತದಾನವಾಗಿದ್ದು, ಈ ಬಾರಿ ಶೇ.ಪಾಯಿಂಟ್‌ 14ರಷ್ಟು ಕಡಿಮೆ ಮತದಾನವಾದಂತಾಗಿದೆ. ಅಂಚೆ ಮತಗಳು ಶೇ.96.28 ಚಲಾವಣೆಯಾಗಿದೆ. ಈ ಬಾರಿ 77 ಮಂದಿ ತೃತೀಯ ಲಿಂಗಿ ಸೇರಿದಂತೆ ಒಟ್ಟು 18,17,603 ಮತದಾರರಿದ್ದರು. ಈ ಪೈಕಿ 14,09,653 ಮಂದಿ ಮತ ಚಲಾಯಿಸಿದ್ದಾರೆ. ಈ ಬಾರಿಯೂ ಮಹಿಳೆಯರೇ ಅತ್ಯಧಿಕ ಪ್ರಮಾಣದಲ್ಲಿ ಮತ ಚಲಾಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮತ ಚಲಾಯಿಸಿದವರ ಪೈಕಿ 7,27,831 ಮಹಿಳೆಯರು ಮತ್ತು 6,81,803 ಪುರುಷರು ಹಾಗೂ 19 ಮಂದಿ ಇತರೆ ಮತದಾರರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ, ಎಷ್ಟು ಮತದಾನ?: ಪ್ರತಿ ಬಾರಿ ಚುನಾವಣೆಯಲ್ಲೂ ಅತ್ಯಧಿಕ ಮತ ಚಲಾಯಿಸುವ ಮೂಲಕ ಮುಂಚೂಣಿಯಲ್ಲಿರುವ ಸುಳ್ಯ ವಿಧಾನಸಭಾ ಕ್ಷೇತ್ರ ಈ ಬಾರಿಯೂ ಅದನ್ನು ಕಾಯ್ದುಕೊಂಡಿದೆ. ಅತಿ ಕಡಿಮೆ ಮತದಾನ ಮಂಗಳೂರು ದಕ್ಷಿಣದಲ್ಲಿ ದಾಖಲಾಗಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.81.30, ಮೂಡುಬಿದಿರೆ ಶೇ.76.51, ಮಂಗಳೂರು ಉತ್ತರ ಶೇ.73.78, ಮಂಗಳೂರು ದಕ್ಷಿಣ ಶೇ. 67.17, ಮಂಗಳೂರು ಶೇ.78.36,ಬಂಟ್ವಾಳ ಶೇ. 81.28, ಪುತ್ತೂರು ಶೇ. 81.10 ಮತ್ತು ಸುಳ್ಯದಲ್ಲಿ ಅತ್ಯಧಿಕ ಶೇ. 83.01 ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 2,32,817 ಮತದಾರರ ಪೈಕಿ 1,89,289 ಮಂದಿ ಮತ ಚಲಾಯಿಸಿದ್ದಾರೆ. ಮೂಡಬಿದಿರೆ 2,10,125 ಮತದಾರರ ಪೈಕಿ 16,07,767, ಮಂಗಳೂರು ಉತ್ತರದಲ್ಲಿ 2,55,946 ಮತದಾರರ ಪೈಕಿ 1,88,825, ಮಂಗಳೂರು ದಕ್ಷಿಣ 2,52,583 ಮತದಾರರ ಪೈಕಿ 1,69,669, ಮಂಗಳೂರು ಕ್ಷೇತ್ರದಲ್ಲಿ 2,10,093 ಮತದಾರರ ಪೈಕಿ 1,64,637, ಬಂಟ್ವಾಳದಲ್ಲಿ 2,30,511 ಮತದಾರರ ಪೈಕಿ 1,87,361, ಪುತ್ತೂರು 2,16,675 ಮತದಾರರ ಪೈಕಿ 1,75,731 ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 2,08,853 ಮತದಾರರ ಪೈಕಿ 1,73, 374 ಮತದಾರರು ಮತ ಚಲಾಯಿಸಿದ್ದಾರೆ.ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರದ್ದೇ ಪ್ರಾಬಲ್ಯ:

ಬೆಳ್ತಂಗಡಿಯಲ್ಲಿ 93,736 ಪುರುಷರು ಹಾಗೂ 95,553 ಮಹಿಳೆಯರು ಮತ ಚಲಾಯಿಸಿದ್ದಾರೆ. ಮೂಡುಬಿದಿರೆಯಲ್ಲಿ 76,331 ಪುರುಷ ಹಾಗೂ 84,433 ಮಹಿಳೆಯರು ಮತ್ತು ಮೂವರು ಇತರೆ, ಮಂಗಳೂರು ಉತ್ತರದಲ್ಲಿ 90,084 ಪುರುಷ ಹಾಗೂ 98,738 ಮಹಿಳೆ, ಮೂವರು ಇತರೆ, ಮಂಗಳೂರು ದಕ್ಷಿಣದಲ್ಲಿ 80,358 ಪುರುಷ, 89,300 ಮಹಿಳೆ, 11 ಇತರೆ, ಮಂಗಳೂರು ಕ್ಷೇತ್ರದಲ್ಲಿ 78,634 ಪುರುಷ, 86,001 ಮಹಿಳೆ, ಇಬ್ಬರು ಇತರೆ, ಬಂಟ್ವಾಳದಲ್ಲಿ 90,954 ಪುರುಷ, 96,407 ಮಹಿಳೆ, ಪುತ್ತೂರಲ್ಲಿ 85,912 ಪುರುಷ, 89,819 ಮಹಿಳೆ, ಸುಳ್ಯದಲ್ಲಿ 85,794 ಪುರುಷ ಹಾಗೂ 87,580 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಶೇ.96.28 ಅಂಚೆ ಮತ:

ಈ ಬಾರಿ ಒಟ್ಟು 8,867 ಅಂಚೆ ಮತಗಳ ಪೈಕಿ 8,537 ಮತಗಳು ಚಲಾವಣೆಯಾಗಿದ್ದು, ಶೇ.96.28 ಮತ ದಾಖಲಾಗಿದೆ.

85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಲ್ಲಿ 6,053 ಮಂದಿಯಲ್ಲಿ 5,878 ಮಂದಿ(ಶೇ.97.11) ಮತ ಚಲಾಯಿಸಿದ್ದಾರೆ. ಇವರ ಮನೆಗೆ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ತೆರಳಿ ಮತದಾನ ಮಾಡಿಸಿದ್ದಾರೆ. ಅಂಗವಿಕಲತೆಗೆ ಒಳಗಾದ 1,957 ಮಂದಿಯಲ್ಲಿ 1,929 ಮಂದಿ(ಶೇ.98.57) ಮತ ಚಲಾಯಿಸಿದ್ದಾರೆ. ಅಗತ್ಯ ಸೇವೆಯ 182 ಮಂದಿಯಲ್ಲಿ 124 ಮಂದಿ(ಶೇ.68.13) ಮತ ಚಲಾಯಿಸಿದ್ದಾರೆ. ಕೇರಳದಲ್ಲಿ ಕಾರ್ಯನಿರ್ವಹಿಸುವ ದ.ಕ. ಮೂಲದ ಸರ್ಕಾರಿ ನೌಕರರ ಪೈಕಿ 26ರಲ್ಲಿ 26 ಮಂದಿಯೂ ಮತ ಚಲಾಯಿಸಿ ಶೇ.ನೂರು ಮತ ದಾಖಲಾಗಿದೆ. ಬೇರೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದ.ಕ. ಮೂಲದ 649 ನೌಕರರಲ್ಲಿ 580 ಮಂದಿ(ಶೇ.89.37) ಮತ ಚಲಾಯಿಸಿದ್ದಾರೆ.

ಯಾರಿಗೆ ಗೆಲವು? ಸಾಗಿದೆ ಚರ್ಚೆದ.ಕ.ದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ. ಇನ್ನೇನಿದ್ದಲೂ ಫಲಿತಾಂಶದತ್ತ ಚಿತ್ತ. ಚುನಾವಣೆ ಮುಗಿಯುತ್ತಿದ್ದಂತೆ ಸೋಲು ಗೆಲುವಿನ ಲೆಕ್ಕಾಚಾರ ಕೂಡ ಶುರುವಾಗಿದೆ. ದ.ಕ. ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 9 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ ನೇರ ಪೈಪೋಟಿ ಕಂಡುಬಂದಿದೆ. ಆದ್ದರಿಂದ ಕ್ಯಾ.ಬ್ರಿಜೇಶ್‌ ಚೌಟ ಹಾಗೂ ಪದ್ಮರಾಜ್‌ ಆರ್‌. ಪೂಜಾರಿ ನಡುವೆ ಯಾರಿಗೆ ಗೆಲುವಾಗಬಹುದು ಎಂಬ ಬಿರುಸಿನ ಚರ್ಚೆ ನಡೆಯುತ್ತಿದೆ. ಎನ್‌ಐಟಿಕೆ ಸ್ಟ್ರಾಂಗ್‌ ರೂಮಲ್ಲಿ ಅಭ್ಯರ್ಥಿಗಳ ಭವಿಷ್ಯ!ದ.ಕ. ಲೋಕಸಭಾ ಕ್ಷೇತ್ರದ ಚುನಾವಣೆಯ ಮತಪೆಟ್ಟಿಗೆಗಳನ್ನು ಸುರತ್ಕಲ್‌ ಎನ್‌ಐಟಿಕೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಭದ್ರತಾ ಕೊಠಡಿಯ ಸುತ್ತಮುತ್ತ ಬಿಗು ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಜೂನ್‌ 4 ರಂದು ಮತಗಳ ಎಣಿಕೆ ನಡೆಯಲಿದೆ. ಅಲ್ಲಿಯವರೆಗೆ ಭದ್ರತಾ ಕೊಠಡಿಗಳಿಗೆ ಸಿಎಆರ್‌ ವಿಭಾಗದ ಡಿಸಿಪಿ ಸಿದ್ದನಗೌಡ ಪಾಟೀಲ್‌ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಭದ್ರತಾ ಕೊಠಡಿಗೆ ಮೂರು ಪಾಳಿಯಲ್ಲಿ ಭದ್ರತೆ ಒದಗಿಸಲಾಗಿದೆ. ಪ್ರತೀ ಪಾಳಿಯಲ್ಲಿ 40 ಮಂದಿ ಸಿವಿಲ್‌ ಪೊಲೀಸರು, 40 ಸಶಸ್ತ್ರ ರಾಜ್ಯ ಮೀಸಲು ಪೊಲೀಸ್‌ ಪಡೆಯ ಪೊಲೀಸರು ಕಾವಲು ಕಾಯಲಿದ್ದಾರೆ. ಅಲ್ಲದೆ ಭದ್ರತಾ ಕೊಠಡಿಯ ಸುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.